ಗೌರಿಬಿದನೂರು: ‘ಎಲ್ಲರಿಗೂ ಆರೋಗ್ಯ, ಎಲ್ಲೆಡೆ ಆರೋಗ್ಯ’ ಎಂಬ ಘೋಷ ವಾಕ್ಯದೊಂದಿಗೆ, ಸರ್ಕಾರ ಅರೋಗ್ಯವಂತ ಸಮಾಜ ನಿರ್ಮಾಣಕ್ಕೆ ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿದೆ.
ಅದೇ ರೀತಿಯಾಗಿ ನಗರದಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ತೆರೆದಿದೆ. ಆದರೆ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಸಿಬ್ಬಂದಿ ಇಲ್ಲ. ಇದರಿಂದ ಸಕಾಲದಲ್ಲಿ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.
ತಾಲ್ಲೂಕಿನಲ್ಲಿ 2.90 ಲಕ್ಷ ಜನಸಂಖ್ಯೆ ಇದೆ. ಗ್ರಾಮೀಣ ಭಾಗಗಳಲ್ಲಿ 18 ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಸೂರಿನಲ್ಲಿ ಮೇಲ್ದರ್ಜೆಗೇರಿದ ಸಮುದಾಯ ಆರೋಗ್ಯ ಕೇಂದ್ರ, ನಗರದಲ್ಲಿರುವ ನಗರ ಆರೋಗ್ಯ ಕೇಂದ್ರ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆ ಸೇರಿ ಒಟ್ಟು 21 ಆಸ್ಪತ್ರೆಗಳು ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಕುರೂಡಿ ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲ.
ಗ್ರಾಮೀಣ ಭಾಗಗಳಲ್ಲಿ ಕೆಲಸ ನಿರ್ವಹಿಸಲು 5000 ಜನಸಂಖ್ಯೆಗೆ ಅನುಗುಣವಾಗಿ ಒಬ್ಬ ಆರೋಗ್ಯ ಸುರಕ್ಷತಾ ಅಧಿಕಾರಿ, 10,000 ಜನಸಂಖ್ಯೆಗೆ ಆರೋಗ್ಯ ನಿರೀಕ್ಷಣಾ ಅಧಿಕಾರಿ ಹೊಂದಿರಬೇಕು. ಆದರೆ ಸಿಬ್ಬಂದಿ ಕೊರತೆಯಿಂದ ಒಬ್ಬ ಅಧಿಕಾರಿ ಎರಡರಿಂದ ಮೂರು ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಇದೆ.
ತಾಲ್ಲೂಕಿನಲ್ಲಿ 45 ಆಯುಷ್ಮಾನ್ ಆರೋಗ್ಯ ಮಂದಿರಗಳು ಕೆಲಸ ನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಕ್ಕೂ ಒಬ್ಬ ಆರೋಗ್ಯ ಸುರಕ್ಷತಾ ಅಧಿಕಾರಿ ನೇಮಕವಾಗಬೇಕು. ಆದರೆ 11 ಖಾಲಿ ಹುದ್ದೆಗಳಿಗೆ ಯಾರು ನೇಮಕವಾಗಿಲ್ಲ. ಸಮುದಾಯ ಆರೋಗ್ಯ ಅಧಿಕಾರಿಗಳಾಗಿ, 34 ವೈದ್ಯರು ಕಾರ್ಯನಿರ್ವಹಿಸುತ್ತಿದ್ದರೆ, 11 ಹುದ್ದೆಗಳು ಖಾಲಿ ಇವೆ.
ಗ್ರಾಮೀಣ ಭಾಗಗಳಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಪ್ರಾರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತದೆ. ಕೆಲಸ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ಕೆಲಸದ ಒತ್ತಡದಿಂದ ಹೈರಾಣಾಗುತ್ತಿದ್ದಾರೆ.
ಕಚೇರಿಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬರುವ ರೋಗಿಗಳಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕ್ಯಾನ್ಸರ್, ಮುಂತಾದ ತಪಾಸಣೆ ಮಾಡಿ, ಪ್ರಥಮ ಚಿಕಿತ್ಸೆ ನೀಡುವುದು, ಮಾಹಿತಿಯನ್ನು ಆನ್‌ಲೈನ್ ಮತ್ತು ಆಪ್‌ಲೈನ್ ಗಳಲ್ಲಿ ನಮೂದಿಸುವುದು, ಮಧ್ಯಾಹ್ನದ ನಂತರ ಮನೆ ಮನೆ ಭೇಟಿ, ಸಾಂಕ್ರಾಮಿಕ ರೋಗಗಳ ಮಾಹಿತಿ ಕಲೆ ಹಾಕುವುದು, ಅಂಗನವಾಡಿಗಳಿಗೆ ಭೇಟಿ, ಆಹಾರ ಪರಿಶೀಲನೆ, ಧೂಮಪಾನ ನಿಷೇಧ ಜಾಗೃತಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಈ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ.
ಜೊತೆಗೆ ಡಿ ಗ್ರೂಪ್ ನೌಕರರು ಇಲ್ಲದೇ ಇರುವುದರಿಂದ ಎಲ್ಲಾ ಕೆಲಸಗಳನ್ನು ಸಿಬ್ಬಂದಿಗಳೇ ಮಾಡಿಕೊಳ್ಳಬೇಕು. ಸಿಬ್ಬಂದಿ ಕೊರತೆಯಿಂದ ಎಲ್ಲಾ ಕೆಲಸಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಸಿಬ್ಬಂದು ಬೇಸರ ವ್ಯಕ್ತಪಡಿಸುವರು.
ತಾಲ್ಲೂಕಿನ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದೆ. ಇದರಿಂದ ಕೆಲಸ ಮಾಡುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಿದೆ. ಈ ಬಗ್ಗೆ ಮೇಲಾಧಿಕಾರಿ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿ ನೇಮಕ ಮಾಡುವ ಭರವಸೆ ನೀಡಿದ್ದಾರೆ.- ಡಾ. ಚಂದ್ರ ಮೋಹನ್ ರೆಡ್ಡಿ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ
2016 ನಂತರ ಈ ಕೆಲಸಗಳಿಗೆ ಯಾರನ್ನು ನೇಮಕ ಮಾಡಿಲ್ಲ. ಇದರಿಂದ ಕೆಲಸಕ್ಕೆ ತೊಂದರೆ ಆಗುವ ಜೊತೆಗೆ ಒತ್ತಡವು ಜಾಸ್ತಿಯಾಗುತ್ತಿದೆ ಎಂದು ಕೆಲಸ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ತಿಳಿಸುತ್ತಿದ್ದಾರೆ.
ಕಟ್ಟಡಗಳ ಸ್ಥಿತಿ:
ತಾಲ್ಲೂಕಿನಲ್ಲಿರುವ 18 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಟ್ಟಡಗಳು ಇವೆ. 48 ಅಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ 44 ಕಟ್ಟಡವನ್ನು ಹೊಂದಿವೆ. ಇದರಲ್ಲಿ 18 ಕಟ್ಟಡಗಳು ವಾಸಕ್ಕೆ ಯೋಗ್ಯವಾಗಿಲ್ಲ. 22 ಕಟ್ಟಡಗಳು ಸುಸ್ಥಿತಿಯಲ್ಲಿವೆ. 6 ಬಾಡಿಗೆಯಲ್ಲಿ ನಡೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.