ಚಿಕ್ಕಬಳ್ಳಾಪುರ: ‘ನಗರದ ಬಜಾರ್ ರಸ್ತೆ ಹಾಗೂ ಗಂಗಮ್ಮ ಗುಡಿ ರಸ್ತೆಯ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡುವುದಿಲ್ಲ’ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದಲ್ಲಿ ಆರ್ಯವೈಶ್ಯ ಮಂಡಳಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ನಗರ ಎಷ್ಟೇ ಆಧುನಿಕವಾಗಿ ಬೆಳೆದರೂ ಕೆಲವು ಹಳೆಯ ರಸ್ತೆಗಳನ್ನು ವ್ಯಾಪಾರದ ದೃಷ್ಟಿಯಿಂದ ಉಳಿಸಿಕೊಳ್ಳಬೇಕಾಗಿದೆ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನಾ ಬಜಾರ್ ರಸ್ತೆ ಹಾಗೂ ಗಂಗಮ್ಮ ಗುಡಿ ರಸ್ತೆ ಅಗಲೀಕರಣ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದೆ. ಅದರಂತೆ ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಕ್ಷೇತ್ರದ ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾದಾಗ 5 ವರ್ಷದಲ್ಲಿ ನನ್ನ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗಾಗಿ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಅದೇ ಕಾರಣಕ್ಕಾಗಿ ಎರಡನೇ ಬಾರಿಗೆ ಕ್ಷೇತ್ರದಲ್ಲಿ ನನಗೆ ಗೆಲವು ತಂದು ಕೊಡುವ ಮೂಲಕ ಕ್ಷೇತ್ರದ ಮತದಾರರು ಹೊಸ ಇತಿಹಾಸ ನಿರ್ಮಿಸಿದ್ದಾರೆ’ ಎಂದು ಹೇಳಿದರು.
‘ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು ₨13 ಕೋಟಿ ವೆಚ್ಚದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ರಂಗ ಮಂದಿರ ನಿರ್ಮಾಣ ಕಾರ್ಯ ಭರದಲ್ಲಿ ಸಾಗುತ್ತಿದೆ’ ಎಂದರು.
‘ಮುಂಬರುವ ನಗರಸಭೆ ಚುನಾವಣೆಯಲ್ಲಿ ಆರ್ಯವೈಶ್ಯ ಸಮುದಾಯದಿಂದ ಯಾರೇ ಕಣಕ್ಕೆ ಇಳಿಯಲಿ ನಮ್ಮ ಅಭ್ಯಂತರವಿಲ್ಲ. ಆದರೆ, ನಗರಸಭೆಗೆ ಆರ್ಯ ವೈಶ್ಯ ಸಮುದಾಯದಿಂದ ಒಬ್ಬರನ್ನು ನಾಮ ನಿರ್ದೇಶನ ಮಾಡಲಾಗುವುದು. ಧರ್ಮದಿಂದ ವ್ಯಾಪಾರ ಮಾಡುವ ಆರ್ಯ ವೈಶ್ಯರು ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳಬೇಕು. ಸಮುದಾಯ ಅಭಿವೃದ, ಸಂಘಟನೆಗೆ ಹೆಚ್ಚು ಮಹತ್ವ ನೀಡಬೇಕು’ ಎಂದು ತಿಳಿಸಿದರು.
ಆರ್ಯ ವೈಶ್ಯ ಮಂಡಳಿ ಮಹಾಸಭಾ ಅಧ್ಯಕ್ಷ ಡಿ.ಎಸ್.ನಂಜುಂಡ, ಮುಖಂಡರಾದ ರಾಮಯ್ಯ ಶೆಟ್ಟಿ, ಅಪ್ಪಲ್ಲ ಮಂಜುನಾಥ್, ರಫೀಕ್, ಜಯಮ್ಮ, ನಾಗರತ್ನ, ಯತೀಶ್, ಸುಬ್ರಮಣ್ಯಚಾರಿ, ಮಂಜುನಾಥ್, ರಾಣಿ ಪ್ರಭಾಕರ್, ಗಣೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.