
ಚಿಂತಾಮಣಿ: ತಾಲ್ಲೂಕಿನ ಬೋಮ್ಮೇಪಲ್ಲಿ, ಯನಮಲಪಾಡಿ, ಅಂಕಾಲಮಡಗು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಮೂರು ವ್ಯವಸಾಯ ಸೇವಾ ಸಹಕಾರ ಸಂಘಗಳ ಅಡಿಯಲ್ಲಿ ಸುಮಾರು 500 ಮಹಿಳಾ ಸಂಘಗಳು ರಚನೆಯಾಗಿವೆ. ಒಂದು ಸಂಘಕ್ಕೆ ₹ 5 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ಅದರಲ್ಲಿ ₹ 4 ಲಕ್ಷ ಮಾತ್ರ ಸಾಲ ನೀಡಿದ್ದು, ಉಳಿದ ₹1 ಲಕ್ಷ ಠೇವಣಿ ಮಾಡಿಕೊಳ್ಳಲಾಗಿದೆ. ಆದರೆ, ಆ ಠೇವಣಿಗೆ ಯಾವುದೇ ದಾಖಲೆ ಪತ್ರ ನೀಡಿಲ್ಲ ಎಂದು ಆರೋಪಿಸಿದರು.
ಸಹಕಾರ ಸಂಘಗಳು ಖರ್ಚು ವೆಚ್ಚಕ್ಕಾಗಿ ಪ್ರತಿ ಮಹಿಳಾ ಸಂಘದಿಂದ ₹35 ಸಾವಿರ ಹಿಡಿದುಕೊಂಡಿದ್ದಾರೆ. 2017-18 ಮತ್ತು 2018-19 ರಲ್ಲಿ ಸರ್ಕಾರದಿಂದ ₹50 ಸಾವಿರ ಮತ್ತು ₹1 ಲಕ್ಷ ಸಾಲ ಮನ್ನಾ ಆಗಿತ್ತು. ಆದರೆ, ಸಾಲ ಮನ್ನಾವಾಗಿರುವ ಮೊತ್ತವನ್ನು ರೈತರಿಗೆ ನೀಡದೆ ನೇರವಾಗಿ ಡಿಸಿಸಿ ಖಾತೆಗೆ ಜಮಾ ಮಾಡಿಕೊಂಡು, ಕೋಟ್ಯಾಂತರ ರೂಗಳನ್ನು ಸಹಕಾರ ಸಂಘದವರೇ ಡ್ರಾ ಮಾಡಿಕೊಂಡಿದ್ದಾರೆ. ಹಾಗಾಗಿ ಸಂಘಗಳ ಕಾರ್ಯದರ್ಶಿ ಮೇಲೆ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರಿ ಸಾರಿಗೆ ಯೋಜನೆಯಡಿಯಲ್ಲಿ ಕುರುಬೂರು ಸಹಕಾರ ಸಂಘವು ಮಿನಿ ಬಸ್‌ಗಳನ್ನು ಖರೀದಿಸಿದ್ದಾರೆ. ಅದೇ ಬಸ್‌ಗಳ ಪೋಟೋ ಹಾಕಿಕೊಂಡು ಸಹಕಾರ ಸಂಘಗಳಿಂದ ₹ 20 ಲಕ್ಷ ಡ್ರಾ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ. ರೈತರಿಗೆ ಉಚಿತ ಮಣ್ಣು ಪರೀಕ್ಷೆ ಯೋಜನೆಯಡಿ ಲಕ್ಷಾಂತರ ಹಣ ಡ್ರಾ ಮಾಡಿಕೊಂಡಿದ್ದಾರೆ. ಯನಮಲಪಾಡಿ, ಬೋಮ್ಮೇಪಲ್ಲಿ ಸಂಘಗಳಲ್ಲಿ ಗೊಬ್ಬರ ಮಾರಾಟ ಮಾಡದಿದ್ದರೂ, ಮಾರಾಟದ ಹೆಸರಿನಲ್ಲಿ ₹ 70 ರಿಂದ 90 ಲಕ್ಷ ನುಂಗಿ ನೀರು ಕುಡಿದಿದ್ದಾರೆ ಎಂದು ಆರೋಪಿಸಿದರು.
ಯನಮಲಪಾಡಿ, ಬೋಮ್ಮೇಪಲ್ಲಿ ಸಂಘಗಳ ಕಟ್ಟಡ ದುರಸ್ತಿಗೆಂದು ₹2 ಕೋಟಿ ಹಣ ತೆಗೆದರೂ ದುರಸ್ತಿ ಕಾರ್ಯವಾಗಿಲ್ಲ. 25 ಜನ ರೈತರಿಗೆ ಪಶುಸಂಗೋಪನೆ ಇಲಾಖೆಯಿಂದ ಮಂಜೂರಾಗಿರುವ ಸಹಾಯಧನವನ್ನು ರೈತರಿಗೆ ವಿತರಿಸಿಲ್ಲ. ರೈತರಿಗೆ ಸಾಲ ನೀಡುವುದಾಗಿ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಸಾಲ ಮಂಜೂರಾಗಿಲ್ಲ ಎಂದು ಮೋಸ ಮಾಡಿದ್ದಾರೆ ಎಂದು ದೂರಿದರು.
ರೈತರು ಪಡೆದ ಸಾಲ ಹಿಂಪಡೆಯುವಾಗ ಶೇ 10 ರಷ್ಟನ್ನು ಷೇರು ಮೊತ್ತವೆಂದು ಕಡಿತ ಮಾಡಿಕೊಳ್ಳುತ್ತಾರೆ. ಆದರೆ, ಇದನ್ನು ಪಾಸ್‌ಬುಕ್ ನಲ್ಲಿ ನಮೂದು ಮಾಡುವುದಿಲ್ಲ. ನಕಲಿ ಸ್ತ್ರೀ ಶಕ್ತಿ ಸಂಘಗಳು ಹಾಗೂ ಒಂದು ಸಂಘವನ್ನು ಎರಡು ಸಂಘವನ್ನಾಗಿ ದಾಖಲೆ ತೋರಿಸಿ ಕೋಟ್ಯಾಂತರ ಅವ್ಯವಹಾರ ನಡೆಸಿದ್ದಾರೆ. ಹಾಗಾಗಿ ಸೂಕ್ತ ತನಿಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ವೆಂಕಸುಬ್ಬಾರೆಡ್ಡಿ, ಜಿ.ಎಂ.ಕೋನಪ್ಪ, ಎಂ.ಯಲ್ಲಪ್ಪ, ಎಸ್.ವಿ.ಗಂಗುಲಪ್ಪ, ಎಸ್.ವೆಂಕಟರೆಡ್ಡಿ, ವೆಂಕಟರವಣಪ್ಪ, ವೆಂಕಟಸ್ವಾಮಿ, ಪಿ.ವಿ.ಸೀತಾರಾಮರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.