
ಚಿಕ್ಕಬಳ್ಳಾಪುರ: ಚಿಂತಾಮಣಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹಿರಿಯ ಉಪನೋಂದಣಾಧಿಕಾರಿ ಆಗಿದ್ದ ವೇಳೆ ‘ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಫಲಕ ಅಳವಡಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಹಿರಿಯ ಉಪನೋಂದಣಾಧಿಕಾರಿ ನಾರಾಯಣಪ್ಪ ಅವರು ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿ ಬಂದಿದ್ದಾರೆ.
ಇದು ಚಿಕ್ಕಬಳ್ಳಾಪುರ ನಾಗರಿಕರಲ್ಲಿ ಸಂತಸ ಮತ್ತು ಚರ್ಚೆಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಕ್ರಿಯವಾಗಿರುವ ದಲ್ಲಾಳಿಗಳು ಮತ್ತು ಭೂಗಳ್ಳರ ಪಾಲಿಗೆ ನಾರಾಯಣಪ್ಪ ಅವರ ನಡೆ ಕಠಿಣವಾಗಲಿದೆ ಎನ್ನುವ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ.
ಸೋಮವಾರ ನಾರಾಯಣಪ್ಪ ಅವರು ಹಿರಿಯ ಉಪನೋಂದಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅದಾಗಲೇ ಕಚೇರಿಯಲ್ಲಿ ದೊಡ್ಡ ಅಕ್ಷರಗಳಲ್ಲಿ ‘ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಫಲಕ ಸಹ ಅಳವಡಿಸಿದ್ದಾರೆ.
‘ಆಡಂಬರಗಳಿಗಿಂತ ಸತ್ಯ ಸರಳತೆ ಲೇಸು. ಮೆರವಣಿಗೆಗಳಿಗಿಂತ ನಿತ್ಯಾನುಸರಣೆ ಲೇಸು. ಸ್ವಾರ್ಥದ ಬದುಕಿಗಿಂತ ಸಾರ್ಥಕದ ಬದುಕೇ ಲೇಸಾದರೆ ಸ್ವಾರ್ಥವನ್ನು ಮಿತವಾಗಿಸಿ ಸಮಾಜಕ್ಕೆ ಹಿತವಾಗೋಣ’.
ಲಂಚ ಬೇಡುವುದು ಪಡೆಯುವುದು ಅಪರಾಧ. ಭ್ರಷ್ಟತೆಯ ವರಿಸುವುದು ಮೆರೆಸುವುದು ದೇಶದ್ರೋಹ. ಪ್ರಾಮಾಣಿಕತೆಯ ಅಳವಡಿಕೆ ನಡವಳಿಕೆ ದೇಶಸೇವೆಯಾದರೆ ಪ್ರಾಮಾಣಿಕರು ನಾವಾಗಿ ದೇಶಸೇವೆಯಲ್ಲಿ ಭಾಗಿಯಾಗೋಣ.
ಪ್ರಾಮಾಣಿಕ ಸೇವೆಯೇ ನಿಜವಾದ ನಡವಳಿಕೆ. ‘ಲಂಚ ಸ್ವೀಕರಿಸುವುದಿಲ್ಲ’ ಭ್ರಷ್ಟಾಚಾರವನ್ನು ಬೆಂಬಲಿಸದಿರುವುದಕ್ಕೆ ತಮಗೆ ಧನ್ಯವಾದಗಳು’ ಎಂದು ತಾವು ಕುಳಿತುಕೊಳ್ಳುವ ಕುರ್ಚಿಯ ಹಿಂಭಾಗದಲ್ಲಿ ನಾರಾಯಣಪ್ಪ ಅವರು ಫಲಕ ಅಳವಡಿಸಿದ್ದಾರೆ. ಅಲ್ಲದೆ ಕಚೇರಿಯ ಎಲ್ಲೆಡೆ ಲೋಕಾಯುಕ್ತರ ದೂರವಾಣಿ ಸಂಖ್ಯೆಗಳನ್ನೂ ಅಳವಡಿಸಿದ್ದಾರೆ.
ಕಚೇರಿಯ ಅಲ್ಲಲ್ಲಿ ಯಾರಿಗೂ ಲಂಚ ನೀಡಬೇಕಾಗಿಲ್ಲ. ಕಚೇರಿಯ ಅಧಿಕಾರಿ, ಸಿಬ್ಬಂದಿ ಅಥವಾ ಅವರ ಪರವಾಗಿ ಯಾರಾದರೂ ಲಂಚ ಕೇಳಿದರೆ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲು ಕೋರಿದೆ. ಭ್ರಷ್ಟಾಚಾರವು ಭಯೋತ್ಪಾದನೆಗಿಂತ ಅಪಾಯಕಾರಿ. ದಯವಿಟ್ಟು ಭ್ರಷ್ಟಾಚಾರವನ್ನು ಬೆಂಬಲಿಸಬಾರದು ಎಂದು ವಿನಂತಿ.
ಪತ್ರ ಬರೆಯುವವರು ಪತ್ರ ಬರವಣಿಗೆಯ ಶುಲ್ಕ ಮಾತ್ರ ಪಡೆಯಬೇಕು. ಸಾರ್ವಜನಿಕರಿಂದ ಹೆಚ್ಚಿನ ಹಣ (ಲಂಚ) ನೀಡಲು ಒತ್ತಾಯಿಸಿದಲ್ಲಿ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿ ಎನ್ನುವ ಬರಹಗಳನ್ನು ಕಚೇರಿಯಲ್ಲಿ ಅಳವಡಿಸಲಾಗಿದೆ.
ಚಿಕ್ಕಬಳ್ಳಾಪುರ ಉಪನೋಂದಣಾಧಿಕಾರಿ ಕಚೇರಿಯು ದಲ್ಲಾಳಿಗಳು, ಭೂಗಳ್ಳರು ಸೇರಿದಂತೆ ಕೆಲವರ ‘ಅಡ್ಡೆ’ ಎನಿಸಿತ್ತು. ಇಲ್ಲಿನ ‘ವ್ಯವಹಾರ’ಗಳು ಸಾರ್ವಜನಿಕವಾಗಿ ಚರ್ಚೆಗಳು ಒಳಗಾಗಿದ್ದವು. ಆದರೆ ಎಲ್ಲವೂ ‘ಮಾಮೂಲಿ’ಯಲ್ಲಿ ನಡೆಯುತ್ತಿತ್ತು. ಆದರೆ ಈಗ ನಾರಾಯಣಪ್ಪ ಅವರ ಪ್ರವೇಶದ ಮೂಲಕ ಎಲ್ಲದಕ್ಕೂ ತಡೆ ಬೀಳಲಿದೆ ಎನ್ನುವ ಮಾತು ಜೋರಾಗಿದೆ.
ಹಾಡಿಹೊಗಳಿದ್ದ ಸಚಿವ: ಅ.6ರಂದು ನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕಾರ್, ನಾರಾಯಣಪ್ಪ ಅವರ ಕೆಲಸಗಳನ್ನು ಹೊಗಳಿದ್ದರು.‘
‘ನಾರಾಯಣಪ್ಪ ಅವರು ಬೇರೆ ಕಡೆ ವರ್ಗಾವಣೆ ಆಗಿದ್ದರು. ಆದರೆ ನಾನೇ ಕಂದಾಯ ಸಚಿವರ ಜೊತೆ ಮಾತುಕತೆ ನಡೆಸಿ ಅವರನ್ನು ಒಂದು ವರ್ಷ ಮತ್ತೆ ಚಿಂತಾಮಣಿಯಲ್ಲಿ ಉಳಿಸಿಕೊಂಡಿದ್ದೆ. ನಂತರ ಅವರಿಗೆ ಬಡ್ತಿ ದೊರೆಯಿತು. ಅವರು ವರ್ಗಾವಣೆಯಾದರು. ವರ್ಗಾವಣೆಯಾದ ತರುವಾಯ ಲಂಚ ಸ್ವೀಕರಿಸುವುದಿಲ್ಲ ಎನ್ನುವ ಫಲಕ ತೆಗೆಯಲಾಗಿದೆ. ಅಂದರೆ ಈಗ ಲಂಚ ಪಡೆಯುತ್ತೇವೆಯೇ ಎಂದು ಅರ್ಥವೇ ಎಂದು ಜಿಲ್ಲಾ ನೋಂದಣಾಧಿಕಾರಿಯನ್ನು ಸಚಿವರು ಸಭೆಯಲ್ಲಿ ಪ್ರಶ್ನಿಸಿದ್ದರು.
ಜಿಲ್ಲೆಯ ಎಲ್ಲ ಉಪನೋಂದಣಾಧಿಕಾರಿಗಳ ಕುರ್ಚಿಯ ಮೇಲ್ಭಾಗದಲ್ಲಿ ಲಂಚ ಪಡೆಯುವುದಿಲ್ಲ ಎಂದು ಫಲಕ ಹಾಕಬೇಕು ಎಂದೂ ಸೂಚಿಸಿದ್ದರು. ಇಷ್ಟೆಲ್ಲಾ ಚರ್ಚೆಯ ಕೇಂದ್ರ ಬಿಂದುವಾಗಿದ್ದು ನಾರಾಯಣಪ್ಪ.
‘ಹಣ ಕೇಳಿದರೆ ದೂರು ನೀಡಿ’
‘ಯಾರಾದರೂ ನನ್ನ ಹೆಸರು ಹೇಳಿ ಅಥವಾ ಅಧಿಕಾರಿಗಳಿಗೆ ಹಣ ಕೊಡಬೇಕು ಎಂದು ಹೆಚ್ಚು ಹಣ ಪಡೆದರೆ ಲೋಕಾಯುಕ್ತರಿಗೆ ದೂರು ನೀಡಿ ಇಲ್ಲವೆ ನನ್ನ ಸಂಪರ್ಕಿಸಿ’ ಎಂದು ನಾರಾಯಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚಿಂತಾಮಣಿಯಲ್ಲಿ ಇದ್ದಾಗ ನನ್ನ ಮೇಲೆ ಯಾವುದೇ ಒತ್ತಡವೂ ಬಂದಿರಲಿಲ್ಲ. ಇಲ್ಲಿಯೂ ಯಾವುದೇ ಒತ್ತಡ ಬಂದಿಲ್ಲ. ಕಾನೂನು ಬದ್ಧವಾಗಿ ಕೆಲಸ ಮಾಡುವೆ. ಪತ್ರ ಬರಹಗಾರರು ಸಹ ಅವರ ಶುಲ್ಕ ಪಡೆಯಬೇಕು. ಹೆಚ್ಚು ಹಣ ಪಡೆಯಬಾರದು. ಜನರು ನೇರವಾಗಿ ಬಂದು ಕೆಲಸ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.