
ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಳವಾರ ಗ್ರಾಮದ ಬಳಿಯ ಪಾಪಾಗ್ನಿ ಮಠದಲ್ಲಿ ಸೋಮವಾರ ಕರ್ನಾಟಕ ಪುಲಿಕೇಶಿ ಸಂಘದಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು. 13 ಜೋಡಿಗಳು ನವಜೀವನಕ್ಕೆ ಕಾಲಿಟ್ಟವು.
ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ‘ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ತಗ್ಗಿಸುತ್ತವೆ. ಸರಳ ವಿವಾಹಗಳು ಹೆಚ್ಚು ನಡೆಯಬೇಕು. ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವುದರಿಂದ ಜಾತಿಯ ಪಿಡುಗು ನಿವಾರಣೆ ಆಗುತ್ತದೆ’ ಎಂದು ಹೇಳಿದರು.
ಕಾಲಜ್ಞಾನಿ ವೀರಬ್ರಹ್ಮಯ್ಯ ಅವರ ಈ ತಪೋಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿದೆ. ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ‘ನವಜೀವನಕ್ಕೆ ಕಾಲಿಟ್ಟ ದಂಪತಿ ಸುಖ ಮತ್ತು ಸಂತೋಷದಿಂದ ಬದುಕಲಿ. ಇಲ್ಲಿ ಅಂತರ್ಜಾತಿ ವಿವಾಹಗಳು ಇಲ್ಲಿ ನಡೆದಿವೆ. ಜಾತಿಯೇ ನಮ್ಮ ಮೊದಲ ಶತ್ರು. ಈ ವಿಚಾರಗಳನ್ನು ನಾವು ಮಾತಿನಲ್ಲಿ ಮಾತ್ರ ಹೇಳುತ್ತೇವೆ. ಆದರೆ ಇಲ್ಲಿ ಈ ವಿಚಾರ ಜಾರಿಯಾಗಿದೆ’ ಎಂದರು.
ಜಾತಿ ಎನ್ನುವುದು ಸಾಮಾಜಿಕ ಪಿಡುಗು. ಆದ್ದರಿಂದ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ಅಗತ್ಯ. ಇಂತಹ ಸಾಮೂಹಿಕ ಅಂತರ್ಜಾತಿ ವಿವಾಹಗಳು ನಡೆಯುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಪುಲಿಕೇಶಿ ಸಂಘದ ಅಧ್ಯಕ್ಷ ಜಿ.ಚಂದ್ರಶೇಖರ್ ಮಾತನಾಡಿ, ಸಂಘವು ಹಲವು ಸಾಮಾಜಿಕ ಕೆಲಸಗಳನ್ನು ನಡೆಸುತ್ತಿದೆ. ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳ ಸಮಾಜದಲ್ಲಿ ಹೆಚ್ಚಬೇಕು ಎಂದರು.
ಡಾ.ಪ್ರೀತಿ ಸುಧಾಕರ್, ಜಿಲ್ಲಾಧಿಕಾರಿ ಪಿ.ರವೀಂದ್ರ, ನಟ ಅಭಿಮನ್ಯು ಕಾಶೀನಾಥ್ ನವಜೋಡಿಗಳಿಗೆ ಶುಭಕೋರಿದರು.
ಬಿಜೆಪಿ ಮುಖಂಡ ಕೆ.ವಿ. ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯಾಚಾರಿ, ಮಾಜಿ ಸದಸ್ಯರಾದ ಮಂಜುನಾಥಾಚಾರಿ, ಸತೀಶ್, ಪಾಪಾಗ್ನಿ ಮಠದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.