ADVERTISEMENT

ಬೆಲೆ ಕುಸಿತ: ಮಾವು ಬೆಳೆಗಾರರು ಕಂಗಾಲು

ಎಂ.ರಾಮಕೃಷ್ಣಪ್ಪ
Published 13 ಜೂನ್ 2025, 6:11 IST
Last Updated 13 ಜೂನ್ 2025, 6:11 IST
ಚಿಂತಾಮಣಿಯ ಮಂಡಿಯಲ್ಲಿ ಮಾರಾಟಕ್ಕೆ ಬಂದಿರುವ ಮಾವು
ಚಿಂತಾಮಣಿಯ ಮಂಡಿಯಲ್ಲಿ ಮಾರಾಟಕ್ಕೆ ಬಂದಿರುವ ಮಾವು   

ಚಿಂತಾಮಣಿ: ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆ ಮಾವು ಕೊಯ್ಲಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಮಾವಿನ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಂಬಲ ಬೆಲೆ ಘೋಷಣೆ ಮಾಡಬೇಕೆಂಬ ಒತ್ತಾಯ ಬಲವಾಗುತ್ತಿದೆ.

ಮಾವಿನ ಬೆಲೆ ಕುಸಿದ ಕಾರಣದಿಂದಾಗಿ ಮಾವಿನ ಹಣ್ಣಿನ ಮಾರಾಟದಿಂದ ತೋಟಗಳಲ್ಲಿ ಕಾಯಿಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಭರಿಸಲಾಗುತ್ತಿಲ್ಲ. ಹೀಗಾಗಿ ಬಹುತೇಕ ರೈತರು ಮರದಲ್ಲಿನ ಕಾಯಿಗಳನ್ನು ಕೊಯ್ಲು ಮಾಡದೆ ಹಾಗೆ ಬಿಟ್ಟಿದ್ದಾರೆ. ಮತ್ತೊಂದೆಡೆ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಹಣ್ಣುಗಳು ತೋಟಗಳಲ್ಲೇ ಕೊಳೆಯುವ ಅಥವಾ ಹುಳು ಹರಡುವ ಸಾಧ್ಯತೆ ಇದೆ ಎಂದು ಬೆಳೆಗಾರರ ಆತಂಕ. 

ಒಂದು ವಾರದಿಂದ ಜಿಲ್ಲೆಯಲ್ಲಿ ‘ಮಾವು’ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಶೇ 40ರಷ್ಟು ಮಾವು ಚಿಂತಾಮಣಿ ಮತ್ತು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ಬೆಳೆಯಲಾಗುತ್ತದೆ. ಇದೇ ಕಾರಣಕ್ಕಾಗಿ ಈ ಎರಡೂ ತಾಲ್ಲೂಕುಗಳು ಮಾವಿನ ಮಡಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ಪಾದನೆಯೂ ಕಡಿಮೆ. ಶೇ 40-50 ಮಾತ್ರ ಉತ್ಪಾದನೆಯನ್ನು ಮಾವು ಅಭಿವೃದ್ಧಿ ಮಂಡಳಿ ನಿರೀಕ್ಷಿಸಿದೆ.

ADVERTISEMENT

ಇಳುವರಿ ಕಡಿಮೆಯಾಗಿರುವ ವರ್ಷವೇ ಬೆಲೆ ಪಾತಾಳಕ್ಕೆ ಇಳಿದಿರುವುದು ರೈತರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಇದರ ನಡುವೆ, ಮಳೆಯಿಂದಾಗಿ ಕಾಯಿಗಳ ಮೇಲೆ ಕಪ್ಪು ಕಲೆ ಕಾಣಿಸಿಕೊಳ್ಳುತ್ತಿರುವುದು ಬೆಳೆಗಾರರ ನಿದ್ದೆಗೆಡಿಸಿದೆ. ಮರಗಳಿಂದ ಕಾಯಿ ಕಿತ್ತ ನಂತರ ಹೆಚ್ಚು ದಿನ ಇಡಲು ಆಗದು. 3–4 ದಿನಗಳಲ್ಲಿ ಬದಲಾಗತೊಡಗುತ್ತದೆ.

ತಾಲ್ಲೂಕಿನಲ್ಲಿ ತೋತಾಪುರಿ, ಬೆನಿಷಾ, ಬಾದಾಮಿ, ಮಲ್ಲಿಕಾ, ರಸಪುರಿ ತಳಿ ಹೆಚ್ಚಾಗಿ ಬೆಳೆಯಲಾಗಿದೆ. ಎಲ್ಲ ತಳಿಗಳ ಬೆಲೆಯು ಕುಸಿದಿದೆ. ಮಲ್ಲಿಕಾ ಮತ್ತು ಬಾದಾಮಿ ಮಾತ್ರ ಮಾರುಕಟ್ಟೆಗೆ ತರುವ ಖರ್ಚನ್ನು ಸರಿದೂಗಿಸಿಕೊಡುತ್ತಿದೆ. ತೋತಾಪುರಿ ಮತ್ತು ಬೆನಿಷಾ ತಳಿಯ ಬೆಲೆ ಪಾತಾಳಕ್ಕೆ ಕುಸಿದಿದೆ. ಅದರಲ್ಲೂ ತೋತಾಪುರು ತಳಿಯನ್ನು ಮಾರುಕಟ್ಟೆಗೆ ತರಲೇ ಬೇಡಿ ಎಂದು ಮಂಡಿಯವರು ಹೇಳುತ್ತಿದ್ದಾರೆ ಎಂದು ಬೆಳೆಗಾರರು ಅವಲತ್ತುಕೊಳ್ಳುತ್ತಾರೆ.

ಬೆನಿಷಾ ಟನ್‌ಗೆ ₹16 ಸಾವಿರ, ಬಾದಾಮಿ ಮತ್ತು ಮಲ್ಲಿಕಾ ಟನ್‌ಗೆ ₹30,000 ಆಸು-ಪಾಸಿನಲ್ಲಿ ಹರಾಜು ನಡೆಯುತ್ತಿದೆ. ತೋಟದಲ್ಲಿ ಮರಗಳಿಂದ ಕಾಯಿ ಕೀಳುವ ಆಳುಗಳ ಕೂಲಿ, ಮಾರುಕಟ್ಟೆ ಸಾಗಿಸುವ ಟ್ರ್ಯಾಕ್ಟರ್ ಬಾಡಿಗೆ, ಕಮಿಷನ್ ಸೇರಿ ಟನ್‌ಗೆ ₹10,000 ಖರ್ಚು ಆಗುತ್ತದೆ. ಕಷ್ಟಪಟ್ಟು ಮಾರುಕಟ್ಟೆಗೆ ತಂದು ಹಾಕಿ ಬರಿಗೈಲಿ ವಾಪಸ್ ಹೋಗುವಂತಾಗಿದೆ ಎಂಬುದು ರೈತರ ಅಳಲು.

ಡಿಸೆಂಬರ್, ಜನವರಿಯಲ್ಲಿ ಮರಗಳಲ್ಲಿ ಬಿಟ್ಟಿದ್ದ ಹೂವು ನೋಡಿ ತೋಟಗಳ ಫಸಲನ್ನು ಖರೀದಿಸಿದ್ದ ವ್ಯಾಪಾರಿಗಳು ಸಹ ಆತಂಕಕ್ಕೆ ಒಳಗಾಗಿದ್ದಾರೆ. ಒಂದು ವಾರದಲ್ಲಿ ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿದಿದೆ. ಎರಡು ವಾರಗಳ ಹಿಂದೆ ಮಾರಾಟ ಮಾಡಿದ್ದ ವ್ಯಾಪಾರಿಗಳಲ್ಲೂ ತಳಮಳ ಉಂಟಾಗಿದೆ.

ಚಿಂತಾಮಣಿ ತಾಲ್ಲೂಕಿನಲ್ಲಿ ಮಾವು ಬೆಲೆ ಕುಸಿತದಿಂದ ಕೊಯ್ಲು ಮಾಡದೆ ತೋಟಗಳಲ್ಲೇ ಉಳಿದಿರುವ ಮಾವು
ಸರ್ಕಾರ ಬೆಳೆಗಾರರ ಸಂಕಷ್ಟ ಅರ್ಥಮಾಡಿಕೊಳ್ಳಬೇಕು. ಬೆಂಬಲ ಬೆಲೆ ಘೋಷಣೆ ಮಾಡಿದರೆ ಹಾಕಿರುವ ಬಂಟವಾಳವಾದರೂ ಸಿಗುತ್ತದೆ. 
ಕುರುಟಹಳ್ಳಿ ರಾಧಾಕೃಷ್ಣ ಮಾವು ಬೆಳೆಗಾರ
ಎಕರೆಗೆ ಕನಿಷ್ಠ ₹20000 ಬೆಂಬಲ ಬೆಲೆ ನೀಡಬೇಕು. ಟನ್ ಲೆಕ್ಕದಲ್ಲಿ ಬೆಂಬಲ ಬೆಲೆ ಘೋಷಿಸಿದರೆ ಗೋಲ್–ಮಾಲ್ ನಡೆಯುತ್ತದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ದಾಗ ಟೊಮೆಟೊಗೆ ಟನ್ ಲೆಕ್ಕದಲ್ಲಿ ಬೆಂಬಲ ಬೆಲೆ ನೀಡಿದ್ದರಿಂದ ಅವ್ಯವಹಾರವಾಗಿತ್ತು.
ಸೀಕಲ್ ರಮಣಾರೆಡ್ಡಿ ಮಾವು ಬೆಳೆಗಾರ

ಜ್ಯೂಸ್ ಫ್ಯಾಕ್ಟರಿ ಇಲ್ಲದಿರುವುದು ಸಮಸ್ಯೆ

ಮಾವಿನ ತೋಟದ ಉಳುಮೆ ಗೊಬ್ಬರ ನೀರು ಔಷಧಿ ಕಾವಲು ಸೇರಿ ಎಕರೆಗೆ ಸುಮಾರು ₹30–₹40 ಸಾವಿರ ಖರ್ಚು ಬರುತ್ತದೆ. ಉತ್ತಮವಾಗಿ ಇಳುವರಿ ಬಂದರೆ ಎಕರೆಗೆ 4–5 ಟನ್ ಮಾವಿನ ಉತ್ಪಾದನೆ ಆಗುತ್ತದೆ. ಈ ವರ್ಷ ಸರಾಸರಿ ಎಕರೆಗೆ 1–2 ಟನ್ ಇಳುವರಿ ಮಾತ್ರ ದೊರೆಯಬಹುದು ಎಂದು ತೋಟಗಾರಿಕೆ ಇಲಾಖೆಯೇ ಅಂದಾಜು ಮಾಡಿದೆ. ಇದನ್ನೆಲ್ಲ ತುಲನೆ ಮಾಡಿದರೆ ರೈತರ ಪರಿಸ್ಥಿತಿ ಶೋಚನೀಯವಾಗಿದೆ ಎನ್ನುತ್ತಾರೆ ರೈತ ಮುಖಂಡ ರಮಣಾರೆಡ್ಡಿ. ಮಾವು ಬೆಲೆ ಕುಸಿತಕ್ಕೆ ಅನೇಕ ರೀತಿಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಮಾವಿನ ರಫ್ತು ಕಡಿಮೆಯಾಗಿದೆ. ಎಲ್ಲ ಕಡೆಯ ಮಾವು ಒಂದೇ ಬಾರಿಗೆ ಕೊಯ್ಲಿಗೆ ಬಂದಿದೆ. ಮಾವು ಬೆಳೆಯ ವಿಸ್ತಾರವೂ ಜಾಸ್ತಿಯಾಗಿದೆ. ಜ್ಯೂಸ್ ಫ್ಯಾಕ್ಟರಿಗಳು ಸಮರ್ಪಕವಾಗಿ ನಡೆಯದಿರುವುದು. ನೆರೆಯ ಆಂಧ್ರಪ್ರದೇಶದ ಚಿತ್ತೂರು ಕಡೆಯ ವ್ಯಾಪಾರಿಗಳು ರಾಜ್ಯದ ಹಣ್ಣನ್ನು ಖರೀದಿಸದಿರುವುದು ಸೇರಿದಂತೆ ವಿವಿಧ ಕಾರಣಗಳನ್ನು ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.