
ಶಿಡ್ಲಘಟ್ಟ: ಇಲ್ಲಿನ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ‘ಆರೋಹಣ– ವಿಜ್ಞಾನ ಮತ್ತು ಕುತೂಹಲದೊಂದಿಗೆ ಅಭ್ಯುದಯ’ ಅಡಿ ಮೂರು ದಿನಗಳ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಪದವಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಯು ಸರ್ಕಾರಿ ಉದ್ಯೋಗ ಸಿಗದಿದ್ದರೂ ಬದುಕನ್ನು ಕಟ್ಟಿಕೊಳ್ಳಬಲ್ಲ ಆತ್ಮವಿಶ್ವಾಸ, ಕೌಶಲ್ಯತೆ, ಜ್ಞಾನ ಲಭಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು’ ಎಂದರು.
ಮಕ್ಕಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು, ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ಮನಸ್ಸು ಶುದ್ಧ ಬೆಣ್ಣೆಯಂತಹದ್ದು. ಜೇಡಿ ಮಣ್ಣನ್ನು ಸುಂದರ ಆಕಾರವಾಗಿ ರೂಪಿಸುವಂತೆ, ಶಿಕ್ಷಕರು ಉತ್ತಮ ವಿಚಾರ, ಸ್ವಯಂ ಅಭಿವ್ಯಕ್ತಿ, ಆಲೋಚನಾ ಕ್ರಮ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಎಂದು ಸಲಹೆ ನೀಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ವಿಜ್ಞಾನ ಎಂಬುದು ಜ್ಞಾನ ಕೊಡುವ ಪ್ರಯೋಗ ಶಾಲೆ. ಈ ಶಾಲೆಯಲ್ಲಿ ಕಲಿತವರು ಎಂದಿಗೂ ಅಜ್ಞಾನ ಮತ್ತು ಮೌಢ್ಯತೆ ಹಿಂದೆ ಬಿದ್ದು, ಸಮಾಜದ ಅಧಃಪತನಕ್ಕೆ ತಳ್ಳುವ ಕೆಲಸ ಮಾಡುವುದಿಲ್ಲ ಎಂದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಶಿಕ್ಷಣವು ಅಂಕಗಳಿಗಿಂತ ಮೌಲ್ಯಗಳಿಂದ ನಿರ್ಧಾರವಾಗಬೇಕು. ವಿದ್ಯಾರ್ಥಿಗಳ ಬದುಕಿಗೆ ಜೀವನ ಕೌಶಲ್ಯವು ಮುಖ್ಯವಾದುದು ಎಂದು ತಿಳಿಸಿದರು.
ಡಾಲ್ಫಿನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಡಾ. ಸುದರ್ಶನ್, ಡಾ. ಶ್ರೀನಿವಾಸಮೂರ್ತಿ ಎನ್, ಆರಿಫ್ ಅಹಮದ್, ಮುನಿಕೃಷ್ಣಪ್ಪ, ಮುನಿಶಾಮಪ್ಪ, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಹಾಜರಿದ್ದರು.
- 150ಕ್ಕೂ ಹೆಚ್ಚು ಮಾದರಿಗಳು
ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ 150ಕ್ಕೂ ಹೆಚ್ಚು ಮಾದರಿಗಳು ಮೊಬೈಲ್ ಪ್ಲಾನೆಟೋರಿಯಂ ವಿದ್ಯಾರ್ಥಿಗಳ ಕುಂಚದಿಂದ ಅರಳಿದ ಕಲಾಕೃತಿಗಳು ಆಯುರ್ ಹಬ್ ಎಂಬ ಆರೋಗ್ಯವಂತ ಜೀವನಕ್ಕೆ ಬಳಸಬಹುದಾದ ಸೊಪ್ಪು ತರಕಾರಿ ಹಣ್ಣುಗಳು ಮತ್ತು ಅವುಗಳ ಔಷಧೀಯ ಗುಣಗಳ ಪ್ರದರ್ಶನವಾಯಿತು. ಅಂಚೆ ಚೀಟಿ ಸಂಗ್ರಹಕಾರ ವಿನೋದ್ ಪುಠಾಣಿಕರ್ ಅವರು ಭಾರತೀಯ ಪ್ರಾಚೀನ ಮತ್ತು ಗಣರಾಜ್ಯದ ನಾಣ್ಯಗಳು ‘ಅಂಚೆ ಚೀಟಿಯಲ್ಲಿ ಕರ್ನಾಟಕ ದರ್ಶನ’ ಎಂಬ ಅಂಚೆ ಚೀಟಿಗಳು ವಿಶೇಷ ವ್ಯಕ್ತಿಗಳ ಪರಿಚಯವುಳ್ಳ ವ್ಯಕ್ತಿ ಚಿತ್ರಗಳನ್ನು ಪ್ರದರ್ಶಿಸಿದರು. ನಿವೃತ್ತ ಮುಖ್ಯ ಶಿಕ್ಷಕ ನಂದೀಶ್ ಅವರಿಂದ ಪುರಾತನ ನಾಣ್ಯಗಳ ಮತ್ತು ವಿವಿಧ ದೇಶಗಳ ನೋಟುಗಳ ಮತ್ತು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.