ADVERTISEMENT

ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ: ಎಂ.ವೀರಪ್ಪ ಮೊಯಿಲಿ

ರಾಜ್ಯ ಸರ್ಕಾರದ ಆಡಳಿತ ವೈಖರಿ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 9:59 IST
Last Updated 22 ಜೂನ್ 2019, 9:59 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: ‘ಮತದಾರರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಬರೀ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸುವ ಬದಲು ನಮ್ಮ ಆಡಳಿತ ಕ್ರಮ ಜನಪರವಾಗಿರಬೇಕು. ಮುಖ್ಯಮಂತ್ರಿ, ಸಚಿವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಮುಖ್ಯವಾಗಬಾರದು. ಜನರ ಅವಶ್ಯಕತೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು’ ಎಂದು ಸಮ್ಮಿಶ್ರ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ (ಸಿಎಂಪಿ) ಸಮಿತಿ ಅಧ್ಯಕ್ಷ, ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅವರ ಜತೆಗೆ ಹೋಗಿದ್ದಕ್ಕೆ ನಾವು ಸೋತಿದ್ದೇವೆ. ಅದರಿಂದ ಕಹಿ ಅನುಭವವಾಗಿದೆ. ಅದು ಪುನಃ ಆಗಬಾರದು. ಆದ್ದರಿಂದ ನಾವು ನಮ್ಮ ಪಕ್ಷವನ್ನು ಸಂಘಟಿಸಿ, ಆ ಮೂಲಕ ಚುನಾವಣೆ ಎದುರಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ನಮಗೆ ಜೆಡಿಎಸ್ ಬೆಂಬಲ ಸಿಗಲಿಲ್ಲ. ಅವರಿಂದಾಗಿ ನಮ್ಮ ಶ್ರಮ ವ್ಯರ್ಥವಾಯಿತು. ಅವರೊಂದಿಗೆ ಹೋಗಿ ಮಾತನಾಡುವ ಸಮಯವನ್ನೇ ನಾನು ಮತದಾರರ ಮೇಲೆ ಕೇಂದ್ರೀಕರಿಸಿದ್ದರೇ ಇನ್ನೂ ಹೆಚ್ಚಿನ ಮತಗಳಾದರೂ ಬರುತ್ತಿದ್ದವು. ಇವತ್ತು ಎಲ್ಲಾ ಹಂತಗಳಲ್ಲಿ ಬದಲಾವಣೆ ಆಗಲೇ ಬೇಕು. ನಮಗೆ ಯಾವ ರೀತಿ ಸೋಲಾಗಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

‘ವಿಧಾನಸಭೆ ಚುನಾವಣೆಯಲ್ಲಿ ಆದ ಸೋಲಿನ ಬಗ್ಗೆ ನಮ್ಮಲ್ಲಿ ವಿಮರ್ಶೆ ನಡೆಯಲಿಲ್ಲ. ಅದರಿಂದಾಗಿಯೇ ಪುನಃ ಲೋಕಸಭೆಯಲ್ಲಿ ಅವರ ತಪ್ಪಿಗೆ ನಮ್ಮಂತಹವರು ಬಲಿಯಾಗಬೇಕಾಯಿತು. ಕಾಂಗ್ರೆಸ್‌, ನಮ್ಮ ವೈಯಕ್ತಿಕ ವರ್ಚಸ್ಸು ನೋಡಿ ಮತ ನೀಡುತ್ತಾರೆ ಎಂದು ಯಾರಾದರೂ ತಿಳಿದುಕೊಂಡರೆ ಅದು ತಪ್ಪು’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಧೋರಣೆಯನ್ನು ಟೀಕಿಸಿದರು.

‘ನಾವು ಬರೀ ಅಧಿಕಾರ ಅಥವಾ ಮಂತ್ರಿಮಂಡಲ ಕೇಂದ್ರೀಕೃತ ಪಕ್ಷವಾಗಬಾರದು. ಅಧಿಕಾರ ಇಲ್ಲದಿದ್ದರೂ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮ ಕಾರ್ಯಕರ್ತರ ಮೇಲೆ ಗಮನ ಕೇಂದ್ರೀಕರಿಸಬೇಕಿದೆ. ಮುಂಬರುವ ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಸಂಘಟನೆ ಆಗದಿದ್ದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಇದೇ ಫಲಿತಾಂಶ ಬರಬಹುದು’ ಎಂದು ಹೇಳಿದರು.

‘ನಾವು ಮೊದಲು ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಯಿಂದ ಮಾಡಬೇಕು. ಜನರಿಗೆ ಸ್ಪಂದಿಸಬೇಕು. ಆಗ ಮಾತ್ರ ಕಾಂಗ್ರೆಸ್ ಬಲವಾಗುತ್ತದೆ. ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದರಲ್ಲೂ ದಲಿತರು, ಅಲ್ಪಸಂಖ್ಯಾತರು, ಬಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ರಾಜಕಾರಣ ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಕಾಂಗ್ರೆಸ್‌ ಏಳಿಗೆಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ದೇವೇಗೌಡರು ಒಂದು ದಿನ ಒಂದು ರೀತಿ, ಮಾರನೇ ದಿನ ಮತ್ತೊಂದು ರೀತಿ ಹೇಳುತ್ತಾರೆ. ನಾವು ಆ ರೀತಿ ಹೇಳುವವರಲ್ಲ. ಒಮ್ಮೆ ಹೇಳಿಕೆ ಕೊಟ್ಟರೆ ಅದನ್ನು ಹಿಂಪಡೆಯುವುದಿಲ್ಲ. ಆಲೋಚನೆ ಮಾಡಿಯೇ ಹೇಳುತ್ತೇವೆ. ದೇವೇಗೌಡರು ಪರಿಸ್ಥಿತಿಗೆ ತಕ್ಕಂತೆ ಹೇಳಿರಬಹುದು. ಅವರು ದೊಡ್ಡವರು, ಮಾಜಿ ಪ್ರಧಾನಿಗಳು ಅವರ ಹೇಳಿಕೆ ಬಗ್ಗೆ ವ್ಯಾಖ್ಯಾನ ಮಾಡಲಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.