ADVERTISEMENT

ಶಿಡ್ಲಘಟ್ಟ| ರಾಜೀವ್‌ಗೌಡರನ್ನು ಕ್ಷೇತ್ರದಿಂದ ಹೊರ ಹಾಕಬೇಕು: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:54 IST
Last Updated 15 ಜನವರಿ 2026, 6:54 IST
ಶಿಡ್ಲಘಟ್ಟದಲ್ಲಿ ಬುಧವಾರ ಜೆಡಿಎಸ್ ಮುಖಂಡ ಬಂಕ್ ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಶಿಡ್ಲಘಟ್ಟದಲ್ಲಿ ಬುಧವಾರ ಜೆಡಿಎಸ್ ಮುಖಂಡ ಬಂಕ್ ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಶಿಡ್ಲಘಟ್ಟ: ‘ನಗರಸಭೆ ಪೌರಾಯುಕ್ತರು, ಪೌರಕಾರ್ಮಿಕರು ಮತ್ತು ಸ್ಥಳೀಯ ಶಾಸಕರ ವಿರುದ್ಧ ಅವಾಚ್ಯವಾಗಿ ಮಾತನಾಡಿರುವುದು ಹಾಗೂ ನಗರಸಭೆಗೆ ಬೆಂಕಿ ಹಚ್ಚುತ್ತೇನೆ, ಜನಗಳಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂಬಿತ್ಯಾದಿ ಮಾತುಗಳನ್ನಾಡುವ ಮೂಲಕ ಕ್ಷೇತ್ರದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿರುವ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅವರನ್ನು ಕ್ಷೇತ್ರದಿಂದ ಹೊರಗೆ ಹಾಕಬೇಕು’ ಎಂದು ಜೆಡಿಎಸ್ ಹಿರಿಯ ಮುಖಂಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕ್ಷೇತ್ರದ ಈ ಹಿಂದಿನ ಕಾಂಗ್ರೆಸ್ ಅಥವಾ ಜೆಡಿಎಸ್‌ನ ಯಾವೊಬ್ಬ ಶಾಸಕರು ಈ ರೀತಿಯ ಪದ ಬಳಕೆ ಮಾಡಿದ ಇತಿಹಾಸವಿಲ್ಲ. ರಾಜಕೀಯ ಮಾಡಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಇಷ್ಟು ಕೀಳುಮಟ್ಟಕ್ಕೆ ಇಳಿದು ಹೆಣ್ಣನ್ನು ಬಾಯಿಗೆ ಬಂದಂತೆ ಮಾತನಾಡುವ ಈ ವ್ಯಕ್ತಿಗೆ ಅವರ ತಾಯಿ, ತಂದೆ ಸಂಸ್ಕಾರ ಕಲಿಸಿದಂತಿಲ್ಲ. ರಿಯಲ್ ಎಸ್ಟೇಟ್ ಮೂಲಕ ಹಣ ಮಾಡಿ ಬಂದಿರುವ ಇಂತಹ ಅನಾಗರಿಕ ವ್ಯಕ್ತಿಯನ್ನು ಪಕ್ಷದ ಮುಖಂಡನಾಗಿ ಮುಂದುವರೆಸುವುದು ಕಾಂಗ್ರೆಸ್ ಪಕ್ಷಕ್ಕೂ ಶೋಭೆ ತರುವುದಿಲ್ಲ’ ಎಂದರು.

ಕಳೆದ ಎರಡೂವರೆ ವರ್ಷದಿಂದ ತಾಲ್ಲೂಕಿನಲ್ಲಿ ಯಾವುದೇ ಒಂದು ಗಲಭೆ, ಘರ್ಷಣೆ ಇಲ್ಲದೆ ಕ್ಷೇತ್ರವನ್ನು ಶಾಂತಿಯುತವಾಗಿರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಾಸಕ ಬಿ.ಎನ್.ರವಿಕುಮಾರ್ ಅವರ ಬಗ್ಗೆ ಅವಾಚ್ಯ ಪದಬಳಕೆ ಮಾಡಿರುವುದನ್ನು ಖಂಡಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೂಡಲೇ ರಾಜೀವ್‌ ಗೌಡ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮೇಲೂರು ಮಂಜುನಾಥ್ ಮಾತನಾಡಿ, ನಾಯಕತ್ವದ ಗುಣಗಳಿಲ್ಲದ ವ್ಯಕ್ತಿಗೆ ಪಕ್ಷದ ನೇತೃತ್ವ ನೀಡಿರುವ ಕಾಂಗ್ರೆಸ್‌ ಮುಖಂಡರು ಇನ್ನಾದರೂ ಎಚ್ಚೆತ್ತು ಇಂತಹ ವ್ಯಕ್ತಿಯನ್ನು ಪಕ್ಷದಿಂದ ಹೊರ ಹಾಕಬೇಕು. ಅಧಿಕಾರವಿಲ್ಲದಾಗಲೇ ಸರ್ಕಾರಿ ಅಧಿಕಾರಿಗಳು ಹಾಗು ಪೌರ ಕಾರ್ಮಿಕರನ್ನು ಈ ರೀತಿ ಮಾತನಾಡುವ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಕ್ಷೇತ್ರದ ಜನರನ್ನು ಹೇಗೆ ಕಾಣುತ್ತಾರೆ ಎಂಬುದನ್ನು ಕ್ಷೇತ್ರದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಜೆಡಿಎಸ್ ಹಿರಿಯ ಮುಖಂಡ ಹುಜಗೂರು ರಾಮಯ್ಯ, ಜೆಡಿಎಸ್ ತಾಲ್ಲೂಕು ಉಪಾಧ್ಯಕ್ಷ ನಾಗಮಂಗಲ ಶ್ರೀನಿವಾಸಗೌಡ, ಮುಗಿಲಡಿಪಿ ನಂಜಪ್ಪ, ಗಂಜಿಗುಂಟೆ ಮೂರ್ತಿ, ವಿಜಯೇಂದ್ರ, ಕೆ.ಬಿ.ಮಂಜುನಾಥ್, ಬಿ.ಕೆ.ದ್ಯಾವಪ್ಪ, ಭಕ್ತರಹಳ್ಳಿ ಮಂಜುನಾಥ್, ಕುಂದಲಗುರ್ಕಿ ಚಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.