ADVERTISEMENT

ಗೋಣಿಚೀಲಕ್ಕೆ ಬರ; ರಾಜ್ಯದಲ್ಲಿ ರಾಗಿ ಖರೀದಿಗೆ ಗ್ರಹಣ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಫೆಬ್ರುವರಿ 2026, 5:38 IST
Last Updated 7 ಫೆಬ್ರುವರಿ 2026, 5:38 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿಕ್ಕಬಳ್ಳಾಪುರ: ಗೋಣಿಚೀಲಗಳಿಗೆ ಸಮಸ್ಯೆ ಎದುರಾಗಿರುವ ಕಾರಣ ರಾಜ್ಯದಲ್ಲಿ ರಾಗಿ ಖರೀದಿ ಪ್ರಕ್ರಿಯೆ ಇನ್ನೂ‌ ಆರಂಭವಾಗಿಲ್ಲ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಮುಗಿದು ಎರಡು ತಿಂಗಳು ಸಮೀಪಿಸುತ್ತಿದ್ದರೂ ಖರೀದಿ ಪ್ರಕ್ರಿಯೆ ಶುರುವಾಗಿಲ್ಲ. 

ADVERTISEMENT

ಇಂದು ಅಥವಾ ನಾಳೆ ರಾಗಿ ಖರೀದಿಸಬಹುದು ಎಂದು ಕಾಯುತ್ತಿರುವ ರೈತರು ಪ್ರತಿನಿತ್ಯ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಅಧಿಕಾರಿಗಳಿಂದಲೂ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಗೊಣಗುತ್ತಿದ್ದಾರೆ. 

ರಾಜ್ಯದಲ್ಲಿ ಪ್ರಸಕ್ತ ವರ್ಷ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 60 ಲಕ್ಷ ಕ್ವಿಂಟಲ್ ರಾಗಿ ಮಾರಾಟಕ್ಕೆ 2,57,206 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕ್ವಿಂಟಲ್ ರಾಗಿಗೆ ₹4,886 ದರ ನಿಗದಿ ಮಾಡಲಾಗಿದೆ. 2005ರ ಡಿ.15ರವರೆಗೆ ರೈತರ ಹೆಸರು ನೋಂದಾಯಿಸಿಕೊಳ್ಳಲಾಗಿದೆ.

ಜನವರಿ ಮೊದಲ ವಾರದಿಂದ ಖರೀದಿ ಪ್ರಕ್ರಿಯೆ ಆರಂಭಿಸುವುದಾಗಿ ಸರ್ಕಾರ ತಿಳಿಸಿತ್ತು. ಕರ್ನಾಟಕ ಆಹಾರ ನಿಗಮ ಈ ಖರೀದಿ ಪ್ರಕ್ರಿಯೆಯ ಏಜೆನ್ಸಿಯಾಗಿದೆ.

60 ಲಕ್ಷ ಕ್ವಿಂಟಲ್ ರಾಗಿ ತುಂಬಲು ಅಂದಾಜು 1.20 ಕೋಟಿ ಗೋಣಿ ಚೀಲಗಳ ಅಗತ್ಯವಿದೆ. ಒಂದು ಚೀಲಕ್ಕೆ ಗರಿಷ್ಠ 50 ಕೆ.ಜಿ ರಾಗಿ ತುಂಬಿಸಲಾಗುತ್ತದೆ. ಪ್ರತಿ ವರ್ಷವೂ ಕೋಲ್ಕತ್ತದಿಂದ ಗೋಣಿಚೀಲ ಖರೀದಿಸಲಾಗುತ್ತದೆ.

ಈ ಬಾರಿ ಗೋಣಿಚೀಲಗಳು ಬರುವುದು ತಡವಾದ ಕಾರಣ ‌ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಹಿರಿಯ ಅಧಿಕಾರಿಗಳು ಕೋಲ್ಕತ್ತಕ್ಕೂ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.