ADVERTISEMENT

ವಿದ್ಯಾರ್ಥಿ ವೇತನಕ್ಕಿಲ್ಲ ಅರ್ಜಿ ಆಹ್ವಾನ

ಇಲಾಖೆಗಳಿಗೆ ಸರ್ಕಾರದಿಂದ ಸಿಗದ ಆದೇಶ: ಆಯುಕ್ತರ ಖಾತೆಗೆ ಹಣ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:12 IST
Last Updated 18 ಜನವರಿ 2021, 2:12 IST

ಚಿಕ್ಕಬಳ್ಳಾಪುರ: ಕೋವಿಡ್‍ ತಂದೊಡ್ಡಿದ ಸಂಕಷ್ಟದಿಂದ ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಏರುಪೇರಾಗಿದ್ದು, ಇದೀಗ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಪ್ರಕ್ರಿಯೆಯೂ ವಿಳಂಬವಾಗಿದೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬಹುತೇಕ ಆನ್‍ಲೈನ್‍ನಲ್ಲಿಯೇ ಮುಂದುವರಿದಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಕಾಲೇಜುಗಳು ಆರಂಭವಾಗಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದರೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿಲ್ಲ ಎಂಬುದು ವಿದ್ಯಾರ್ಥಿಗಳ ದೂರು.

ವಿದ್ಯಾಸಿರಿ, ಶುಲ್ಕ ವಿನಾಯಿತಿ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಕಳೆದ ವರ್ಷದಲ್ಲಿ ಈ ವೇಳೆಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು. ಆನ್‍ಲೈನ್‍ ಮೂಲಕ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ನಂತರ ಕೆಲ ತಿಂಗಳಲ್ಲಿ ವಿದ್ಯಾರ್ಥಿ ವೇತನವೂ ಪಾವತಿಯಾಗುತ್ತಿತ್ತು. ಆದರೆ, ಈ ಬಾರಿ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯೇ ವಿಳಂಬವಾಗಿದೆ.

ADVERTISEMENT

‘ಜಿಲ್ಲೆಯ ಮೆಟ್ರಿಕ್‍ ಪೂರ್ವ ವಿದ್ಯಾರ್ಥಿ ವೇತನಕ್ಕೆ ಆನಲೈನ್‌ ಅನುಮೋದನೆಗೆ ಇತ್ತೀಚೆಗೆ ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆಗೆ ಅನುಮೋದಿಸಲು ಆದೇಶ ಬಂದಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ತೇಜಾನಂದ ರೆಡ್ಡಿ ತಿಳಿಸಿದರು.

‘ವಿದ್ಯಾರ್ಥಿ ವೇತನ ಪಾವತಿಗಾಗಿ ಈಗಾಗಲೇ ನಮಗೆ ₹6.25 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ವಿದ್ಯಾರ್ಥಿ ವೇತನ ಮೊತ್ತವನ್ನು ವರ್ಗಾವಣೆ ಮಾಡಲು ಸರ್ಕಾರದ ನಿರ್ಧರಿಸಿದ ಕಾರಣಕ್ಕೆ ಆ ಮೊತ್ತವನ್ನು ಆಯುಕ್ತರ ಖಾತೆಗೆ ವರ್ಗಾಯಿಸಲಾಯಿತು’ ಎಂದರು.

‘ಕೋವಿಡ್‌ ಭೀತಿಯಿಂದ ಸರ್ಕಾರ ಹಿಂದಿನ ವರ್ಷ ವಸತಿ ನಿಲಯಗಳಲ್ಲಿ ಪ್ರವೇಶಾತಿ ಪಡೆದವರಲ್ಲಿಯೇ ಶೇಕಡ 75 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಮತ್ತು ಹೊಸದಾಗಿ ಪ್ರವೇಶ ನೀಡದಿರಲು ನಿರ್ಧರಿಸಿತ್ತು. ಇದು ಹೊಸದಾಗಿ ಪ್ರವೇಶಾತಿ ಬಯಸುವವರ ಆತಂಕಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಸರ್ಕಾರ ಶೇಕಡ 25ರಷ್ಟು ಪ್ರವೇಶ ನೀಡಲು ಆದೇಶಿಸಿದೆ. ಶೀಘ್ರದಲ್ಲೇ ಹೊಸ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ’ ಎಂದರು.

‘ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕಾಗಿ ಈವರೆಗೆ ಅರ್ಜಿ ಆಹ್ವಾನಿಸಿಲ್ಲ. ಅನುದಾನವೂ ಬಿಡುಗಡೆಯಾಗಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಬೇಕಾದ ವಿಚಾರ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.