ಚಿಂತಾಮಣಿ: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನ ಗುರುವಾರ ಬೆಲೆ ಏರಿಕೆಯ ಬಿಸಿಯ ನಡುವೆಯೂ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಹೂವು ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಈ ವರ್ಷ ಮುಂಗಾರು ಕೈಕೊಟ್ಟಿದ್ದು, ನಿನ್ನೆ ಮೊನ್ನೆ ಸ್ವಲ್ಪ ಮಳೆಯಾಗಿದೆ. ಬರಗಾಲದ ಆತಂಕದ ನಡುವೆಯೂ ಜನರು ಖರೀದಿಗೆ ಮುಗಿಬಿದ್ದಿದ್ದರು.
ಹಿಂದೆ ವರಮಹಾಲಕ್ಷ್ಮಿ ಹಬ್ಬ ನಗರ ಮತ್ತು ಪಟ್ಟಣಗಳಿಗೆ ಸೀಮಿತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗ್ರಾಮಗಳಲ್ಲೂ ಈ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಹಬ್ಬಕ್ಕೆ ಹೂವು, ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಹೀಗಾಗಿ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ ಎಂದು ವ್ಯಾಪಾರಿ ಅಲ್ಲಾ ಬಕಾಶ್ ಹೇಳಿದರು.
ವಾರದ ಹಿಂದೆ ಕೆ.ಜಿ.ಗೆ ₹400-500 ರವರೆಗೆ ಮಾರಾಟವಾಗುತ್ತಿದ್ದ ಕನಕಾಂಬರ ಹೂವು ಹಬ್ಬದ ಮುನ್ನಾ ದಿನ ₹2,000 ಗಡಿ ದಾಟಿದೆ. ಮಲ್ಲಿಗೆ ಹೂವಿನ ದರವು 2–3 ದಿನಗಳಲ್ಲಿ ₹1,000 ರಿಂದ ₹2,500ಕ್ಕೆ ಏರಿದೆ. ಕಾಕಡ ’900 ರಿಂದ ₹1,000, ಸೇವಂತಿಗೆ ₹400, ಚೆಂಡು ಹೂವು ₹400, ರೋಸ್, ಬಟನ್ಸ್ ಸೇರಿದಂತೆ ಎಲ್ಲ ಹೂವುಗಳ ಬೆಲೆಯು ಗಗನಕ್ಕೇರಿದೆ.
ಹಣ್ಣುಗಳ ಬೆಲೆಯೂ ಗ್ರಾಹಕರ ಕೈಗೆ ಎಟುಕದಂತಿತ್ತು. ಸೇಬು ಕೆ.ಜಿ.ಗೆ ₹200 ರಿಂದ ₹350ರವರೆಗೆ ಮಾರಾಟವಾಗುತ್ತಿದೆ. ದಾಳಿಂಬೆ ₹250, ಕಿತ್ತಳೆಹಣ್ಣು ₹160, ಸಪೋಟ ₹130, ಮರಸೇಬು ₹150, ಏಲಕ್ಕಿ ಬಾಳೆಹಣ್ಣು ₹120, ಪಚ್ಚೆ ಬಾಳೆ ₹60ರಂತೆ ಮಾರಾಟವಾಗುತ್ತಿದೆ. ಚಿಕ್ಕ ಬಾಳೆಕಂದು ಜೋಡಿಗೆ ₹50 ರಿಂದ ₹80, ದೊಡ್ಡಕಂದು ₹100–120ಕ್ಕೆ ಬಿಕರಿಯಾಗುತ್ತಿತ್ತು.
ಹಬ್ಬದ ವ್ಯಾಪಾರಕ್ಕಾಗಿಯೇ ನಗರದ ಅಂಬೇಡ್ಕರ್ ಭವನದ ಪಕ್ಕದ ಗ್ರಂಥಾಲಯದ ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ. ಹೂವು, ಹಣ್ಣು, ಬಾಳೆ ದಿಂಡುಗಳು, ತಾವರೆ ಹೂವು, ಗೇದಿಗೆ ಹೂಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಎಲ್ಲ ವಸ್ತುಗಳು ಒಂದೇ ಕಡೆ ದೊರೆಯುವುದರಿಂದ ಗ್ರಾಹಕರಿಗೂ ಅನುಕೂಲವಾಗಿದೆ.
ಕೆಲವರು ಬೆಲೆ ಏರಿಕೆಯ ಮುನ್ಸೂಚನೆಯಿಂದ 2–3 ದಿನಗಳ ಮುಂಚೆ ಬಾಳೆಹಣ್ಣು, ಫೈನಾಪಲ್, ಸಪೋಟಾ ಮತ್ತಿತರ 5 ವಿಧಧ ಹಣ್ಣುಗಳನ್ನು ಖರೀದಿಸಿಟ್ಟುಕೊಂಡಿದ್ದಾರೆ.
ಬಟ್ಟೆ ಅಂಗಡಿಗಳಲ್ಲಿಯೂ ಖರೀದಿ ಹೆಚ್ಚಾಗಿತ್ತು. ಲಕ್ಷ್ಮೃಿ ಮೂರ್ತಿ, ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ತಟ್ಟೆ, ಕಳಶ, ಮುಖವಾಡ, ಪ್ರಭಾವಳಿ, ಹಸಿರು ಬಳೆ ಮತ್ತಿತರ ಅಲಂಕಾರಿಕ ವಸ್ತುಗಳ ಅಂಗಡಿಗಳಲ್ಲಿ ಜನ ಗುಂಪು ಗುಂಪಾಗಿ ಸೇರಿದ್ದರು.
ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹಬ್ಬಗಳ ಆಚರಣೆ ವೇಳೆ ಬೆಲೆ ಏರಿಕೆ ಲೆಕ್ಕ ಹಾಕಿಕೊಂಡು ಕೂರಲಾಗುವುದಿಲ್ಲ. ಹಬ್ಬ ಆಚರಿಸುವುದು ನಿಶ್ಚಯವಾದ ಮೇಲೆ ತೊಂದರೆ ಸಹಿಸಿಕೊಳ್ಳಲೇ ಬೇಕು ಎನ್ನುತ್ತಾರೆ ಗೃಹಿಣಿ ಪೂಜಾ.
ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ | ಹೂವು ಹಣ್ಣು ದುಬಾರಿ, ಗ್ರಾಹಕರ ಕೈಗೆಟುಕದ ಬೆಲೆ | ಪೂಜಾ ಸಾಮಗ್ರಿಗಳ ಬಿರುಸಿನ ವ್ಯಾಪಾರ
ಬೀದಿಬದಿ ವ್ಯಾಪಾರಕ್ಕೆ ಕಡಿವಾಣ
ನಗರದ ರಸ್ತೆಗಳಲ್ಲಿ ಹಬ್ಬದ ವಸ್ತುಗಳ ಮಾರಾಟಕ್ಕೆ ನಗರಸಭೆ ಮತ್ತು ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ. ಪ್ರತಿವರ್ಷ ಸಾಮಾನ್ಯವಾಗಿ ನಗರದ ಜೋಡಿ ರಸ್ತೆ ಐ.ಡಿ.ಎಸ್.ಎಂ.ಟಿ ಚೇಳೂರು ರಸ್ತೆ ಸರ್ಕಾರಿ ಬಸ್ ನಿಲ್ದಾಣದ ಸುತ್ತಮುತ್ತಲು ಬೀದಿಬದಿ ವ್ಯಾಪಾರ ಗುರುವಾರ ಬೆಳಿಗ್ಗೆಯಿಂದಲೇ ಬಿರುಸಾಗಿ ನಡೆಯುತ್ತಿತ್ತು. ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿತ್ತು. ಸಂಜೆ ಹೊತ್ತಿಗೆ ಮಾರುಕಟ್ಟೆ ಪ್ರದೇಶಗಳು ಹಾಗೂ ರಸ್ತೆಗಳಲ್ಲಿ ಜನದಟ್ಟಣೆ ಕಾಣಿಸಿಕೊಂಡು ಹಬ್ಬದ ವಹಿವಾಟು ರಾತ್ರಿಯವರೆಗೂ ಮುಂದುವರೆದು ರಸ್ತೆಗಳಲ್ಲಿ ಜನರ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿತ್ತು. ನಗರದ ಜೋಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇರುತ್ತಿತ್ತು. ಈ ವಾತಾವರಣವನ್ನು ಪೊಲೀಸರು ಈ ಬಾರಿ ತಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.