ADVERTISEMENT

ಸಾದಲಿ | ಚಂದಗಾನಹಳ್ಳಿ ಸೌಲಭ್ಯಗಳಿಂದ ದೂರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 7:28 IST
Last Updated 28 ಆಗಸ್ಟ್ 2023, 7:28 IST
ಚಂದಗಾನಹಳ್ಳಿಯಲ್ಲಿ ಚರಂಡಿಗಳ ತುಂಬಾ ಕಸ ಕಡ್ಡಿ ತುಂಬಿರುವುದು
ಚಂದಗಾನಹಳ್ಳಿಯಲ್ಲಿ ಚರಂಡಿಗಳ ತುಂಬಾ ಕಸ ಕಡ್ಡಿ ತುಂಬಿರುವುದು   

ಶಿವಕುಮಾರ್ ಎನ್.ವಿ

ಸಾದಲಿ: ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಗಾನಹಳ್ಳಿಯ ದಲಿತ ಕಾಲೊನಿಯಲ್ಲಿ ಚರಂಡಿಗಳು ಇದ್ದೂ ಇಲ್ಲದಂತಾಗಿದೆ. 

ಕೆಲವು ಕಡೆ ಮಣ್ಣು ಮತ್ತು ಕಸದಿಂದ ಚರಂಡಿಗಳು ಮುಚ್ಚಿಹೋಗಿದ್ದರೆ, ಮತ್ತೆ ಕೆಲವು ಕಡೆ ಚರಂಡಿಗಳೇ ಕಾಣದಂತಾಗಿವೆ. ಇದರಿಂದಾಗಿ ದಲಿತ ಕಾಲೊನಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ತ್ಯಾಜ್ಯ ತುಂಬಿದ ಚರಂಡಿಗಳು ಸೊಳ್ಳೆ ಮತ್ತು ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. 

ADVERTISEMENT

ಇದರಿಂದಾಗಿ ಗ್ರಾಮದಲ್ಲಿ ಡೆಂಗು, ಚಿಕೂನ್ ಗುನ್ಯಾ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಬರಬಹುದು ಎಂಬ ಆತಂಕದಲ್ಲೇ ಜನರು ವಾಸಿಸುವಂತಾಗಿದೆ. ಇನ್ನಾದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಲಿತ ಕಾಲೊನಿಯಲ್ಲಿ ಇದ್ದೂ ಇಲ್ಲದಂತಾಗಿರುವ ಚರಂಡಿಗಳನ್ನು ದುರಸ್ತಿಗೊಳಿಸಬೇಕು. ಚರಂಡಿಯಲ್ಲಿ ತುಂಬಿಕೊಂಡಿರುವ ತ್ಯಾಜ್ಯವನ್ನು ಶುಚಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. 

ಚಂದಗಾನಹಳ್ಳಿ ಚರಂಡಿಗಳ ಸ್ವಚ್ಛತೆ ಮಾಡಬೇಕೆಂಬ ವಿಚಾರವು ನನ್ನ ಗಮನಕ್ಕೆ ಬಂದಿದೆ. ಆದರೆ ನಮ್ಮ ಪಂಚಾಯಿತಿಯಲ್ಲಿ ಇದಕ್ಕಾಗಿ ಹಣಕಾಸಿನ ಕೊರತೆ ಇದೆ. ಚರಂಡಿಗಳ ಸ್ವಚ್ಛತೆ ನಿಟ್ಟಿನಲ್ಲಿ ಈ ಬಾರಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ನಾನೇನೂ ಮಾಡಲಾಗದು. 
ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಚರಂಡಿಗಳಲ್ಲಿ ಕಸ, ಕಡ್ಡಿ ಕೊಳೆತು ನಿಂತಿರುವ ನೀರು ಸೊಳ್ಳೆ ಮತ್ತು ನೊಣಗಳ ಆವಾಸಸ್ಥಾನವಾಗಿದೆ. ಇಲ್ಲಿ ಉತ್ಪತ್ತಿಯಾಗುವ ನೊಣಗಳು ಗ್ರಾಮದ ಜನರ ಮನೆಗಳಿಗೆ ನುಗ್ಗುತ್ತಿವೆ. ಈ ಸಂಬಂಧ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಿವಾಸಿ ಸಿ.ವಿ. ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು. 

ಗ್ರಾಮದ ಎಲ್ಲಾ ಮೂಲೆಗಳಿಂದ ಕೊಳಚೆ ನೀರು ನಮ್ಮ ಕಾಲೊನಿಗೆ ಹರಿದುಬರುತ್ತದೆ. ನಮ್ಮ ಮನೆಯ ಮುಂದೆಯೇ ನಿಲ್ಲುತ್ತದೆ. ಚರಂಡಿ ದುರ್ನಾತ ಹೇಳತೀರದ್ದಾಗಿದೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಾವು ಸೇರಿದಂತೆ ಇನ್ನಿತರ ವಿಷಜಂತುಗಳು ವಾಸವಾಗಿರುವ ಸಾಧ್ಯತೆ ಇದೆ. ಅವು ನಮ್ಮ ಮನೆಯೊಳಕ್ಕೂ ಸೇರುವ ಸಾಧ್ಯತೆಯಿದೆ ಎಂದು ಗ್ರಾಮದ ನಿವಾಸಿ ಜ್ಯೋತಿಶ್ವರಿ ಮುನಿರಾಜು ಆತಂಕ ವ್ಯಕ್ತಪಡಿಸಿದರು. 

ಗ್ರಾಮದಲ್ಲಿನ ಅವ್ಯವಸ್ಥೆ ಬಗ್ಗೆ ಹಲವು ಸಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ, ಏನೂ ಪ್ರಯೋಜನವಾಗಿಲ್ಲ. ಇದರಿಂದ ಪ್ರತಿದಿನ ಒಬ್ಬರಲ್ಲಾ ಒಬ್ಬರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಪಾಲಾಗುತ್ತಿದ್ದಾರೆ. ಅಧಿಕಾರಿಗಳಂತೂ ನಮ್ಮ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ. ನಮ್ಮ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕನಸಾಗಿಯೇ ಉಳಿಯುತ್ತದೆ ಎಂಬ ಆತಂಕವಿದೆ ಎಂದು ಗ್ರಾಮದ ನಿವಾಸಿ ದೇವರಾಜ್ ಅವಲತ್ತುಕೊಂಡರು. 

ಚಂದಗಾನಹಳ್ಳಿಯಲ್ಲಿ ಚರಂಡಿಯಲ್ಲಿ ನೀರು ದುರ್ವಾಸನೆ ಸ್ಥಿತಿ
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಗಾನಹಳ್ಳಿಯಲ್ಲಿ ಚರಂಡಿಗಳ ಸ್ಥಿತಿಗತಿ
ಚಂದಗಾನಹಳ್ಳಿ ಗ್ರಾಮದಲ್ಲಿ ಚರಂಡಿಗಳಲ್ಲಿ ತುಂಬ ಕಸ ಕಡ್ಡಿ ತುಂಬಿರುವುದು
ನೀರು ಹರಿಯದೆ ದುರ್ವಾಸನೆ
ಚಂದಗಾನಹಳ್ಳಿ ಚರಂಡಿಗಳ ತುಂಬ ಗಿಡ ಗಂಟಿಗಳು ಬೆಳೆದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.