ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಒಕ್ಕೂಟ ವ್ಯವಸ್ಥೆಗೆ ಮಾರಕ: ಶಿವಸುಂದರ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 2:55 IST
Last Updated 25 ನವೆಂಬರ್ 2021, 2:55 IST

ಬಾಗೇಪಲ್ಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸಾಮಾಜಿಕವಾಗಿ ಹಿಂದುಳಿದ ಸಮುದಾಯದವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿಸುವುದರ ಜತೆಗೆ, ಶಿಕ್ಷಣ ಮೊಟುಕುಗೊಳಿಸುವವರ ಸಂಖ್ಯೆ ಹಾಗೂ ಶಿಕ್ಷಕ-ಶಿಕ್ಷಕಿಯರು ಉದ್ಯೋಗಾವಕಾಶ ಕಳೆದುಕೊಳ್ಳುವ ಸಂಭವ ಹೆಚ್ಚಾಗಿದೆ ಎಂದು ಚಿಂತಕ, ಸಂಪನ್ಮೂಲ ವ್ಯಕ್ತಿ ಶಿವಸುಂದರ್ ಪ್ರತಿಪಾದಿಸಿದರು.

ಪಟ್ಟಣದ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತಾಲ್ಲೂಕು ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹೊಸ ರಾಷ್ಟ್ರೀಯ ಶಿಕ್ಷಣದ ಚರ್ಚಾಕೂಟದಲ್ಲಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಕೇಂದ್ರೀಕರಣ, ಕೇಸರೀಕರಣ ಹಾಗೂ ಖಾಸಗೀಕರಣಕ್ಕೆ ಒತ್ತು ನೀಡುವ ಕರಡು ಪ್ರತಿಗಳಾಗಿವೆ. ದೇಶದ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹಿಂಬಾಗಿಲಿನ ಮೂಲಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಾಡಲು ಹೊರಟಿರುವುದು ಪ್ರಜಾಸತ್ತಾತ್ಮಕ ಹಾಗೂ ಒಕ್ಕೂಟದ ವ್ಯವಸ್ಥೆಗೆ ಮಾರಕವಾಗಲಿದೆ. ಇದರ ವಿರುದ್ಧ ಸಮಾನ ಮನಸ್ಕರು ಸೇರಿದಂತೆ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಕ್ಕೂರಲಿನಿಂದ ಜನಾಂದೋಲನ ರೂಪಿಸಬೇಕಾಗಿದೆ
ಎಂದು ತಿಳಿಸಿದರು.

ADVERTISEMENT

ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರದ ಉಪನ್ಯಾಸಕ ವೆಂಕಟಶಿವಾರೆಡ್ಡಿ ಮಾತನಾಡಿ, ಪ್ರೌಢಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಗಣನೀಯವಾಗಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಶಿಕ್ಷಣದ ಗುಣಮಟ್ಟ, ಖಾಸಗೀಕರಣದಿಂದ ದುಬಾರಿ ಆಗುತ್ತಿರುವ ಶಿಕ್ಷಣದ ಪದ್ಧತಿ, ಶಿಕ್ಷಣದ ಕ್ಷೇತ್ರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಶಿಕ್ಷಣದ ಸಮಸ್ಯೆಗಳನ್ನು ಈಡೇರಿಸದ ಸರ್ಕಾರ ಹೊಸ ಶಿಕ್ಷಣ ಪದ್ಧತಿಯಿಂದ ಹೇಗೆ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಪ್ರಶ್ನಿಸಿದರು.

ಚಟುವಟಿಕೆ ಆಧಾರಿತ ಶಿಕ್ಷಣ ಎಂಬ ಹೆಸರಿನಲ್ಲಿ ಕ್ರಮಬದ್ಧವಾದ ಕಲಿಕೆಯನ್ನು ನಾಶಪಡಿಸುತ್ತಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಶಿಕ್ಷಣದ ಮಟ್ಟವನ್ನು ಕಡಿಮೆ ಮಾಡಿರುವುದರಿಂದ, ಇಂದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಾಗೂ ವಿಲೀನ ಪ್ರಕ್ರಿಯೆಗೆ ಮುಂದಾಗಿದೆ ಎಂದು ಖಂಡಿಸಿದರು.

ವಿಕಾಸ ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪಿ.ಎನ್.ಶಿವಣ್ಣ, ಪ್ರಾಂಶುಪಾಲ ಟಿ.ಎನ್.ರವಿ, ಉಪನ್ಯಾಸಕ ಸುಬ್ರಮಣ್ಯಂ, ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಸಮಿತಿ ಸದಸ್ಯ ಸೋಮಶೇಖರ್, ತಾಲ್ಲೂಕು ಸಮಿತಿ ಅಧ್ಯಕ್ಷ ವಿ.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.