ADVERTISEMENT

ಚಿಂತಾಮಣಿ | ಮುಂಗಾರು ಏರಿಳಿತ: ಗುರಿ ಮೀರಿ ರಾಗಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:08 IST
Last Updated 8 ಸೆಪ್ಟೆಂಬರ್ 2025, 6:08 IST
ಚಿಂತಾಮಣಿ ತಾಲ್ಲೂಕಿನಲ್ಲಿ ನಳನಳಿಸುತ್ತಿರುವ ತೊಗರಿ ಬೆಳೆ
ಚಿಂತಾಮಣಿ ತಾಲ್ಲೂಕಿನಲ್ಲಿ ನಳನಳಿಸುತ್ತಿರುವ ತೊಗರಿ ಬೆಳೆ   

ಚಿಂತಾಮಣಿ: ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲೂ ಮಳೆ ಏರುಪೇರಾಗುತ್ತಿದ್ದು ರೈತರನ್ನು ಆತಂಕಕ್ಕೆ ಈಡುಮಾಡಿದೆ. ಕೃಷಿ ಚಟುವಟಿಕೆ, ಮಳೆ-ಬೆಳೆ, ಬಿತ್ತನೆ ಕುರಿತು ಚರ್ಚೆ ನಡೆಯುತ್ತಿದೆ.

ಮೇಯಲ್ಲಿ ಅಕಾಲಿಕ ಮಳೆ ಸುರಿಯಿತು. ಜೂನ್ ಮತ್ತು ಜುಲೈಯಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟು ಮತ್ತೊಂದು ವರ್ಷ ಬರಗಾಲದ ಆತಂಕ ಉಂಟು ಮಾಡಿತ್ತು. ಬಿತ್ತನೆ ಸಹ ಕುಂಠಿತಗೊಂಡಿದ್ದು ತೊಗರಿ ಮತ್ತು ನೆಲಗಡಲೆ ಬಿತ್ತನೆ ಕಡಿಮೆ ಆಗಿತ್ತು. ಮತ್ತೆ ಆಗಸ್ಟ್‌ನಲ್ಲಿ ಉತ್ತಮ ಮಳೆ ಆಗಿದ್ದು ಗುರಿಮೀರಿ ರಾಗಿ ಬಿತ್ತನೆ ಆಗಿದೆ.

ಆಗಸ್ಟ್ ತಿಂಗಳಲ್ಲಿ 102.72 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು 130.45 ಮಿ.ಮೀ ಮಳೆ ಆಗಿದೆ. ಜೂನ್‌ನಿಂದ ಆಗಸ್ಟ್ ಕೊನೆಯವರೆಗೆ 249.56 ಮೀ.ಮೀ ವಾಡಿಕೆ ಮಳೆಯಾಗಬೇಕು. ವಾಸ್ತವಾಗಿ ಮಳೆಯಾಗಿರುವುದು 204.56 ಮೀ.ಮೀ ಮಾತ್ರ. ಜನವರಿಯಿಂದ ಆಗಸ್ಟ್ ಕೊನೆಯವರೆಗೆ 313.66 ಮಿ.ಮೀ ವಾಡಿಕೆ ಮಳೆ ಆಗಬೇಕಿದ್ದು 435.39 ಮಿ.ಮೀ ಮಳೆ ಆಗಿದೆ. ಈ ಮಳೆ ಮೇಯಲ್ಲಿ ಸುರಿದ ಅಕಾಲಿಕ ಮಳೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಇದುವರೆಗೆ ಮಳೆ ಆಗದೆ ಬೆಳೆ ಒಣಗುತ್ತಿವೆ.

ADVERTISEMENT

ತಾಲ್ಲೂಕಿನಲ್ಲಿ 27,626 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೆ 22,829 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು ಶೇ 82.6 ರಷ್ಟು ಸಾಧನೆಯಾಗಿದೆ.

ಜೂನ್ ಜುಲೈನಲ್ಲಿ ಮಳೆಗಾಗಿ ಆಕಾಶದ ಕಡೆ ದಿಟ್ಟಿಸಿ ಸುಸ್ತಾಗಿದ್ದ ಜನರು ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದರು. ತೊಗರಿ ಮತ್ತು ನೆಲಗಡಲೆ ಬಿತ್ತನೆ ಕುಂಠಿತವಾಗಿತ್ತು. ತೊಗರಿ 860 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಿದ್ದು ಕೇವಲ 309 ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ನೆಲಗಡಲೆ 4,140 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು 1,306 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಆಗಸ್ಟ್‌ನಲ್ಲಿ ಉತ್ತಮ ಮಳೆ ಅದರೂ ತೊಗರಿ ಮತ್ತು ಶೇಂಗಾ ಬಿತ್ತನೆಯ ಅವಧಿ ಮುಗಿದಿತ್ತು. ರಾಗಿ 15,090 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು 15,647 ಹೆಕ್ಟೇರ್ ಬಿತ್ತನೆ ಆಗಿದೆ. ಮಳೆ ಆದರೆ ಅಲ್ಪಾವಧಿ ತಳಿಯ ಬಿತ್ತನೆಗೆ ಇನ್ನೂ ಅವಕಾಶವಿದೆ. ಹುರುಳಿ, ಸಿರಿಧಾನ್ಯಗಳ ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಲ್ಲೂಕಿನಲ್ಲಿ ರಾಗಿ, ನೆಲಗಡಲೆ, ತೊಗರಿ ಪ್ರಮುಖ ಬೆಳೆಗಳಾಗಿವೆ. ರಾಗಿ, ಜೋಳ, ಭತ್ತ ಸೇರಿದಂತೆ ಏಕದಳ ಧಾನ್ಯಗಳನ್ನು 21,166 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.

ನೆಲಗಡಲೆ 9,818 ಹೆಕ್ಟೇರ್‌ ಗುರಿಗೆ 7,816 ಹೆಕ್ಟೇರ್ ಬಿತ್ತನೆಯಾಗಿದೆ. ಮುಸುಕಿನ ಜೋಳ 4,299 ಹೆಕ್ಟೇರ್‌ ಗುರಿಗೆ 2,728 ಹೆಕ್ಟೇರ್, ತೊಗರಿ, ಅವರೆ ಅಲಸಂದಿ ಮತ್ತಿತರ ದ್ವಿದಳ ಧಾನ್ಯಗಳನ್ನು 2237 ಹೆಕ್ಟೇರ್ ಬಿತ್ತನೆ ಗುರಿಗೆ 1,244 ಹೆಕ್ಟೇರ್ ಬಿತ್ತನೆಯಾಗಿದೆ. ನೆಲಗಡಲೆ, ಸೂರ್ಯಕಾಂತಿ, ಸಾಸಿವೆ ಮುಂತಾದ ಎಣ್ಣೆಕಾಳುಗಳನ್ನು 4,193 ಹೆಕ್ಟೇರ್ ಗುರಿ ಹೊಂದಿದ್ದು ಕೇವಲ 1,306 ಹೆಕ್ಟೇರ್ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ಬಿತ್ತನೆ ಬೀಜಗಳ ಸರಬರಾಜು: ರಾಗಿ 233.20 ಕ್ವಿಂಟಲ್ ಸರಬರಾಜಾಗಿದ್ದು 184.10 ಕ್ವಿಂಟಲ್ ವಿತರಣೆ ಆಗಿದೆ. ತೊಗರಿ 35.26 ಕ್ವಿಂಟಲ್ ಪೂರೈಕೆಯಾಗಿದ್ದು, 23.44 ಕ್ವಿಂಟಲ್ ವಿತರಣೆ, ಮುಸುಕಿನ ಜೋಳ 52.52 ಕ್ವಿಂಟಲ್ ಸರಬರಾಜಾಗಿದ್ದು 36.58 ಕ್ವಿಂಟಲ್ ವಿತರಣೆ, ನೆಲಗಡಲೆ 264.30 ಕ್ವಿಂಟಲ್ ಸರಬರಾಜಾಗಿದ್ದು 94.15 ಕ್ವಿಂಟಲ್ ವಿತರಣೆ ಆಗಿದೆ. ಒಟ್ಟಾರೆ ತಾಲ್ಲೂಕಿಗೆ 590.07 ಕ್ವಿಂಟಲ್ ಬಿತ್ತನೆ ಬೀಜಗಳ ಪೂರೈಕೆ ಆಗಿದ್ದು 341.32ಕ್ವಿಂಟಲ್ ವಿತರಣೆ ಆಗಿದೆ. 248.75 ಕ್ವಿಂಟಲ್ ಸಂಗ್ರಹ ಉಳಿಕೆ ಇದೆ ಎಂದು ಕೃಷಿ ಅಧಿಕಾರಿ ಪ್ರಸನ್ನ ತಿಳಿಸಿದ್ದಾರೆ.

ತಡವಾಗಿ ಬಿತ್ತನೆಯಾಗಿರುವ ಪ್ರದೇಶದಲ್ಲಿ ಗುಂಟಿವೆ ಹಾಕುವುದು, ಖಾಲಿ ಜಾಗಗಳಲ್ಲಿ ಪೈರು ನಾಟಿ ಮಾಡುವುದು, ಮುಂದಿನ ಬಿತ್ತನೆಯಲ್ಲಿ ಕಳೆ ಕೀಳುವ ಕೆಲಸಗಳಲ್ಲಿ ರೈತರು ನಿರತರಾಗಿರುವುದು ಕಂಡುಬರುತ್ತದೆ.

ಔಷಧಿಗಳು, ರಸಗೊಬ್ಬರ ಸೇರಿದಂತೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಬಿತ್ತನೆ ಅವಧಿ ಮುಗಿದುಹೋಗಿದೆ. ರಸಗೊಬ್ಬರ ದಾಸ್ತಾನು ಇದೆ. ಇದುವರೆಗೆ ರೋಗರುಜಿನುಗಳ ಬಗ್ಗೆ ದೂರು ಬಂದಿಲ್ಲ. ರೈತರು ಬೆಳೆಗಳಿಗೆ ರಸಗೊಬ್ಬರ ಉಪಯೋಗಿಸಬೇಕು ಎಂದು ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ ತಿಳಿಸಿದರು.

ಕುಡಿ ಚಿವುಟಲು ಸಲಹೆ: ಕಡಲೆಕಾಯಿ ಮತ್ತು ತೊಗರಿ ಬೆಳವಣಿಗೆಯ ಹಂತದಲ್ಲಿದ್ದು ಮಳೆಯ ಅವಶ್ಯಕತೆ ಇದೆ. ಕಡಲೆಕಾಯಿ ಕಾಯಿ ಕಟ್ಟುತ್ತಿದೆ. ತೊಗರಿ ಮೊಗ್ಗು ಹೂ ಬರುತ್ತಿದೆ. ತೊಗರಿ ಬಿತ್ತನೆಯಾಗಿ 50-60 ದಿನಗಳಾಗಿದ್ದರೆ ಕುಡಿ ಚಿವುಟಬೇಕು. ಅನೇಕ ಕುಡಿಗಳು ಹೊಡೆದು ಶೇ 15-20 ರಷ್ಟು ಇಳುವರಿ ಹೆಚ್ಚಾಗುತ್ತದೆ ಎಂದು ಅಮರನಾರಾಯಣರೆಡ್ಡಿ ರೈತರಿಗೆ ಸಲಹೆ ನೀಡಿದ್ದಾರೆ.

ನೆಲಗಡಲೆ ಬಿತ್ತನೆ ಕಡಿಮೆ ಮುಂಗಾರ ಆರಂಭದಲ್ಲಿ ಮಳೆ ಕೊರತೆ ಆಗಿದ್ದರಿಂದ ತೊಗರಿ ಮತ್ತು ನೆಲಗಡಲೆ ಬಿತ್ತನೆ ಕಡಿಮೆ ಆಗಿದೆ. ರಾಗಿ ಗುರಿ ಮೀರಿ ಬಿತ್ತನೆ ಆಗಿದೆ. ಬೆಳೆಗಳು ಚೆನ್ನಾಗಿದ್ದರೂ ಕೊನೆಯವರೆಗೂ ಮಳೆ ಆಗಬೇಕಿದೆ. ಸದ್ಯಕ್ಕೆ ಯಾವುದೇ ರೋಗರುಜಿನುಗಳು ಇಲ್ಲ.
ಅಮರನಾರಾಯಣ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ
ರೈತರಿಗೆ ನಷ್ಟ ಪ್ರಕೃತಿಯ ಮುನಿಸಿನಿಂದ ರೈತರು ತೊಂದರೆ ಅನುಭವಿಸುತ್ತಾರೆ. ಒಳ್ಳೆಯ ಮಳೆಯಾಗಿ ಬೆಳೆ ಬೆಳೆದರೂ ಗೊಂದಲದ ಮಾರುಕಟ್ಟೆ ವ್ಯವಹಾರದಿಂದ ರೈತರು ನಷ್ಟ ಹೊಂದುತ್ತಾರೆ. ಬೆಳೆದರೂ ಕಷ್ಟ ಬೆಳೆಯದಿದ್ದರೂ ಕಷ್ಟ ಎನ್ನುವಂತಾಗಿದೆ.
ರಮಣಾರೆಡ್ಡಿ, ರೈತ
ಸಂಕಷ್ಟದ ಸೂಚನೆ ಬೆಳೆಗೆ ಅಗತ್ಯವಾದ ಉತ್ತಮವಾದ ಮಳೆ ಬಿದ್ದಿದೆ. ಆದರೆ ಇಷ್ಟಕ್ಕೆ ಸಂತೋಷಪಡುವ ಹಾಗಿಲ್ಲ. ತಾಲ್ಲೂಕಿನಲ್ಲಿ ತಡವಾಗಿ ಬಿತ್ತನೆಯಾಗಿದ್ದು ಇನ್ನೂ ಮಳೆ ಅಗತ್ಯವಿದೆ. ಆದರೆ ಕೆರೆ ಕುಂಟೆಗಳು ಭರ್ತಿಯಾಗದಿರುವುದು ಮುಂಬರುವ ಸಂಕಷ್ಟದ ಸೂಚನೆಯಾಗಿದೆ.
ಶಿವಾನಂದ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.