
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಾಯಿ ಕಡಿತ ಮತ್ತು ರೇಬಿಸ್ ರೋಗದ ಕುರಿತು ಜಿಲ್ಲಾಡಳಿತ ಮತ್ತು ಪಶು ಪಾಲನಾ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯಲ್ಲಿ 2025ರ ಆ.28ರಿಂದ ಸೆ.29ರವರೆಗೆ 10 ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗಿದೆ. ಶಾಲೆಗಳಿಗೆ ಭೇಟಿ ನೀಡಿ ರೇಬಿಸ್ ಕುರಿತು 237 ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ನಡೆಸಿದೆ.
ಈ ನಡುವೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ವಿಚಾರದಲ್ಲಿ ಸೂಕ್ತ ಸಹಕಾರ ದೊರೆಯುತ್ತಿಲ್ಲ ಎನ್ನುವ ಆರೋಪಗಳು ಪಶುಪಾಲನಾ ಇಲಾಖೆಯಿಂದ ಕೇಳಿ ಬರುತ್ತಿವೆ.
ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ವಿಪರೀತವಾಗಿವೆ. ಜಿಲ್ಲೆಯ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆದು ಹಲವು ವರ್ಷಗಳೇ ಕಳೆದಿವೆ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷ ಹಣ ಮೀಸಲಿಟ್ಟಿದ್ದರೂ ಶಸ್ತ್ರಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಪ್ರಸಕ್ತ ವರ್ಷ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆದಿದೆ.
2025ರ ಸೇರಿ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 97,666 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಕೋವಿಡ್ ವರ್ಷಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. ಈ ವರ್ಷಗಳಲ್ಲಿ ಮಾತ್ರ ನಾಯಿ ಕಡಿತದ ಪ್ರಕರಣಗಳು ಕಡಿಮೆ ಇವೆ. ಉಳಿದಂತೆ ಪ್ರತಿ ವರ್ಷವೂ ದೊಡ್ಡ ಸಂಖ್ಯೆಯಲ್ಲಿಯೇ ನಾಯಿ ದಾಳಿ ವರದಿಯಾಗಿವೆ.
ಹೀಗಿರುವಾಗ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಲು ಮುತುವರ್ಜಿವಹಿಸಬೇಕು. ಆದರೆ ಈ ಕೆಲಸ ಆಗುತ್ತಿಲ್ಲ.
‘ಬೀದಿ ನಾಯಿಗಳನ್ನು ನಗರಸಭೆಯ ಸ್ಥಳೀಯ ಸಿಬ್ಬಂದಿ ಹಿಡಿಯುವುದು ಕಷ್ಟ. ಆದ್ದರಿಂದ ಯಾರಾದರೂ ಹೊರಗಿನವರನ್ನು ಕರೆಯಿಸಿ ನಾಯಿಗಳನ್ನು ಹಿಡಿದುಕೊಂಡರೆ ನಮ್ಮ ಸಿಬ್ಬಂದಿಯೇ ರೇಬಿಸ್ ಲಸಿಕೆ ಹಾಕುವರು. ಆದರೆ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಸಹಕಾರ ದೊರೆಯುತ್ತಿಲ್ಲ’ ಎನ್ನುತ್ತಾರೆ ಪಶುಪಾಲನಾ ಇಲಾಖೆ ಸಿಬ್ಬಂದಿ.
ನಾಯಿ ಕಡಿತದಿಂದ 2016ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 16 ಜನರು ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಒಬ್ಬರಾದರೂ ಜಿಲ್ಲೆಯಲ್ಲಿ ನಾಯಿ ಕಡಿತದಿಂದ ಮರಣಹೊಂದಿದ್ದಾರೆ. 2016ರಲ್ಲಿ ಶಿಡ್ಲಘಟ್ಟ, 2018ರಲ್ಲಿ ಬಾಗೇಪಲ್ಲಿ,2024 ಮತ್ತು 2025ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ತಲಾ ಒಬ್ಬರು, 2017ರಲ್ಲಿ ಶಿಡ್ಲಘಟ್ಟ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು, 2019ರಲ್ಲಿ ಗೌರಿಬಿದನೂರು ಮತ್ತು ಗುಡಿಬಂಡೆಯ ತಲಾ ಒಬ್ಬರು, 2021ರಲ್ಲಿ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ನಾಯಿ ಕಡಿತದಿಂದ ಮರಣಹೊಂದಿದ್ದಾರೆ. 2022ರಲ್ಲಿ ಬಾಗೇಪಲ್ಲಿಯಲ್ಲಿ ಇಬ್ಬರು ಮತ್ತು ಗೌರಿಬಿದನೂರಿನಲ್ಲಿ ಇಬ್ಬರು, 2023ರಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ನಾಯಿ ಕಡಿತದಿಂದ ಜೀವ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.