ADVERTISEMENT

ರಸ್ತೆಗಳಿಗೆ ಹಸಿರು ಹೊದಿಕೆ ಹೊಚ್ಚಿ: ಅರಣ್ಯ ಇಲಾಖೆಗೆ ಖಂಡ್ರೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:01 IST
Last Updated 4 ಜನವರಿ 2026, 7:01 IST
ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಈಶ್ವರ ಖಂಡ್ರೆ ಇಲಾಖೆಯ ನರ್ಸರಿ ವೀಕ್ಷಿಸಿದರು
ಚಿಕ್ಕಬಳ್ಳಾಪುರದಲ್ಲಿ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಈಶ್ವರ ಖಂಡ್ರೆ ಇಲಾಖೆಯ ನರ್ಸರಿ ವೀಕ್ಷಿಸಿದರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ, ಗ್ರಾಮೀಣ ರಸ್ತೆ ಸೇರಿ ಅಂದಾಜು 4 ಸಾವಿರ ಕಿಲೋ ಮೀಟರ್ ರಸ್ತೆ ಇದೆ. ಈ ರಸ್ತೆಗಳ ಎರಡೂ ಬದಿ ಎತ್ತರದ ಸಸಿಗಳನ್ನು ನೆಟ್ಟು ಪೋಷಿಸಿ ಹಸಿರು ಹೊದಿಕೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಭೂಮಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೆ ಪರಿಶೀಲಿಸಬೇಕು. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದ ಪ್ರಸಿದ್ಧ ಚಾರಣ ತಾಣಗಳಲ್ಲಿ ಒಂದಾಗಿರುವ ಸ್ಕಂದಗಿರಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಬೇಕು. ಇಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ನಿಯಮ ಪಾಲಿಸಲು ಕಟ್ಟೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಸಂಸ್ಕರಣೆ ಮಾಡದ ತ್ಯಾಜ್ಯವನ್ನು ನದಿ, ಕೆರೆ ಸೇರಿದಂತೆ ಜಲ ಮೂಲಗಳಿಗೆ ಹರಿಸುತ್ತಿದ್ದರೆ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು. ಈ ಬಗ್ಗೆ ಕ್ರಮವಹಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.

ಜಿಲ್ಲೆಯಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಆಗದಂತೆ ನಿಯಮಿತವಾಗಿ ಪರೀಕ್ಷೆ ನಡೆಸಬೇಕು ಎಂದು ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಗತಿ ಪರಿಶೀಲನೆ

ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನಗರದ ಅರಣ್ಯ ಇಲಾಖೆಯ ಭವನದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಜಿಲ್ಲೆಯಲ್ಲಿನ ಇಲಾಖೆಯ ಪ್ರಗತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸಚಿವರು ನರ್ಸರಿ ವೀಕ್ಷಿಸಿ ಅಲ್ಲಿ ಸಸಿ ನೆಟ್ಟರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.