
ಚಿಂತಾಮಣಿ: ನಗರದ ಹೊರವಲಯದ ಜ್ಯೋತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ರಾಮ್ ನಾರೇಯಣ್ ವಿಜ್ಞಾನ, ಕಲೆ ಮತ್ತು ಕ್ರೀಡೆಗಳಲ್ಲಿ ತನ್ನ ವಿಶಿಷ್ಟ ಪ್ರತಿಭೆ ತೋರುವ ಮೂಲಕ ಚಿಂತಾಮಣಿಯ ಹೆಮ್ಮೆ ಆಗಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕೈವಾರ ಶ್ರೀನಿವಾಸ್ ಹಾಗೂ ಶಿಕ್ಷಕಿ ಎಸ್.ವಿದ್ಯಾಲಕ್ಷ್ಮಿ ಅವರ ಪುತ್ರ ರಾಮ್ ನಾರೇಯಣ್ ಬಾಲ್ಯದಲ್ಲಿ ಅಪಾರ ಸಾಧನೆ ಮಾಡಿ ಜನಮನ್ನಣೆ ಗಳಿಸಿದ್ದಾರೆ.
ವಿಜ್ಞಾನದಲ್ಲಿ ಆಳವಾದ ಆಸಕ್ತಿ ಹೊಂದಿರುವ ರಾಮ್ ನಾರೇಯಣ್, ಟೆಲಿಸ್ಕೋಪ್ ತಂತ್ರಜ್ಞಾನದಲ್ಲಿ ನವೀನ ಸಂಶೋಧನೆ ನಡೆಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರನಾಗಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಸಂಘಟನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾರ್ಗದರ್ಶನದಲ್ಲಿ ‘ಅತ್ಯಧಿಕ ಕಾರ್ಯನಿರ್ವಹಣೆ ಟೆಲಿಸ್ಕೋಪ್ ಸಂಯೋಜನೆ’ ಶಿಬಿರದಲ್ಲಿ ರಾಮ್ ನಾರೇಯಣ್ ಟೆಲಿಸ್ಕೋಪ್ ನಿರ್ಮಾಣ ಮಾಡಿದ್ದರು.
ಆಪ್ಟಿಕಲ್ ಗ್ಲಾಸ್, ಮಿರರ್ ಹೋಲ್ಡರ್, ಟೆಲಿಸ್ಕೋಪ್ ಟ್ಯೂಬ್, ಪೈಂಡರ್ ಸ್ಕೋಪ್, ಫೋಕಸರ್ ಮತ್ತಿತರ ಭಾಗಗಳನ್ನು ಸಂಯೋಜಿಸಿ ಟೆಲಿಸ್ಕೋಪ್ ನಿರ್ಮಿಸಿದ್ದು, ಅಂತಿಮ ಹಂತದಲ್ಲಿ ಆಫ್ಟಿಕಲ್ ಅಲೈನ್‌ಮೆಂಟ್ ಮತ್ತು ಕೊಲಿಮೇಷನ್ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿ ತನ್ನ ಸಾಮರ್ಥ್ಯ ಮೆರೆದಿದ್ದಾರೆ. ವಿಜ್ಞಾನ ವಲಯವು ಬಾಲಕನ ಪರಿಶ್ರಮ, ಶ್ರದ್ಧೆ ಮತ್ತು ಸಂಶೋಧನಾ ಮನೋಭಾವವನ್ನು ಶ್ಲಾಘಿಸಿದೆ.
ಅಧ್ಯಯನದ ಜೊತೆಗೆ ಕ್ರೀಡೆಗಳತ್ತ ಆಸಕ್ತಿ ತೋರಿದ ರಾಮ್ ನಾರೇಯಣ್, ಪ್ರಕಾಶ್ ಪಡುಕೋಣೆ ಕ್ರೀಡಾ ತರಬೇತಿ ಕೇಂದ್ರ, ಬೆಂಗಳೂರು ಹಾಗೂ ಕೊಡಗು ಫುಟ್ಬಾಲ್ ಅಕಾಡೆಮಿಗಳಲ್ಲಿ ತರಬೇತಿ ಪಡೆದಿದ್ದಾರೆ. ಯೋಗಪಟು ಗೋವಿಂದ್ ಅವರಿಂದ ಯೋಗ ಮತ್ತು ಸ್ಕೇಟಿಂಗ್ ತರಬೇತಿ ಪಡೆದಿದ್ದು ಶೈಕ್ಷಣಿಕ ಸಮತೋಲನದ ಮಾದರಿ ವಿದ್ಯಾರ್ಥಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕಲಾ ಕ್ಷೇತ್ರದಲ್ಲಿ ರಾಮ್ ನಾರೇಯಣ್ ತಮ್ಮ ಸೃಜನಾತ್ಮಕ ಪ್ರತಿಭೆ ಪ್ರದರ್ಶಿಸಿದ್ದಾರೆ. ಹಾರ್ಮೋನಿಯಂ ವಿದ್ವಾನ್ ಎ.ವಿ. ವಿಶ್ವನಾಥ್ ಅವರ ಶಿಷ್ಯನಾಗಿದ್ದು, ಅನೇಕ ಭಕ್ತಿಗೀತೆಗಳು ಹಾಗೂ ಚಲನಚಿತ್ರ ಗೀತೆಗಳನ್ನು ನುಡಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.
ಬಾಲ ಪ್ರತಿಭೆ ರಾಮ್ ನಾರೇಯಣ್ ಅವರ ಸಾಧನೆಗೆ ಅನೇಕ ಸಂಘ–ಸಂಸ್ಥೆಗಳು ಪ್ರಶಸ್ತಿ ಪದಕ ನೀಡಿವೆ . ಚಿಂತಾಮಣಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ – 2025, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ, ಸ್ವರ್ಣ ಭೂಮಿ ಫೌಂಡೇಶನ್, ಕೋಲಾರದಿಂದ ಬಾಲ ಚೇತನ ಪ್ರಶಸ್ತಿ, ಭಾರತೀಯರ ಸೇವಾ ಸಂಸ್ಥೆಯಿಂದ ಬಾಲರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.