ADVERTISEMENT

ಪುಂಡರ ವಿರುದ್ಧ ನಿರ್ಭಯವಾಗಿ ದೂರು ನೀಡಿ: ಪಿಎಸ್ಐ

ಪುಂಡರ ಮಾಹಿತಿ ನೀಡಲು ವಿದ್ಯಾರ್ಥಿನಿಯರಿಗೆ ಪಿಎಸ್‌ಐ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 5:55 IST
Last Updated 8 ಜನವರಿ 2021, 5:55 IST
ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕಿಯರ ಪೌಢಶಾಲೆಯ ವಿದ್ಯಾರ್ಥಿನಿಯರು ಪೊಲೀಸ್‌ ಠಾಣೆಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಬ್ ಇನ್‌ಸ್ಪೆಕ್ಟರ್‌ ಗೋಪಾಲರೆಡ್ಡಿ ಅವರಿಗೆ ದೂರಿದರು
ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕಿಯರ ಪೌಢಶಾಲೆಯ ವಿದ್ಯಾರ್ಥಿನಿಯರು ಪೊಲೀಸ್‌ ಠಾಣೆಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಬ್ ಇನ್‌ಸ್ಪೆಕ್ಟರ್‌ ಗೋಪಾಲರೆಡ್ಡಿ ಅವರಿಗೆ ದೂರಿದರು   

ಗುಡಿಬಂಡೆ: ‘ವಿದ್ಯಾರ್ಥಿನಿಯರು ಶಾಲೆಗೆ ಹೋಗುವಾಗ, ಬರುವಾಗ ರಸ್ತೆಯಲ್ಲಿ ಪುಂಡರು ಚುಡಾಯಿಸುವುದಾಗಲಿ ಅಥವಾ ಅಪಘಾತ, ಯಾವುದೇ ಅಹಿತಕರ ಘಟನೆಗಳು ನಡೆದಾಗ ಪ್ರತಿಯೊಬ್ಬರೂ ತಾವು ಪೊಲೀಸ್‌ ಎಂದು ಭಾವಿಸಿ, ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಅಪರಾಧ ತಡೆಗಟ್ಟಲು ಸಹಕಾರಿಯಾಗುತ್ತದೆ’ ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗೋಪಾಲರೆಡ್ಡಿ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪೊಲೀಸ್ ಠಾಣೆಗೆ ಭೇಟಿ ನೀಡಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರೊಂದಿಗೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿನಿಯರು ತಮ್ಮ ಸಂದೇಹಗಳನ್ನು ಕೇಳಿ ಬಗೆಹರಿಸಿಕೊಂಡರು.

‘ವಿದ್ಯಾರ್ಥಿನಿಯರು ತಾವು ಶಾಲೆಗೆ ಹೋಗುವಾಗ ಪುಂಡರು ಚುಡಾಯಿಸಿದ್ದಲ್ಲಿ ಯಾವುದೇ ಭಯವಿಲ್ಲದೇ ಪೊಲೀಸರಿಗೆ ದೂರು ನೀಡಿ. ಕೂಡಲೇ ಪುಂಡರ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತೇವೆ. ಜೊತೆಗೆ ನೀವು ದೂರು ನೀಡಿದ್ದೇವೆ ಎಂಬ ಭಯವೂ ಸಹ ಬೇಡ. ಯಾಕೆಂದರೆ ನಿಮ್ಮ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನಾವು ಬಹಿರಂಗಪಡಿಸುವುದಿಲ್ಲ. ತಾವುಗಳು ಕಷ್ಟಪಟ್ಟು ಓದಿ ತಮ್ಮ ಪೋಷಕರಿಗೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡಿ’ ಎಂದು ಗೋಪಾಲರೆಡ್ಡಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.