ADVERTISEMENT

ಚಿಕ್ಕಬಳ್ಳಾಪುರ: ಪಿಯುಸಿ ಫಲಿತಾಂಶದಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿದ ಜಿಲ್ಲೆ

ಈ ಬಾರಿ ಶೇ 73.74 ರಷ್ಟು ವಿದ್ಯಾರ್ಥಿಗಳು ತೇರ್ಗಡೆ, ರಾಜ್ಯಮಟ್ಟದಲ್ಲಿ 9ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 13:06 IST
Last Updated 14 ಜುಲೈ 2020, 13:06 IST
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಪಿಯುಸಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಫಲಿತಾಂಶ ನೋಡಿದರು.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಪಿಯುಸಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಫಲಿತಾಂಶ ನೋಡಿದರು.   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಹೊಸಬರ ಪೈಕಿ ಶೇ 73.74 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟಾರೆ ಶೇ 67.02ರಷ್ಟು ಫಲಿತಾಂಶ ದೊರೆತಿದೆ. ಈ ಮೂಲಕ ಜಿಲ್ಲೆ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದಿದೆ.

ಕಳೆದ ವರ್ಷ 13ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ನಾಲ್ಕು ಸ್ಥಾನಗಳಲ್ಲಿ ಮೇಲೇರಿದೆ. ಜತೆಗೆ, ಶೇ3.63 ರಷ್ಟು ಫಲಿತಾಂಶ ವೃದ್ಧಿಸಿದೆ. ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ (ಶೇ 71.88) ಸಾಧಿಸಿದ್ದು, ಶೇ 61.97 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಪರೀಕ್ಷೆ ಎದುರಿಸಿದ 3,312 ಹಳ್ಳಿಯ ವಿದ್ಯಾರ್ಥಿಗಳಲ್ಲಿ 2,517 ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ನಗರ ಪ್ರದೇಶದ 9,832 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆ ಪೈಕಿ 6,292 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 4,659 ವಿದ್ಯಾರ್ಥಿಗಳಲ್ಲಿ 3790, ಕಲಾ ವಿಭಾಗದಲ್ಲಿ 2,149 ಅಭ್ಯರ್ಥಿಗಳ ಪೈಕಿ 777 ಮತ್ತು ವಾಣಿಜ್ಯ ವಿಭಾಗದಲ್ಲಿ 6,336 ವಿದ್ಯಾರ್ಥಿಗಳಲ್ಲಿ 4,242 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕನ್ನಡ ಮಾಧ್ಯಮದವರಿಗಿಂತ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಹೆಚ್ಚು (ಶೇ 77.09) ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡ 9,158 ವಿದ್ಯಾರ್ಥಿಗಳ ಪೈಕಿ 7,060, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 3,986 ವಿದ್ಯಾರ್ಥಿಗಳಲ್ಲಿ 1,749 ಜನ ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.