ಬಾಗೇಪಲ್ಲಿ: ಬ್ರಿಟಿಷರು ನಿರ್ಮಿಸಿದ ಚಿತ್ರಾವತಿ ಒಡ್ಡು, ಕಣಜದಲ್ಲಿನ ನೀರನ್ನು ರಾಜಕಾಲುವೆಗಳ ಮೂಲಕ ಹರಿಸಿದ ಕೊರ್ಲಕುಂಟೆ ಇದೀಗ ಊರಿನ ಕಲುಷಿತ ನೀರು ಹರಿಸುವ ಗುಂಡಿಯಾಗಿದೆ. ಕಸ, ತ್ಯಾಜ್ಯ, ಕಲುಷಿತಗೊಂಡು ವಿನಾಶದ ಅಂಚಿಗೆ ಸರಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಪಟ್ಟಣದ ಹುಸೇನ್ ಷಾ ವಲಿ ದರ್ಗಾದ ಮೂಲಕ ಕೊಡಿಕೊಂಡ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಕೊರ್ಲಕುಂಟೆ ಇದೆ. ಪಟ್ಟಣಕ್ಕೆ ಕುಂಟೆ ಅಂಟಿಕೊಂಡಿದೆ. ಈ ಹಿಂದೆ ಇದೇ ಕೊರ್ಲಕುಂಟೆಯಲ್ಲಿ ನೀರಿನ ಸಂಗ್ರಹದ ಸಾಮರ್ಥ್ಯ ಹೆಚ್ಚಿಸಿತ್ತು. ಕೊಳವೆಬಾವಿಗಳನ್ನು ಕೊರೆಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗಿತ್ತು. 100 ರಿಂದ 200 ಅಡಿಗೆ ನೀರು ಸಿಗುತ್ತಿತ್ತು.
ಕೊರ್ಲಕುಂಟೆ ಇಂದು ಅಕ್ಷರಶಃ ಊರಿನ ಕಲುಷಿತ ತಾಣವಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಳ್ಳಿನ ಹಾಗೂ ಕಳೆ, ಗಿಡಗಂಟಿಗಳು ಬೆಳೆದಿವೆ. ಊರಿನ ಚರಂಡಿ ನೀರು ಕಾಲುವೆ ಮೂಲಕ ಕುಂಟೆಗೆ ಹರಿಸಲಾಗಿದೆ. ಹಳೆ ಮನೆಗಳ ಕಟ್ಟಡಗಳ ಅವಶೇಷಗಳನ್ನು, ಕೋಳಿಗಳ ರೆಕ್ಕೆಗಳನ್ನು ಚೀಲಗಳಲ್ಲಿ ತುಂಬಿಸಿ ಹಾಕಲಾಗಿದೆ.
ಕುಂಟೆಯ ಕಟ್ಟೆಯ ಮೂಲಕ ಸಂಪಂಗಿ ಬಡಾವಣೆಗೆ, ಈದ್ಗಾ ಮೈದಾನ, ಗೌನಿಪಲ್ಲಿ, ಯಗವಬಂಡ್ಲ ಕೆರೆ ಗ್ರಾಮಗಳು ಸೇರಿದಂತೆ ನೆರೆಯ ಆಂಧ್ರಪ್ರದೇಶದ ಕೊಡಿಕೊಂಡ ಕಡೆಗೆ ಹಾದು ಹೋಗುವ ಸಂಪರ್ಕ ಹೊಂದಿದೆ. ಬೀದಿನಾಯಿಗಳು, ಹಂದಿಗಳು ತ್ಯಾಜ್ಯಗಳನ್ನು ಚಲ್ಲಾಪಿಲ್ಲಿ ಮಾಡುತ್ತಿವೆ. ದಾರಿಹೋಕರು ಮಲಿನದ ಹಾಗೂ ತ್ಯಾಜ್ಯದ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ.
ಪಟ್ಟಣದ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಿತ್ತು. ಪ್ರಾಣಿ ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಇಂದು ಮುಳ್ಳಿನ, ಕಳೆ ಗಿಡಗಳಿಂದ ಮುಚ್ಚಿವೆ. 33 ಅಡಿಯಷ್ಟಿದ್ದ ರಾಜಕಾಲುವೆ ಇದೀಗ 3 ಅಡಿ ಮಾತ್ರ ಉಳಿದಿದೆ.
15 ರಿಂದ 20 ಎಕರೆ ಪ್ರದೇಶ ಹೊಂದಿದ್ದ ಕೊರ್ಲಕುಂಟೆ ಸುತ್ತಲೂ ಒತ್ತುವರಿಯಾಗಿದೆ. ಅದರ ವಿಸ್ತೀರ್ಣ ದಾಖಲೆಗಳಲ್ಲಿ ಮಾತ್ರ ಇದೆ. ಕೆಲ ರಿಯಲ್ ಎಸ್ಟೇಟ್ ದಂಧೆಕೋರರು ನಕಲಿ ದಾಖಲೆಗಳನ್ನು ತೋರಿಸಿ, ಕೊರ್ಲಕುಂಟೆ ಜಾಗವನ್ನು ಮಾರಾಟ ಮಾಡಿದ್ದಾರೆ. ಕೆಲವರು ಮನೆ ಕಟ್ಟಿಕೊಂಡು ವಾಸವಿದ್ದಾರೆ. ಈ ಹಿಂದೆ ಕಂದಾಯ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸುತ್ತಲೂ ಕಂಬಗಳನ್ನು ಹಾಕಿದ್ದರು. ನಂತರ ಸೂಕ್ತ ನಿರ್ವಹಣೆ ಮಾಡಿಲ್ಲ.
ಕೊರ್ಲಕುಂಟೆ ಸ್ವಚ್ಛಗೊಳಿಸುವ ಕೆಲಸ ಮೊದಲು ಆಗಬೇಕು. ಕುಂಟೆಗೆ ಮಳೆಯ ನೀರನ್ನು ರಾಜಕಾಲುವೆ, ಕಾಲುವೆ ಮೂಲಕ ಹರಿಸಬೇಕು ಎಂದು ಪಟ್ಟಣದ ನಿವಾಸಿ ಮೆಕಾನಿಕ್ ಬಾಬು ತಿಳಿಸಿದರು.
ಕೊರ್ಲಕುಂಟೆಗೆ ನೀರು ಹರಿಸುವ ರಾಜಕಾಲುವೆ ಸ್ವಚ್ಛಗೊಳಿಸಬೇಕು. ಕಲುಷಿತ ನೀರನ್ನು ಕೆರೆಗೆ ಹರಿಸಬಾರದು ಎಂದು ಸ್ಥಳೀಯ ನಿವಾಸಿ ನವೀದ್ ಹೇಳಿದರು.
ಕೊರ್ಲಕುಂಟೆ ಪಕ್ಕದಲ್ಲಿ ಕಸ, ತ್ಯಾಜ್ಯ ಹಾಕದಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್ ಹೇಳಿದರು.
ಅಧಿಕಾರಿಗಳು ಜನಪ್ರತಿನಿಧಿಗಳು ಕೆರೆ ಕುಂಟೆ ಕಾಲುವೆಗಳನ್ನು ಸ್ವಚ್ಛ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕುಬಿ.ವಿ.ನರಸಿಂಹಮೂರ್ತಿ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.