ADVERTISEMENT

ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಮುಂದಾದ ನಗರಸಭೆ

ನಗರದಲ್ಲಿ ಆಟೊ ಪ್ರಚಾರದ ಮೂಲಕ ಜಾಗೃತಿ, ಹೋಟೆಲ್‌ ಮಾಲೀಕರಿಗೆ ಅರಿವು ಮೂಡಿಸಲು ಸಭೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 9:31 IST
Last Updated 17 ಮಾರ್ಚ್ 2020, 9:31 IST
ನಗರಸಭೆಯಲ್ಲಿ ಹೋಟೆಲ್‌ ಮಾಲೀಕರಿಗೆ ಸಭೆ ಮೂಲಕ ಅರಿವು ಮೂಡಿಸಲಾಯಿತು.
ನಗರಸಭೆಯಲ್ಲಿ ಹೋಟೆಲ್‌ ಮಾಲೀಕರಿಗೆ ಸಭೆ ಮೂಲಕ ಅರಿವು ಮೂಡಿಸಲಾಯಿತು.   

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ನಗರದಲ್ಲಿ ಬೀದಿ ವ್ಯಾಪಾರಿಗಳಿಗೆ, ವರ್ತಕರಿಗೆ ಸ್ವಚ್ಛತೆ ಮತ್ತು ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ನಗರದ ಹೋಟೆಲ್‌ಗಳ ಮಾಲೀಕರಿಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸೋಮವಾರ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತ ಲೋಹಿತ್‌, ‘ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗದಿರುವುದು ಸಮಾಧಾನದ ವಿಷಯ. ಮಾರಣಾಂತಿಕ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದ್ದರಿಂದ, ಹೋಟೆಲ್‌, ಮಿಲ್ಟ್ರಿ ಹೋಟೆಲ್‌, ಬೀದಿ ವ್ಯಾಪಾರಿಗಳು, ತರಕಾರಿ ಮಾರುವವರು ಸ್ವಚ್ಛತೆ ಹೆಚ್ಚಿನ ಆದ್ಯತೆ ವಹಿಸಿ ರೋಗ ರುಜಿನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯೊಂದಿಗೆ ಕೈಜೋಡಿಸಬೇಕು’ ಎಂದು ತಿಳಿಸಿದರು.

‘ಪ್ರತಿಯೊಬ್ಬರೂ ತಮ್ಮ ಮನೆ, ಮಳಿಗೆ, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೈಗಳನ್ನು ಸೋಪಿನಿಂದ ತೊಳೆಯುವುದರ ಜೊತೆಗೆ ಸೀನುವಾಗ ಕರವಸ್ತ್ರಗಳನ್ನು ತಪ್ಪದೇ ಬಳಬೇಕು. ಅಲ್ಲದೆ ಶೀತ, ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಗ್ರಾಹಕರಿಗೆ ಕೂಡ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತಲೂ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಉತ್ತಮ. ಆ ದೃಷ್ಟಿಯಲ್ಲಿ ನಗರ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ಭಯ ಬಿಟ್ಟು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ರೂಢಿಸಿಕೊಳ್ಳಬೇಕು. ಈಗಾಗಲೇ, ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭೆಯ ಕಸ ಸಂಗ್ರಹಿಸುವ ವಾಹನಗಳು, ಆಟೊಗಳ ಮೂಲಕ ಅರಿವಿನ ಪ್ರಚಾರ ಕಾರ್ಯ ನಡೆಸಿದ್ದೆವೆ. ಇಂತಹ ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರವೂ ಮುಖ್ಯ ಪಾತ್ರ ವಹಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.