ADVERTISEMENT

ಶಿಡ್ಲಘಟ್ಟವೇ ನನ್ನ ಕರ್ಮಭೂಮಿ: ಚರ್ಚೆಗೆ ಗ್ರಾಸವಾದ ರಾಜೀವ ಗೌಡ ಫೇಸ್‌ಬುಕ್ ಪೋಸ್ಟ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:00 IST
Last Updated 29 ಜನವರಿ 2026, 6:00 IST
ರಾಜೀವ್ ಗೌಡ ಫೇಸ್‌ಬುಕ್ ಪೋಸ್ಟ್
ರಾಜೀವ್ ಗೌಡ ಫೇಸ್‌ಬುಕ್ ಪೋಸ್ಟ್   

ಶಿಡ್ಲಘಟ್ಟ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟ ಜೆಎಂಎಫ್‌ಸಿ ನ್ಯಾಯಾಲಯವು ಫೆ. 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಲ್ಲೇ, ರಾಜೀವ್ ಗೌಡ ಅವರ ಫೇಸ್‌ಬುಕ್ ಖಾತೆಯಲ್ಲಿ ‘ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರವೇ ನನ್ನ ಕರ್ಮಭೂಮಿ’ ಎಂಬ ಬರಹವು ಅವರ ಭಾವಚಿತ್ರದೊಂದಿಗೆ ಪೋಸ್ಟ್‌ ಹಾಕಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ. 

ರಾಜೀವ್ ಗೌಡ ಅವರ ಈ ಫೇಸ್‌ಬುಕ್ ಖಾತೆಯ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಹಲವು ಸಕರಾತ್ಮಕವಾಗಿ ಸ್ಪಂದಿಸಿದ್ದು, ನೂರಾರು ಲೈಕ್‌ಗಳು ಬಂದಿವೆ. ಅಲ್ಲದೆ, 200ಕ್ಕೂ ಹೆಚ್ಚು ಮಂದಿ ನಾನಾ ರೀತಿಯಲ್ಲಿ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.  

ಫೇಸ್‌ಬುಕ್ ಪೋಸ್ಟ್‌ನಲ್ಲಿರುವುದೇನು?: ‘ಕಷ್ಟ, ಸುಖ, ನೋವು ಇದ್ದದ್ದೇ, ತಾಳ್ಮೆ ಕಳೆದುಕೊಳ್ಳಬಾರದು. ತಪ್ಪಾಗಿದೆ ಕ್ಷಮೆ ಇರಲಿ. ಆದರೆ, ಜನರ ಬದುಕಿಗೆ ನೋವು ತರುವುದಿಲ್ಲ’ ಎಂದು ಎಂದು ರಾಜೀವ್ ಗೌಡ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

ADVERTISEMENT

ಮುಂದುವರಿದು, ‘ಆತ್ಮೀಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ನನ್ನೆಲ್ಲ ಬಂಧು ಮಿತ್ರರೇ, ನನ್ನ ಹೃದಯ ಅಂತರಾಳದ ಕಾರ್ಯಕರ್ತರೇ ಹಾಗೂ ಮುಖಂಡರೇ, ನನ್ನ ರಾಜಕೀಯದಲ್ಲಿ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾದ ತಾವು ಇಂದು ಹಾಗೂ ಪ್ರತಿ ಕ್ಷಣದಲ್ಲೂ ನನಗೆ ಬೆನ್ನೆಲುಬಾಗಿ ನಿಂತಿದ್ದೀರಿ. ನನಗೆ ಬೆಂಬಲ ತೋರಿಸಿ ನನಗೆ ಆತ್ಮಸ್ಥೈರ್ಯ ತುಂಬಿದ ತಮಗೆ ನನ್ನ ಜೀವನದ ಕೊನೆ ಕ್ಷಣದವರೆಗೆ ನನ್ನ ಪಾದಾಭಿವಂದನೆಗಳು’ ಎಂದು ಹೇಳಿದ್ದಾರೆ. 

‘ನಿಮ್ಮ ಋಣವನ್ನು ಎಂದಿಗೂ ಮರೆಯಲಾರೆ. ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದ. ಭಗವಂತನನ್ನು ನಂಬುವಷ್ಟೇ, ಸಂವಿಧಾನವನ್ನೂ ನಂಬುವೆ. ನೀವೇ ನನಗೆ ಶ್ರೀರಕ್ಷೆ. ಜನ್ಮ ತಾಯಿ ಕೊಟ್ಟರೆ, ರಾಜಕೀಯ ಜೀವನವನ್ನು ಶಿಡ್ಲಘಟ್ಟ ಜನತೆ ನೀಡಿದೆ’ ಎಂದು ಬರೆದುಕೊಂಡಿದ್ದಾರೆ. 

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ‘ಕಾಲಾಯ ತಸ್ಮೈನಮಃ, ಇದೊಂದು ಕೆಟ್ಟ ಘಳಿಗೆ, ಇನ್ನೂ 15 ದಿನಗಳಲ್ಲಿ ರಾಜೀವ್ ಗೌಡ ಅವರು ಮರು ಪ್ರವೇಶ ಮಾಡಲಿದ್ದಾರೆ. ಶಿವರಾತ್ರಿ ಉತ್ಸವ ಶೀಘ್ರವೇ ಆಗಲಿದೆ’ ಎಂದೆಲ್ಲಾ ಬರೆದುಕೊಂಡಿದ್ದಾರೆ. 

‘ಇದೊಂದು ಕೆಟ್ಟ ಘಳಿಗೆ ಅಣ್ಣ, ಜೀವನದಲ್ಲಿ ಅದರಲ್ಲೂ ರಾಜಕೀಯ ಜೀವನದಲ್ಲಿ ಇವೆಲ್ಲ ಸರ್ವೇಸಾಮಾನ್ಯ. ನೀವು ಧೈರ್ಯವಾಗಿರಿ. ನಿಮ್ಮೊಂದಿಗೆ ನಾವಿದ್ದೇವೆ. ಜೈ ಕಾಂಗ್ರೆಸ್, ಜೈ ರಾಜೀವ್ ಗೌಡ’ ಎಂದು ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ. 

ಕೆಲವರು ವಿರೋಧಿ ಪೋಸ್ಟ್ 

ಇನ್ನು ಕೆಲವರು ಅವರನ್ನು ವಿರೋಧಿಸುವ ರೀತಿ ‘ಬಳ್ಳಾರಿಯಲ್ಲಿ ಶಾಸಕರಿಗೆ ರಕ್ಷಣೆಯಿಲ್ಲ. ಶಿಡ್ಲಘಟ್ಟದಲ್ಲಿ ಅಧಿಕಾರಿಗೆ ರಕ್ಷಣೆ ಇಲ್ಲ. ವಿಧಾನಸೌಧದಲ್ಲಿ ರಾಜ್ಯಪಾಲರಿಗೆ ರಕ್ಷಣೆ ಇಲ್ಲ ಕಾಂಗ್ರೆಸ್ ಅಧಿಕಾರದಲ್ಲಿ ಸಂವಿಧಾನಕ್ಕೆ ರಕ್ಷಣೆಯಿಲ್ಲ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಕೆಲವರು ಉಪದೇಶ ಹಾಗೂ ಸಲಹೆಗಳನ್ನೂ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.