ADVERTISEMENT

ಚಿಕ್ಕಬಳ್ಳಾಪುರ | ದಿಬ್ಬೂರು ಗ್ರಾಮ ಪಂಚಾಯಿತಿ ಪಿಡಿಒ ವರ್ಗಾವಣೆ ರದ್ದತಿಗೆ ಆಗ್ರಹ

ದಿಬ್ಬೂರು ಗ್ರಾಮ ಪಂಚಾಯಿತಿ ಪಿಡಿಒ ವರ್ಗಾವಣೆ ಖಂಡಿಸಿ ವಿವಿಧ ಗ್ರಾಮಗಳ ಮಹಿಳೆಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 11:23 IST
Last Updated 22 ಜುಲೈ 2020, 11:23 IST
ದಿಬ್ಬೂರು ಗ್ರಾಮ ಪಂಚಾಯಿತಿ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.
ದಿಬ್ಬೂರು ಗ್ರಾಮ ಪಂಚಾಯಿತಿ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ದಿಬ್ಬೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆರ್.ಆಶಾ ಅವರನ್ನು ವರ್ಗಾವಣೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ದಿಬ್ಬೂರು, ದೊಡ್ಡತಮ್ಮನಹಳ್ಳಿ, ಚಲಕಾಯಲಪರ್ತಿ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ದೊಡ್ಡತಮ್ಮನಹಳ್ಳಿ ನಿವಾಸಿ ವರಲಕ್ಷ್ಮೀ ಮಾತನಾಡಿ, ‘ಸುಮಾರು 10 ವರ್ಷಗಳಿಂದ ಈ ಭಾಗದಲ್ಲಿ ಮಹಿಳೆಯರಿಗೆ ಪಂಚಾಯಿತಿಯ ಮೂಲಕ ಜಾರಿಯಾಗುವ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯೇ ಇರುತ್ತಿರಲಲ್ಲ. ಆದರೆ ದಿಬ್ಬೂರು ಗ್ರಾಮ ಪಂಚಾಯಿತಿಗೆ ಆಶಾ ಅವರು ಪಿಡಿಒ ಆಗಿ ಬಂದ ಬಳಿಕ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಆ ವಿಚಾರದಲ್ಲಿ ಸಾಕಷ್ಟು ಅರಿವು ಮೂಡಿಸಿದ್ದಾರೆ’ ಎಂದು ಹೇಳಿದರು.

‘ಕೊರೊನಾದಂತಹ ಕಷ್ಟ ಕಾಲದಲ್ಲಿ ಪಿಡಿಒ ಅವರು ಮನೆಮನೆಗೆ ಬಂದು ಉದ್ಯೋಗ ಚೀಟಿ ಮಾಡಿಸುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ಉದ್ಯೋಗ ಒದಗಿಸುವ ಕೆಲಸ ಮಾಡಿದ್ದಾರೆ. ನರೇಗಾ ಯೋಜನೆ ಅಡಿ ಸಾಕಷ್ಟು ಉಪಯುಕ್ತ ಕೆಲಸಗಳನ್ನು ಮಾಡಿದ್ದಾರೆ. ರಾಜಕೀಯ ಒತ್ತಡದಿಂದಾಗಿ ಇದೀಗ ಅವರನ್ನು ಏಕಾಏಕಿ ಬೇರೆಡೆ ವರ್ಗಾವಣೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಈ ಹಿಂದೆಲ್ಲ ನರೇಗಾ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಪಿಡಿಒ ಅವರು ಕಡಿವಾಣ ಹಾಕಿದ ಕಾರಣಕ್ಕೆ ಅದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ವರ್ಗಾವಣೆಗೆ ಲಾಬಿ ನಡೆಸಿವೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲ್ಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಅವರು ನಮ್ಮ ಮನವಿ ಪರಿಗಣಿಸಿ ಆಶಾ ಅವರ ವರ್ಗಾವಣೆ ರದ್ದು ಮಾಡಿ ದಿಬ್ಬೂರು ಗ್ರಾಮ ಪಂಚಾಯಿತಿಯಲ್ಲೇ ಮುಂದುವರಿಸಲು ಕ್ರಮಕೈಗೊಳ್ಳಬೇಕು’ ಎಂದರು.

ದ್ಯಾವಮ್ಮ, ಮುನಿರತ್ನಮ್ಮ, ಮಂಜುಳಾ, ವೆಂಕಟಲಕ್ಷ್ಮಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.