ಬಾಗೇಪಲ್ಲಿಯಲ್ಲಿ ನಿವೃತ್ತ ಶಿಕ್ಷಕ ಇಲಾಹಿ ಬಕ್ಷ್ ಅವರು ಮನೆ ಆವರಣದಲ್ಲಿ ಹೂವು, ಹಣ್ಣಿನ ಗಿಡ, ಮರ ಬೆಳೆದಿರುವುದು
ಬಾಗೇಪಲ್ಲಿ: ಇಲ್ಲಿನ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಇಲಾಹಿ ಬಕ್ಷ್ ಕುಟುಂಬದವರು ವಿವಿಧ ತಳಿಯ ಗಿಡ ಮರ ಬೆಳೆಸಿ ಪ್ರಾಣಿ, ಪಕ್ಷಿಗಳಿಗೆ ಕಾಳು ಮತ್ತು ನೀರುಣಿಸುವ ಮೂಲಕ ಪ್ರಾಣಿ, ಪಕ್ಷಿ ಪ್ರೇಮ ಮೆರೆದಿದ್ದಾರೆ.
ಇಲಾಹಿ ಬಕ್ಷ್ ಅವರು ಬಾಗೇಪಲ್ಲಿ, ಮಾರ್ಗಾನುಕುಂಟೆ, ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಗಳಲ್ಲಿ 31 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮಕ್ಕಳಿಗೆ ಗಿಡ, ಮರಗಳ ಮಹತ್ವ, ಸ್ವಚ್ಛತೆ ಪಾಠಗಳನ್ನು ಬೋಧಿಸಿದ್ದಾರೆ. ಅವರು ಕೆಲಸ ಮಾಡಿದ ಶಾಲೆಗಳಲ್ಲೂ ಉತ್ತಮ ಪರಿಸರಕ್ಕೆ ಆದ್ಯತೆ ನೀಡಿದ್ದರು.
ಮರಗಳ ಕೊಂಬೆಗೆ ತಟ್ಟೆ ಮತ್ತು ಪ್ಲಾಸ್ಟಿಕ್ ಲೋಟ ಕಟ್ಟಿದ್ದು, ಅವುಗಳಲ್ಲಿ ಪ್ರಾಣಿಗಳಿಗಾಗಿ ರಾಗಿ, ಗೋಧಿ, ಜೋಳ ಸೇರಿ ಇತರೆ ಕಾಳುಗಳನ್ನು ಹಾಕುತ್ತಾರೆ. ಜೊತೆಗೆ ಅವುಗಳಿಗೆ ನೀರುಣಿಸುವ ಉದ್ದೇಶದಿಂದ ಮನೆ ಮುಂದೆ ಚಿಕ್ಕ ತೊಟ್ಟಿಯನ್ನೂ ಮಾಡಿದ್ದಾರೆ.
ಎರಡು ನಿವೇಶನಗಳ ಪೈಕಿ ಒಂದರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಮನೆ ಮುಂದಿನ ಜಾಗದಲ್ಲಿ ಗಿಡ, ಮರಗಳನ್ನು ಬೆಳೆಸಿದ್ದಾರೆ. 2002ರಲ್ಲಿ ಮನೆಯಂಗಳದಲ್ಲಿ ನಾಟಿ ಮಾಡಿದ ಮಾವು, ತೆಂಗು, ಸಪೋಟ, ದಾಳಿಂಬೆ, ಪಪ್ಪಾಯಿ, ಸೀಬೆಹಣ್ಣು, ಹಲಸು, ನುಗ್ಗೆಕಾಯಿ, ನಿಂಬೆಹಣ್ಣಿನ ಗಿಡಗಳು ಈಗ ಫಲ ನೀಡುತ್ತಿವೆ. ಅವುಗಳನ್ನು ನೆರೆಹೊರೆಯವರಿಗೂ ಹಂಚುತ್ತಿದ್ದಾರೆ.
ಜೊತೆಗೆ, ಮನೆಯಂಗಳದಲ್ಲೇ ಗುಲಾಬಿ, ಚೆಂಡುಮಲ್ಲಿಗೆ, ಗುಂಡುಮಲ್ಲಿಗೆ, ಸೇವಂತಿ ಸೇರಿದಂತೆ ಇನ್ನಿತರ ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ವಿವಿಧ ಔಷಧ ಗುಣದ ಹಾಗೂ ಅಲಂಕಾರಿಕ ಸಸಿಗಳನ್ನು ಬೆಳಸಲಾಗಿದೆ. ಸಸ್ಯಕುಂಡಗಳಲ್ಲಿನ ಬಣ್ಣಬಣ್ಣದ ಹೂವುಗಳು ಆಕರ್ಷಕವಾಗಿವೆ.
ಇಲಾಹಿ ಬಕ್ಷ್
ಮನೆ ಮುಂದೆ ಖಾಲಿ ಜಾಗ ಇದ್ದರೆ ಪ್ರಯೋಜನ ಇಲ್ಲ. ಗಿಡ, ಮರ ಬೆಳೆಸಿದರೆ ನೆರಳು, ಶುದ್ಧ ಗಾಳಿ, ಹೂವು, ಹಣ್ಣು, ಸೊಪ್ಪು ಸಿಗುತ್ತದೆ. ಉತ್ತಮ ಪರಿಸರದಿಂದ ಆರೋಗ್ಯವೂ ಚೆನ್ನಾಗಿರುತ್ತದೆಇಲಾಹಿ ಬಕ್ಷ್, ನಿವೃತ್ತ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.