ADVERTISEMENT

ಪಡಿತರ ಅಕ್ಕಿ ದುರುಪಯೋಗ ಆಗದಿರಲಿ: ಶಾಸಕ ವಿ. ಮುನಿಯಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 2:29 IST
Last Updated 16 ಫೆಬ್ರುವರಿ 2021, 2:29 IST
ಶಿಡ್ಲಘಟ್ಟದಲ್ಲಿ ಶಾಸಕ ವಿ.ಮುನಿಯಪ್ಪ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೆಡಿಪಿ ಸಭೆ ನಡೆಯಿತು
ಶಿಡ್ಲಘಟ್ಟದಲ್ಲಿ ಶಾಸಕ ವಿ.ಮುನಿಯಪ್ಪ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೆಡಿಪಿ ಸಭೆ ನಡೆಯಿತು   

ಶಿಡ್ಲಘಟ್ಟ: ‘ಪಡಿತರ ಅಕ್ಕಿಯ ದುರುಪಯೋಗದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ಪಡಿತರ ವಿತರಕರಿಂದ ಅಕ್ಕಿಯ ದುರ್ಬಳಕೆ ಹಾಗೂ ಕಳ್ಳತನದಂತಹ ಪ್ರಕರಣಗಳು ಕಂಡುಬಂದಲ್ಲಿ ಪಡಿತರ ವಿತರಕರು ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ’ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

‘ಈಗಾಗಲೇ 1.2 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರ ಪಡಿತರ ಚೀಟಿ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಮಾರ್ಚ್ ಅಂತ್ಯದೊಳಗೆ ಅಂತಹವರು ಸ್ವಯಂ ಪ್ರೇರಿತರಾಗಿ ಪಡಿತರ ಚೀಟಿ ವಾಪಸ್ಸು ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗುವ ಪಡಿತರ ಅಕ್ಕಿಯ ದುರುಪಯೋಗದ ಕುರಿತು ಆರೋಪಗಳು ಕೇಳಿ ಬರುತ್ತಿದ್ದು, ಪಡಿತರ ವಿತರಿಸುವ ಅಂಗಡಿಗಳಲ್ಲಿ, ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪಡಿತರ ಅಕ್ಕಿ ದುರ್ಬಳಕೆಯನ್ನು ತಡೆಯಬೇಕು’ ಎಂದರು.

ನಗರದ ಹೊರವಲಯದ ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳು ಕೆಟ್ಟು ತಿಂಗಳುಗಳು ಕಳೆದರೂ ದುರಸ್ತಿ ಪಡಿಸಿಲ್ಲ ಕೂಡಲೇ ದುರಸ್ತಿಗೊಳಿಸುವಂತೆ ನಗರಸಭೆ ಸೇರಿದಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಬಸ್ ನಿಲ್ದಾಣದಿಂದ ರೈಲು ನಿಲ್ದಾಣದವರೆಗೂ ರಸ್ತೆಯ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದರು.

ಎಲ್ಲಾ ಇಲಾಖೆಗಳಿಂದ ಸರ್ಕಾರದ ಯೋಜನೆಗಳು ಅಥವಾ ಕಾಮಗಾರಿಗಳನ್ನು ಜಾರಿಗೊಳಿಸುವ ಮುನ್ನ ನಮ್ಮ ಗಮನಕ್ಕೆ ತರುವ ಜೊತೆಗೆ ಸಕಾಲದಲ್ಲಿ ಅನುದಾನ ಬಳಸಿಕೊಂಡು ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಕೆ.ರಾಜಶೇಖರ್, ಇಓ ಚಂದ್ರಕಾಂತ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.