
ಮೂಗಿರೆಡ್ಡಿಪಲ್ಲಿ ಕ್ರಾಸ್ ಬಳಿ ಸೂಚನಾ ಫಲಕವನ್ನು ಸುತ್ತುವರಿದ ಬಳ್ಳಿಗಳು
ಚೇಳೂರು: ತಾಲ್ಲೂಕಿನಾದ್ಯಂತ ಮುಖ್ಯ ರಸ್ತೆಗಳನ್ನು ಗಿಡ ಗಂಟೆಗಳು ಹಾಗೂ ಬಳ್ಳಿಗಳು ಆವರಿಸಿದ್ದು, ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿ ಪ್ರಯಾಣಿಕರ ಪಾಲಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು, ಪೊದೆಗಳು ಮತ್ತು ಮರಗಳ ಕೊಂಬೆಗಳು ನೇರವಾಗಿ ರಸ್ತೆಗೆ ಬಾಗಿ ನಿಂತಿರುವುದರಿಂದ ವಾಹನ ಸವಾರರು ರಸ್ತೆ ಕಾಣದೆ ಪ್ರತಿದಿನ ಜೀವ ಭಯದಲ್ಲಿ ಪ್ರಯಾಣಿಸುವಂತಾಗಿದೆ.
ಅದರಲ್ಲೂ ಮುಖ್ಯವಾಗಿ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಇರುವುದರಿಂದ ಯಾವುದೇ ಕ್ಷಣದಲ್ಲಿಯೂ ದೊಡ್ಡ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ.
ಚಾಕವೇಲು ಮತ್ತು ಚೇಳೂರು ಮಾರ್ಗದಲ್ಲಿ ಪುಲಗಲ್ ಗ್ರಾಮದ ಬಳಿ ಬರುವ ಕೆರೆಕಟ್ಟೆಯ ಮೇಲಿನ ತಿರುವುಗಳು ಹೆಚ್ಚು ಅಪಾಯಕಾರಿಯಾಗಿವೆ. ಇಲ್ಲಿ ಮುಳ್ಳಿನ ಗಿಡಗಳು ಬೆಳೆದು ರಸ್ತೆಯ ಅರ್ಧ ಭಾಗವನ್ನು ಆವರಿಸಿಕೊಂಡಿವೆ. ಕಟ್ಟೆಯ ರಸ್ತೆ ಕಿರಿದಾಗಿರುವುದರಿಂದ ಈ ರಸ್ತೆಯಲ್ಲಿ ಪ್ರಯಾಣಿಕರಿಗೆ ಸಂಚರಿಸುವುದು ಬಹುದೊಡ್ಡ ಸವಾಲಾಗಿದೆ.
ಪಾತಪಾಳ್ಯ ಕಡೆಯಿಂದ ಚೇಳೂರು ಪಟ್ಟಣ ಮಾರ್ಗ ಮಧ್ಯದ ಮೂಗಿರೆಡ್ಡಿಪಲ್ಲಿ ಕ್ರಾಸ್ ಬಳಿ ಇರುವ ಕೆರೆಯ ರಸ್ತೆಯಲ್ಲಿ ಹಾಕಿರುವ ತಡೆಗೋಡೆಗಳು ಹಾಗೂ ಸೂಚನಾ ಫಲಕಗಳು ಕಾಣದ ರೀತಿಯಲ್ಲಿ ಮುಳ್ಳಿನ ಗಿಡಗಳು ಮತ್ತು ಬಳ್ಳಿಯ ಪೊದೆಗಳು ಬೆಳೆದು ನಿಂತಿದೆ. ಕೆರೆಯ ಅಂಚಿನಲ್ಲಿರುವ ತಿರುವು ಭಾರಿ ಅಪಾಯಕಾರಿಯಾಗಿದೆ. ಇದೇ ತಿರುವಿನಲ್ಲಿ ಅದೆಷ್ಟೋ ಅಪಘಾತಗಳು ಸಂಭವಿಸಿವೆ.
ಚೇಳೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಶೇರ್‌ಖಾನ್ ಕೋಟೆ ಗ್ರಾಮದ ಕೆರೆಕಟ್ಟೆಯ ರಸ್ತೆಯ ಪರಿಸ್ಥಿತಿ ಕೂಡಾ ಪೂರ್ತಿ ಹದಗೆಟ್ಟಿದೆ. ಇದರಿಂದಾಗಿ ಹಲವು ಬಾರಿ ಬಸ್ ಹಾಗೂ ಗೂಡ್ಸ್ ಸಾಗಿಸುವ ವಾಹನಗಳು ಕೆರೆಗೆ ಉರುಳಿದ ಸಂದರ್ಭಗಳೂ ಇವೆ.
ಈ ಕುರಿತು ರಸ್ತೆಯ ಅಂಚಿನಲ್ಲಿ ಬೆಳೆಯುವ ಗಿಡಗಳನ್ನು ಕಾಲಕಾಲಕ್ಕೆ ತೆರವುಗೊಳಿಸದ ಲೊಕೋಪಯೋಗಿ ಇಲಾಖೆ ಅಧಿಕಾರಿಗಳ ನಡೆ ಸಂಪೂರ್ಣ ನಿರ್ಲಕ್ಷ್ಯದ ಪರಾಕಾಷ್ಠೆಯಾಗಿದೆ ಎಂದು ಸವಾರರು ಆರೋಪಿಸಿದರು.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತಗಳ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಎಲ್ಲ ಮುಳ್ಳಿನ ಗಿಡ ಮರಗಳನ್ನು ತುರ್ತಾಗಿ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಸುಗಮ ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಬೇಕು. ಜನರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಚೇಳೂರು ಪಟ್ಟಣಕ್ಕೆ ಕೆಲಸದ ನಿಮಿತ್ತ ಪ್ರತೀ ದಿನವೂ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಗಿಡಗಂಟಿಗಳು ಆವರಿಸಿದ ರಸ್ತೆ ಕಾಣದೆ ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಮ್ಮದಾಗಿದೆ. ಅಪಘಾತ ಸಂಭವಿಸುವ ಮೊದಲೇ ರಸ್ತೆಯಲ್ಲಿರುವ ಅಪಾಯಕಾರಿ ಗಿಡಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.ಬಾಬುರೆಡ್ಡಿ, ದ್ವಿಚಕ್ರ ವಾಹನ ಸವಾರ
ಪ್ರತಿದಿನ ಚೇಳೂರು ಮಾರ್ಗವಾಗಿ ಚಿಂತಾಮಣಿ ಪಟ್ಟಣದ ಮಾರುಕಟ್ಟೆಗೆ ಗೂಡ್ಸ್ ವಾಹನದಲ್ಲಿ ರೈತರು ಬೆಳೆದ ಬೆಳೆಗಳನ್ನು ಸಾಗಿಸುತ್ತೇವೆ. ಗಿಡಗಳಿಂದ ಕೂಡಿದ ರಸ್ತೆಗಳು ಹಗಲಿನಲ್ಲಿಯೇ ಕಾಣುವುದಿಲ್ಲ. ರಾತ್ರಿ ಸಮಯದಲ್ಲಂತೂ ನಮ್ಮ ಪಾಡು ಹೇಳ ತೀರದು.ಮಧುಸೂದನ, ಗೂಡ್ಸ್ ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.