ADVERTISEMENT

ಗೌರಿಬಿದನೂರು| ಸರಕು ಸಾಗಣೆ ವಾಹನಗಳಿಗಿಲ್ಲ ಕಡಿವಾಣ: ನಿಯಮಗಳ ಉಲ್ಲಂಘನೆ

ಕೆ.ಎನ್‌.ನರಸಿಂಹಮೂರ್ತಿ
Published 10 ನವೆಂಬರ್ 2025, 6:26 IST
Last Updated 10 ನವೆಂಬರ್ 2025, 6:26 IST
ರಸ್ತೆ ಉಬ್ಬುಗಳ ಹತ್ತಿರ ಚೆಲ್ಲಿರುವ ಜಲ್ಲಿ ಕಲ್ಲು
ರಸ್ತೆ ಉಬ್ಬುಗಳ ಹತ್ತಿರ ಚೆಲ್ಲಿರುವ ಜಲ್ಲಿ ಕಲ್ಲು   

ಗೌರಿಬಿದನೂರು: ತಾಲ್ಲೂಕಿನಲ್ಲಿ ನಿಗದಿತ ತೂಕಕ್ಕಿಂತ ಹೆಚ್ಚಿನ ಸರಕು ಸಾಗಿಸುವ ಭಾರಿ ವಾಹನಗಳು ಸಾರ್ವಜನಿಕರಿಗೆ ತೊಂದರೆ ಮತ್ತು ಅಪಾಯಕ್ಕೆ ಕಾರಣವಾಗುತ್ತಿವೆ.  

ನಗರದ ಒಳ ರಸ್ತೆಗಳಾದ ಬಿ.ಎಚ್.ರಸ್ತೆ ಮತ್ತು ಎಂ.ಜಿ.ರಸ್ತೆಗಳಲ್ಲಿ ಭಾರಿ ಪ್ರಮಾಣದ ಸರಕನ್ನು ತುಂಬಿದ ಟ್ರಕ್‌ಗಳು ಸಂಚರಿಸುವುದು ಸಾಮಾನ್ಯವಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜಲ್ಲಿಕಲ್ಲು ಮತ್ತು ಎಂ.ಸ್ಯಾಂಡ್ ಸಾಗಿಸುವ ಕ್ರಷರ್ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ.

ಸಾರಿಗೆ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ವಾಹನಗಳು ಗಣನೀಯವಾಗಿ ಹೆಚ್ಚಿನ ತೂಕವನ್ನು ಹೊರುತ್ತಿವೆ. ಉದಾಹರಣೆಗೆ 19ಟನ್ ಸಾಮರ್ಥ್ಯದ ಟಿಪ್ಪರ್‌ 35-40 ಟನ್ ಸರಕನ್ನು ಹೊರಬಹುದು. ಈ ಭಾರೀ ತೂಕವು ರಸ್ತೆಗಳನ್ನು ನಾಶ ಮಾಡುವುದಲ್ಲದೆ ಚಾಲಕರ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿ ಅಪಘಾತಗಳ ಅಪಾಯ ಹೆಚ್ಚಿಸುತ್ತಿವೆ.

ADVERTISEMENT

ಜಲ್ಲಿಕಲ್ಲು ತುಂಬಿದ ವಾಹನಗಳು ರಸ್ತೆ ಉಬ್ಬುಗಳ ಬಳಿ ಸರಕು ಚೆಲ್ಲುವುದರಿಂದ ದ್ವಿಚಕ್ರ ವಾಹನಗಳು ಜಾರಿ ಬೀಳುವ ಸಂಭವ ಇದೆ. ಸಡಿಲವಾಗಿ ಮುಚ್ಚಿದ ಎಂ.ಸ್ಯಾಂಡ್ ವಾಹನಗಳಿಂದ ದೂಳು ಹಿಂಬದಿ ವಾಹನಗಳ ಚಾಲಕರ ಕಣ್ಣಿಗೆ ಬೀಳುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಗುಜರಿ ವಾಹನಗಳಿಂದ ಕಬ್ಬಿಣದ ತುಣುಕು ರಸ್ತೆ ಮೇಲೆ ಬೀಳುವುದರಿಂದ ವಾಹನಗಳ ಟೈರ್ ಪಂಕ್ಚರ್ ಆಗುವ ಸಮಸ್ಯೆಯೂ ನಿತ್ಯದ ಸಮಸ್ಯೆಯಾಗಿದೆ.

ತಾಲ್ಲೂಕಿನಲ್ಲಿ 75920 ವಾಹನಗಳು ನೋಂದಣಿಯಾಗಿವೆ. ಅದರಲ್ಲಿ 12000 ಕೆ.ಜಿಗೂ ಹೆಚ್ಚು ಸಾಗಣೆ ಮಾಡುವ ವಾಹನಗಳಲ್ಲಿ 1513 ವಾಹನಗಳು ನೋಂದಣಿಯಾಗಿದ್ದರೆ, 5500ರಿಂದ 11,999 ಕೆ.ಜಿ ಸರಕು ಸಾಗಣೆ ಮಾಡುವ ವಾಹನಗಳಲ್ಲಿ 414 ವಾಹನಗಳು ನೋಂದಣಿಯಾಗಿವೆ. ಇದರ ಜೊತೆಗೆ ಪಕ್ಕದ ಆಂಧ್ರಪ್ರದೇಶ ಹಾಗೂ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಿಂದ ಕೈಗಾರಿಕಾ ಪ್ರದೇಶ ಮತ್ತು ಬೇರೆ ಕೆಲಸಗಳ ನಿಮಿತ್ತ ನೂರಾರು ಬಾರಿ ವಾಹನಗಳು ಪ್ರತಿದಿನ ನಗರಕ್ಕೆ ಬರುತ್ತವೆ.

ಆರ್.ಟಿ.ಒ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳದೆ ರಾತ್ರಿ ಸಮಯದಲ್ಲಿ ಮಾತ್ರ ಹೊರಗುತ್ತಿಗೆ ನೌಕರರ ಮೂಲಕ ವಾಹನ ತಪಾಸಣೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಂ.ಸ್ಯಾಂಡ್ ಸಾಗಿಸುತ್ತಿರುವ ಟಿಪ್ಪರ್
ಅಧಿಕಾರಿಗಳು ಕಡಿವಾಣ ಹಾಕಲಿ ನಗರಕ್ಕೆ ಹೊಂದಿಕೊಂಡಂತೆ ಲೇಔಟ್‌ಗಳ ಕೆಲಸ ನಿರಂತರವಾಗಿ ನಡೆಯುತ್ತಿರುವುದರಿಂದ ಜಲ್ಲಿ ಎಂ.ಸ್ಯಾಂಡ್ ಮತ್ತು ಕಬ್ಬಿಣ ಹೊತ್ತ ವಾಹನಗಳು ಹೆಚ್ಚು ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ. ಜತೆಗೆ ಮಳೆಗಾಲದಲ್ಲಿ ಮಣ್ಣಿನಲ್ಲಿ ಚಲಿಸುವಾಗ ಹಲವು ಬಾರಿ ನಿಯಂತ್ರಣ ತಪ್ಪುತ್ತಿವೆ. ಇವುಗಳಿಗೆ ಸಂಬಂಧ‌ಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು. ಸತ್ಯನಾರಾಯಣ್ ವಿ.ವಿ ಪುರಂ ನಿವಾಸಿ ಜನರಿಗೆ ತೊಂದರೆ ಹಗಲಿನಲ್ಲಿ ತಾಲ್ಲೂಕಿನದ್ಯಾತ ಬಾರಿ ಸರಕು ಸಾಗಣೆ ವಾಹನಗಳು ಬೇಕಾಬಿಟ್ಟಿಯಾಗಿ ಹೆಚ್ಚಿನ ಸರಕನ್ನು ಸಾಗಣೆ ಮಾಡುತ್ತಿವೆ. ಕಾನೂನು ಪಾಲನೆ ಮಾಡದೆ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಜನರಿಗೆ ತೊಂದರೆಯಾಗುತ್ತಿದೆ.
ರಮೇಶ್ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.