ADVERTISEMENT

ವೇತನ ಬಾಕಿ ಪಾವತಿಗೆ ಆಗ್ರಹ

ಸ್ಪನ್ ಸಿಲ್ಕ್ ಇಂಡಿಯಾ ಕಂಪೆನಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ವೃತ್ತ ಮತ್ತು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 11:39 IST
Last Updated 1 ಜುಲೈ 2019, 11:39 IST
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟಿಸಿದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಸ್ಪನ್ ಸಿಲ್ಕ್ ಇಂಡಿಯಾ ಕಂಪೆನಿಯ ಕಾರ್ಮಿಕರ ವೇತನ ಪಾವತಿಗೆ ಒತ್ತಾಯಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಹಕ್ಕುಗಳ ವೇದಿಕೆ, ಲೇಬರ್ ರೈಟ್ಸ್ ಫೋರಂ ಸಂಘಟನೆಯ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದ ಪ್ರತಿಭಟನಾಕಾರರು ಬಳಿಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾರ್ಮಿಕರ ಹಕ್ಕುಗಳ ವೇದಿಕೆ ಮುಖಂಡ ಪಾವಗಡ ಶ್ರೀರಾಮ್, ‘ಸ್ಪನ್ ಸಿಲ್ಕ್ ಇಂಡಿಯಾ ಕಂಪೆನಿಯಲ್ಲಿ 26 ವರ್ಷಗಳ ಕಾಲ ದುಡಿದ 650 ಕಾರ್ಮಿಕರನ್ನು 12 ವರ್ಷಗಳ ಹಿಂದೆ ಏಕಾಏಕಿ ಕೆಲಸದಿಂದ ತೆಗೆಯಲಾಯಿತು. ಬಳಿಕ ಕಂಪೆನಿ ಬಾಗಿಲು ಮುಚ್ಚಿತ್ತು. ಆದರೆ ಈವರೆಗೆ ಆ ಕಾರ್ಮಿಕರಿಗೆ ವೇತನ ಪಾವತಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಾರ್ಮಿಕರಿಗೆ 3 ತಿಂಗಳ ಸಂಬಳ, ಭತ್ಯೆ ಸೇರಿದಂತೆ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ಒದಗಿಸುವುದಾಗಿ ಕಂಪೆನಿ ಭರವಸೆ ನೀಡಿತ್ತು. ಆದರೆ, ಕೊಟ್ಟ ಭರವಸೆಯನ್ನು ಈಡೇರಿಸದೆ ಅನ್ಯಾಯ ಮಾಡಿದೆ. ಕಂಪೆನಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯ ಶೇ 50 ರಷ್ಟು ಸಂಬಳ ನೀಡುವಂತೆ ಕಂಪೆನಿಗೆ ಆದೇಶಿಸಿದೆ. ಆದರೂ ಕಂಪೆನಿ ಈವರೆಗೆ ಕಾರ್ಮಿಕರ ಸಂಬಳ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ’ ಎಂದು ಹೇಳಿದರು.

‘ಕಾರ್ಮಿಕರ ಪರ ಅನೇಕ ಕಾನೂನುಗಳಿದ್ದರೂ ಈವರೆಗೆ ಕಾರ್ಮಿಕರ ಶೋಷಣೆ ಮಾತ್ರ ನಿಂತಿಲ್ಲ. ಜಿಲ್ಲೆಯಲ್ಲಿ 36 ಸಾವಿರಕ್ಕೂ ಅಧಿಕ ಕಾರ್ಮಿಕರು ಕೂಲಿಗಾಗಿ ಬೆಂಗಳೂರು ನಗರಕ್ಕೆ ವಲಸೆ ಹೋಗಿ, ಆರ್ಥಿಕವಾಗಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಜಿಲ್ಲೆಯಲ್ಲಿಯೇ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ವಲಸೆ ತಡೆಯುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ಸರ್ಕಾರದ ಅಧೀನದಲ್ಲಿರುವ ಕಂಪೆನಿಯಲ್ಲಿ ಕೆಲಸ ನೀಡಬೇಕು. ಕಾಲ ಕಾಲಕ್ಕೆ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಿ, ಸಾಲ ಸೌಲಭ್ಯ ಒದಗಿಸಬೇಕು’ ಎಂದು ತಿಳಿಸಿದರು.

ಕಾರ್ಮಿಕರ ಹಕ್ಕುಗಳ ವೇದಿಕೆಯ ಉಸ್ತುವಾರಿ ಡಿ.ಜಿ.ರಾಜು ಮಾತನಾಡಿ, ‘ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಮದುವೆಗಳಿಗೆ ನೀಡುವ ಸಹಾಯಧನವನ್ನು ಹೆಚ್ಚಿಸಬೇಕು. ಬೆಂಗಳೂರು ನಗರದ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರ ಆಟೊ ಚಾಲಕರಿಗೆ ಮನೆ ಕಟ್ಟಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಒದಗಿಸಬೇಕು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಕೂಡ ವಿಧವೆಯರಿಗೆ ಮತ್ತು ವಯೋವೃದ್ಧರಿಗೆ ₨3 ಸಾವಿರ ಮಾಶಾಸನ ನೀಡಬೇಕು’ ಆಗ್ರಹಿಸಿದರು.

ಕಾರ್ಮಿಕರ ಹಕ್ಕುಗಳ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮುನಿನರಸಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟಾಚಲಯ್ಯ, ಉಪಾಧ್ಯಕ್ಷ ಹೊನ್ನಮೈಲಾರಿ, ಸದಸ್ಯರಾದ ಚಂದ್ರಪ್ಪ, ಮೂರ್ತಿ, ನಾರಾಯಣಪ್ಪ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.