ಚಿಕ್ಕಬಳ್ಳಾಪುರ: ‘ಕ್ಷೇತ್ರದ ಗ್ರಾಮೀಣ ಜನರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಅನೇಕ ಯೋಜನೆಗಳನ್ನು ಜಾರಿ ತರಲಾಗಿದೆ. ಪೋಷಕರು ಸಹ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಲು ಕಾಳಜಿವಹಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಮಂಡಿಕಲ್ ಗ್ರಾಮದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ₨1.36 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಐ.ಟಿ.ಐ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪೋಷಕರು ಸಹ ತಾಂತ್ರಿಕ ಕೋರ್ಸ್‌ಗಳ ಬಗ್ಗೆ ಅರಿವು ಪಡೆದು ತಮ್ಮ ಮಕ್ಕಳಿಗೆ ಅವುಗಳನ್ನು ಸದಪಯೋಗಪಡಿಸಿಕೊಳ್ಳಲು ತಿಳಿ ಹೇಳಬೇಕು. ಮಕ್ಕಳ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.
‘ಮಂಡಿಕಲ್ ಹೋಬಳಿಯಲ್ಲಿ 2014 ರಲ್ಲಿ ಐಟಿಐ ಕಾಲೇಜನ್ನು ಮಂಜೂರು ಮಾಡಿಸಿ, ಕಂದಾಯ ಇಲಾಖೆಯಿಂದ ಐದು ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಲಾಗಿದೆ. ನೂತನ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ನೀಡಿದ್ದು, ಉತ್ತಮ ಗುಣಮಟ್ಟದಿಂದ ಕಟ್ಟಡ ನಿರ್ಮಾಣ ಮಾಡಲು ಸೂಚಿಸಿಲಾಗಿದೆ’ ಎಂದರು.
‘ಪ್ರಸ್ತುತ ಐ.ಟಿ.ಐ ಕಾಲೇಜಿನಲ್ಲಿ 49 ಜನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ನೂತನ ಕಟ್ಟಡದಲ್ಲಿ ಎರಡು ಕೊಠಡಿಗಳು ಹಾಗೂ ಪ್ರಾಂಶುಪಾಲರ ಕೊಠಡಿ, ದಾಸ್ತಾನು ಕೊಠಡಿ, ಪ್ರಯೋಗಾಲಯ ಸೇರಿದಂತೆ ಒಟ್ಟು ಎಂಟು ಕೊಠಡಿಗಳು, ಶೌಚಾಲಯಗಳನ್ನು ಒಳಗೊಂಡ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಲಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಶಿವಾನಂದ್, ಪೆರೇಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಚನ್ನಕೃಷ್ಣಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಸ್ವಾಮಿ, ಫಯಾಜ್, ಮುಖಂಡರಾದ ಮೋಹನ್ ರೆಡ್ಡಿ, ಇನಾಂದಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.