ಚಿಕ್ಕಬಳ್ಳಾಪುರ: ಒಂದೆಡೆ ಸಂಭ್ರಮಾಚರಣೆ, ಮತ್ತೊಂದು ಕಡೆ ಧಿಕ್ಕಾರದ ಘೋಷಣೆ. ಹೀಗೆ ಈ ಎರಡೂ ಪ್ರಸಂಗಕ್ಕೆ ವೇದಿಕೆ ನಗರದ ಜಿಲ್ಲಾ ಬಿಜೆಪಿ ಕಚೇರಿ ಆವರಣ.
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮುಖಂಡ ಸಂದೀಪ್ ಬಿ.ರೆಡ್ಡಿ ಅವರು ನೇಮಕವಾಗಿದ್ದಾರೆ. ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಈ ಸಂಬಂಧ ಘೋಷಣೆಯೂ ಹೊರಬಿದ್ದಿತು. ಬಿಜೆಪಿ ಜಿಲ್ಲಾ ಉಸ್ತುವಾರಿ ಅಶ್ವತ್ಥನಾರಾಯಣ್, ಚುನಾವಣಾ ಅಧಿಕಾರಿ ಸಿಂಗನಾಯಕನಹಳ್ಳಿ ರಾಜಣ್ಣ, ನಿರ್ಗಮಿತ ಅಧ್ಯಕ್ಷ ರಾಮಲಿಂಗಪ್ಪ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಂದೀಪ್ ರೆಡ್ಡಿ ಅವರ ನೇಮಕದ ಸಂಭ್ರಮಾಚರಣೆಗೆ ಸಾಕ್ಷಿಯಾದರು.
ಹೀಗೆ ಸಂಭ್ರಮಾಚರಣೆ ನಡೆಯುತ್ತಿರುವ ವೇಳೆಯೇ ಸ್ಥಳಕ್ಕೆ ಬಂದ ಡಾ.ಕೆ.ಸುಧಾಕರ್ ಬೆಂಬಲಿಗರೂ ಆದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಹಾಗೂ ಮುಖಂಡರು, ನೇಮಕ್ಕೆ ಅಸಮಾಧಾಮ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
‘ವಿಜಯೇಂದ್ರ ಪಕ್ಷವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಸುಧಾಕರ್ ಅವರು ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಶ್ರಮಿಸುತ್ತಿದ್ದಾರೆ. ಆದರೆ ಸುಧಾಕರ್ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಈ ನೇಮಕ ಮಾಡಿದ್ದಾರೆ. ವಿಜಯೇಂದ್ರ ಪಕ್ಷ ಕಟ್ಟಲು ಬಂದಿಲ್ಲ. ಪಕ್ಷ ನಾಶಕ್ಕೆ ಬಂದಿದ್ದಾರೆ’ ಎಂದು ಮರಳುಕುಂಟೆ ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಕೆ.ಸುಧಾಕರ್ ಅವರ ಅಭಿಪ್ರಾಯದ ಪಡೆಯದೇ ನೇಮಕ ಮಾಡಿದ್ದಾರೆ. ಈ ನೇಮಕ ರದ್ದು ಮಾಡಬೇಕು. ಇಲ್ಲದಿದ್ದರೆ ನಾವು ನಮ್ಮ ಮುಖಂಡರು, ಕಾರ್ಯಕರ್ತರು ಸೇರಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾರು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು ಎಂದರು.
ಸಂದೀಪ್ ರೆಡ್ಡಿ ಬೆಂಬಲಿಗರ ಮೆರವಣಿಗೆ: ಸಂದೀಪ್ ರೆಡ್ಡಿ ಅವರ ಆಯ್ಕೆಗೆ ಸಂತಸ ವ್ಯಕ್ತಪಡಿಸಿದ ಅವರ ಪರವಾಗಿ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರು ಜಯಕಾರದ ಘೋಷಣೆಗಳನ್ನು ಮೊಳಗಿಸಿದರು. ನಗರದಲ್ಲಿ ಸಂದೀಪ್ ರೆಡ್ಡಿ ಅವರನ್ನು ಮೆರವಣಿಗೆ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ್, ‘ನಾಲ್ಕೈದು ಮಂದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಅಂತಿಮವಾಗಿ ಮೂವರು ಹೆಸರುಗಳನ್ನು ರಾಜ್ಯ ಸಮಿತಿಗೆ ಕಳುಹಿಸಿದ್ದೆವು. ಅವರು ಆಯ್ಕೆ ಮಾಡಿದ್ದಾರೆ. ಎಲ್ಲರ ಸಹಮತದಲ್ಲಿಯೇ ಈ ಆಯ್ಕೆ ನಡೆಸಿದೆ. ಇಲ್ಲಿ ಬಹುಮತದ ಪ್ರಶ್ನೆ ಇಲ್ಲ ಎಂದು ಹೇಳಿದರು.
ಹಲವು ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಪ‍್ರಕ್ರಿಯೆಗಳು ನಡೆದಿವೆ. ಮಂಡಲ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ಸಭೆ ನಡೆಯಲಿದೆ ಎಂದರು.
ಪಕ್ಷವು ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ನೀಡುತ್ತದೆ. ಆ ರೀತಿಯಲ್ಲಿ ಸಂದೀಪ್ ರೆಡ್ಡಿ ಅವರಿಗೆ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ. ಜಿಲ್ಲೆಯ ಸಂಸದರು, ಮಾಜಿ ಶಾಸಕರು, ಮಂಡಲ ಅಧ್ಯಕ್ಷರ ಅಭಿಪ್ರಾಯ ಪಡೆದು ಈ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಚುನಾವಣೆ ಅಧಿಕಾರಿ ಸಿಂಗನಾಯಕನಹಳ್ಳಿ ರಾಜಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳೀಧರ್, ಮಾಧ್ಯಮ ವಕ್ತಾರ ಮಧುಚಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
‘ಪಕ್ಷ ಸಂಘಟನೆಗೆ ಶ್ರಮ’
‘ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷವು ದೊಡ್ಡ ಜವಾಬ್ದಾರಿ ನೀಡಿದೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ದಿನ ಎಂದು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಸಂದೀಪ್ ರೆಡ್ಡಿ ತಿಳಿಸಿದರು. ನಿರ್ಗಮಿತ ಅಧ್ಯಕ್ಷ ರಾಮಲಿಂಗಪ್ಪ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಪ್ರಪಂಚದಲ್ಲಿಯೇ ಬಿಜೆಪಿ ಅತಿ ದೊಡ್ಡ ಪಕ್ಷ. ಅಧ್ಯಕ್ಷ ಸ್ಥಾನ ನೀಡಿದ ಎಲ್ಲರ ನಂಬಿಕೆಯನ್ನು ಉಳಿಸಿಕೊಂಡು ಹೋಗುವೆ. ಎಲ್ಲ ಹಿರಿಯರು ಪಕ್ಷದ ಪದಾಧಿಕಾರಿಗಳ ವಿಶ್ವಾಸ ಪಡೆದು ಸಂಘಟನೆಯಲ್ಲಿ ತೊಡಗುವೆ. ಪಕ್ಷ ಸಂಘಟನೆಗೆ ಮತ್ತಷ್ಟು ಶ್ರಮ ಹಾಕಲಾಗುವುದು ಎಂದು ಹೇಳಿದರು.
ನರೇಂದ್ರ ಮೋದಿ ಅವರನ್ನು ನೋಡಿ ನಾವು ರಾಜಕೀಯಕ್ಕೆ ಬಂದೆವು. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮವಹಿಸಲಾಗುವುದು. ಎಲ್ಲರ ಜೊತೆಗೂಡಿ ನಿಸ್ವಾರ್ಥವಾಗಿ ಕೆಲಸ ಮಾಡುವೆ ಎಂದರು.
ಸ್ಪರ್ಧೆಯಲ್ಲಿದ್ದ ಪಕ್ಷದ ಮುಖಂಡರು
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೀಕಲ್ ರಾಮಚಂದ್ರಗೌಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮುಖಂಡ ಎಸ್.ಆರ್.ದೇವರಾಜ್ ಚಿಂತಾಮಣಿಯ ಪ್ರತಾಪ್ ಹಾಗೂ ಸಂದೀಪ್ ರೆಡ್ಡಿ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಸುಧಾಕರ್ ಸಂದೀಪ್ ರೆಡ್ಡಿ ಅವರ ಆಯ್ಕೆಗೆ ವಿರುದ್ಧವಾಗಿದ್ದರು.
ಸೋಲಿಸಲು ಯತ್ನಿಸಿದವರಿಗೆ ಹುದ್ದೆ: ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲಸ ಮಾಡಿದವರನ್ನು ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಉತ್ತಮವಾಗಿ ನಡೆದಿದೆ. ನಮ್ಮ ಕಾರ್ಯಕರ್ತರು 58 ಸಾವಿರ ಜನರನ್ನು ನೋಂದಣಿ ಮಾಡಿಸಿದ್ದಾರೆ. ಪಕ್ಷಕ್ಕಾಗಿ ಅಹರ್ನಿಶಿಯಾಗಿ ದುಡಿದವರನ್ನು ಕೈ ಬಿಟ್ಟು ವಿರುದ್ಧವಾಗಿ ಕೆಲಸ ಮಾಡಿದವರಿಗೆ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕಬಳ್ಳಾಪುರದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿಲ್ಲ. ನಾನು ಹೇಳಿದವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ನಾನು ಕಾರ್ಯಕರ್ತರಿಗೆ ಏನೆಂದು ಉತ್ತರ ನೀಡಲಿ ಎಂದು ಪ್ರಶ್ನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.