ADVERTISEMENT

ಚಿಕ್ಕಬಳ್ಳಾಪುರ| ಪಿಐಸಿಯು; ಸ್ವಯಂಪ್ರೇರಿತ ಪ್ರಕರಣದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:52 IST
Last Updated 9 ಡಿಸೆಂಬರ್ 2025, 5:52 IST
ದಿನ್ನೆಹೊಸಹಳ್ಳಿ ರಸ್ತೆಯ ಹಾಸ್ಟೆಲ್‌ನ ಗ್ರಂಥಾಲಯ ಪರಿಶೀಲಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ
ದಿನ್ನೆಹೊಸಹಳ್ಳಿ ರಸ್ತೆಯ ಹಾಸ್ಟೆಲ್‌ನ ಗ್ರಂಥಾಲಯ ಪರಿಶೀಲಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ   

ಚಿಕ್ಕಬಳ್ಳಾಪುರ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಸೋಮವಾರ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕಾರಾಗೃಹ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. 

ತಾಲ್ಲೂಕಿನ ಮಂಚನಬಲೆ ಗ್ರಾಮ ಬಿಜಿಎಸ್ ಶಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ನಡೆಸಿದರು. ಜಿಲ್ಲೆಯ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ನಡೆದಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಪ್ರಶಂಸಿಸಿದರು. ಮಕ್ಕಳ ಹಕ್ಕುಗಳು, ಅವುಗಳ ನಿವಾರಣೆ, ದೂರುಗಳನ್ನು ನೀಡುವ ಬಗ್ಗೆ ಮಾಹಿತಿ ನೀಡಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಶಶಿಧರ್ ಕೋಸಂಬಿ ಅವರು ಅಲ್ಲಿನ ಪ್ರತಿ ವಾರ್ಡ್‌ಗಳು, ಘಟಕಗಳಿಗೆ ಭೇಟಿ ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕಿ ಮಂಜುಳಾ ದೇವಿ ಅವರಿಂದ ಮಾಹಿತಿ ಪಡೆದರು. 

ADVERTISEMENT

‘ಪಿಐಸಿಯು ವಾರ್ಡ್‌ಗೆ ಸರ್ಕಾರ ಅನುದಾನ ನೀಡಿದೆ. ಕಟ್ಟಡವೂ ಆಗಿದೆ. ಉಪಕರಣಗಳು ಬಂದಿವೆ. ಆದರೆ ಸಿಬ್ಬಂದಿ ಕೊರತೆಯ ಕಾರಣ ಇನ್ನು ಕಾರ್ಯಾರಂಭ ಆಗಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಬೇಕು. ಮೂರು ದಿನಗಳಲ್ಲಿ ಈ ಬಗ್ಗೆ ಕ್ರಮ ಆಗದಿದ್ದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 47 ಮಕ್ಕಳು ಇದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು. ರೋಗಿಗಳ ಜೊತೆ ಮಾತುಕತೆ ನಡೆಸಿದ ಅಧ್ಯಕ್ಷರು, ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಬಿಸಿನೀರು, ಕುಡಿಯುವ ನೀರಿನ ಸೌಲಭ್ಯ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.

ತೆರೆಯದ ಗ್ರಂಥಾಲಯ ಅಸಮಾಧಾನ: ಅಣಕನೂರು ಬಳಿಯ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ ವೇಳೆ ಕಾರಾಗೃಹದಲ್ಲಿನ ಗ್ರಂಥಾಲಯಕ್ಕೆ ಬೀಗ ಹಾಕಲಾಗಿತ್ತು. ಯಾವುದೇ ಪತ್ರಿಕೆಗಳೂ ಇರಲಿಲ್ಲ. 

‘ಇಲ್ಲಿನ ಸ್ಥಿತಿ ನೋಡಿದರೆ ಗ್ರಂಥಾಲಯದ ಬಾಗಿಲು ಸಹ ತೆರೆಯುವಂತೆ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರಾಗೃಹದ ಅಡುಗೆ ಕೋಣೆಗೆ ಭೇಟಿ ನೀಡಿ ಊಟವನ್ನು ಪರಿಶೀಲಿಸಿದರು. 

ಬೆಳಿಗ್ಗೆ ಯಾವ ಉಪಾಹಾರ ಮಾಡಿದ್ದೀರಿ, ಉಪಾಹಾರ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಉಪಾಹಾರ ಖಾಲಿ ಆಗಿದೆ ಎಂದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷರು, ಆಕಸ್ಮಿಕವಾಗಿ ಯಾರಿಗಾದರೂ ಆಹಾರ ಸೇವನೆಯಿಂದ ಅನಾರೋಗ್ಯವಾದರೆ ಅದರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕಾರಾಗೃಹದಲ್ಲಿರುವ ಕೈದಿಗಳ ಬಗ್ಗೆ ವಿವರ ಪಡೆದರು.

ದಿನ್ನೆಹೊಸಹಳ್ಳಿ ರಸ್ತೆಯ ಹಾಸ್ಟೆಲ್‌ಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ಅಲ್ಲಿನ ಊಟದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ‘ಪತ್ರಿಕೆಗಳ ಓದು ಅತಿ ಮುಖ್ಯ. ಹಾಸ್ಟೆಲ್‌ಗಳಿಗೆ ಪತ್ರಿಕೆಗಳನ್ನು ತರಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪರಿಶೀಲನೆ

‘ತೆರೆದ ಮನೆ; ಜಾಗೃತಿ ಮೂಡಿಸಿ’

ಪ್ರತಿ ಗುರುವಾರ ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಶಾಲೆಗೆ ಹೋಗುವಾಗ ಮತ್ತು ಬರುವಾಗ ಯಾವ ರೀತಿ ಎಚ್ಚರವಹಿಸಬೇಕು ಎನ್ನುವ ಬಗ್ಗೆ ತಿಳಿ ಹೇಳಬೇಕು ಎಂದು ಶಶಿಧರ್ ಕೋಸಂಬಿ ಪೊಲೀಸರಿಗೆ ಕಿವಿಮಾತು ಹೇಳಿದರು.  ನಗರದ ಮಹಿಳಾ ಠಾಣೆಗೆ ಭೇಟಿ ನೀಡಿದ ಅವರು ಅಲ್ಲಿನ ರಿಜಿಸ್ಟಾರ್‌ಗಳನ್ನು ಪರಿಶೀಲಿಸಿದರು. ಈ ವೇಳೆ ಅಪೂರ್ಣವಾಗಿದ್ದ ಮಾಹಿತಿಗಳನ್ನು ಸೂಕ್ತವಾಗಿ ನಮೂದಿಸುವಂತೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.