ADVERTISEMENT

ಆರ್‌ಎಸ್‌ಎಸ್‌ ದೇಶಪ್ರೇಮ ತೋರುವ ಸಂಘಟನೆ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:16 IST
Last Updated 20 ಅಕ್ಟೋಬರ್ 2025, 4:16 IST
ಶಿಡ್ಲಘಟ್ಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥಸಂಚಲನ ನಡೆಯಿತು
ಶಿಡ್ಲಘಟ್ಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥಸಂಚಲನ ನಡೆಯಿತು   

ಶಿಡ್ಲಘಟ್ಟ: ‘ಆರ್‌ಎಸ್‌ಎಸ್‌ ನೋಂದಾಯಿತ ಸಂಘವಲ್ಲ, ಸದಸ್ಯತ್ವ ನೋಂದಣಿಯನ್ನೂ ಮಾಡಿಕೊಂಡಿಲ್ಲ. ದೇಣಿಗೆ ಸಂಗ್ರಹಿಸುತ್ತಿಲ್ಲ. ಕೇವಲ ದೇಶಪ್ರೇಮ ತೋರುವ ಸಂಘಟನೆಯನ್ನು ನಿಷೇಧಿಸಲು ಕಾಂಗ್ರೆಸ್ ಹೊರಟಿದ್ದು ಅದು ಎಂದಿಗೂ ಸಾಧ್ಯವಿಲ್ಲ’ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಶಿಡ್ಲಘಟ್ಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ವಿಜಯ ದಶಮಿ ಪಥಸಂಚಲನ ನಂತರ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಶಿಡ್ಲಘಟ್ಟ ನಗರದ ವಾಸವಿ ವಿದ್ಯಾ ಸಂಸ್ಥೆಯಿಂದ ಆರಂಭವಾದ ಪಥಸಂಚಲನ ಬಸ್ ನಿಲ್ದಾಣದಿಂದ ಕೋಟೆ ವೃತ್ತ, ಹೂವಿನ ವೃತ್ತ, ನಗರ್ತಪೇಟೆ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. 

ADVERTISEMENT

ಭಾರತ ಮಾತೆಯ ಭಾವಚಿತ್ರವಿಟ್ಟ ತೆರೆದ ವಾಹನದ ಹಿಂದೆ ಸ್ವಯಂ ಸೇವಕರು ಪಥಸಂಚಲನ ನಡೆಸಿದರು.

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸೇರಿದಂತೆ ಅನೇಕ ಪ್ರಮುಖರು ಗಣಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು ಕೂಡ ಗಣಧಾರಿಗಳಾಗಿ ಭಾಗವಹಿಸಿ ಗಮನ ಸೆಳೆದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಆರ್‌ಎಸ್‌ಎಸ್‌ನ್ನು ನಿಷೇಧಿಸಲು ಹೊರಟಿದ್ದರಿಂದ ದೇಶದಲ್ಲಿ ಆರ್‌ಎಸ್‌ಎಸ್‌ನ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು. ಇದಕ್ಕೆ ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಆರ್‌ಎಸ್‌ಎಸ್‌ ನೋಂದಾಯಿತಿ ಸಂಘವೂ ಅಲ್ಲ. ಸದಸ್ಯತ್ವವನ್ನು ನೋಂದಾಯಿಸಿಲ್ಲ ದೇಣಿಗೆ ಸಂಗ್ರಹಿಸಿಲ್ಲ ಎಂದ ಮೇಲೆ ಸಂಘದ ನೋಂದಣಿ ಪ್ರಶ್ನೆಯೆ ಬರುವುದಿಲ್ಲ. ಇಷ್ಟು ಕನಿಷ್ಠ ಜ್ಞಾನವೂ ಕಾಂಗ್ರೆಸ್ಸಿಗರಿಗೆ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಸರ್ಕಾರ ಇಡೀ ರಾಜ್ಯದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಹುಟ್ಟಡಗಿಸಬೇಕು ಎಂಬ ಉದ್ದೇಶದಿಂದ ಒಂದು ಅವಿವೇಕತನದ ತಪ್ಪನ್ನು ಮಾಡಿದ್ದಾರೆ. ಅವರ ನಿರ್ಧಾರಗಳು ಅವರಿಗೆ ತಿರುಗುಬಾಣವಾಗಿದೆ. ಪಥಸಂಚಲನಕ್ಕೆ 300 ರಿಂದ 500 ಜನ ಸೇರುತ್ತಿದ್ದು ಈಗ 5000 ದಿಂದ 10 ಸಾವಿರಕ್ಕೆ ಏರಿಕೆ ಆಗಲು ಕಾಂಗ್ರೆಸ್‌ನವರು ಪ್ರೋತ್ಸಾಹ ಕೊಟ್ಟಿದ್ದಾರೆ. ತಪ್ಪಿನಲ್ಲಿಯೂ ಒಳ್ಳೆಯದನ್ನು ನಾವು ಕಾಣಬಹುದು’ ಎಂದರು.

‘ಈಗ ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಕಾನೂನು ಒಂದೇ ಎನ್ನುತ್ತಾ, ನೀವು ಯಾವುದೇ ಸಭೆ ಸಮಾರಂಭ ಮಾಡಬೇಕಾದರೂ ಸರ್ಕಾರದ ಪೂರ್ವಾನುಮತಿ ಅಗತ್ಯ ಎಂದರು. ಮೊದಲು ಆರ್‌ಎಸ್‌ಎಸ್‌ ಬ್ಯಾನ್ ಮಾಡಿ ಅಂದರು, ನಂತರ ಅನುಮತಿ ತೆಗೆದುಕೊಳ್ಳಿ ಅಂದರು. ಅವರದೇ ವೋಟ್ ಬ್ಯಾಂಕ್ ಆದ ಮುಸ್ಲಿಮರು ಯಾವುದೇ ಅನುಮತಿ ಪಡೆಯದೆ ಅವರ ಹಬ್ಬಗಳಲ್ಲಿ ಮೆರವಣಿಗೆ ಮಾಡುತ್ತಿದ್ದರು. ಈಗ ಕಾನೂನಿನ ಅನ್ವಯ ಅನುಮತಿ ಪಡೆದು ಮಾಡಬೇಕಾದುದು ಅವರಿಗೂ ಅನ್ವಯವಾಗುತ್ತದೆ. ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ ಪ್ರಧಾನಿ ಮೋದಿ ಅವರ ಒಂದು ದೇಶ ಒಂದು ಕಾನೂನು ಎಂಬುದನ್ನು ಬೆಂಬಲಿಸಿದೆ’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಆರ್‌ಎಸ್‌ಎಸ್ ಮುಸ್ಲಿಂ ವಿರೋಧಿ ಅಲ್ಲ. ಕಾಂಗ್ರೆಸ್‌ನವರು ಅಧಿಕಾರ ದಾಹಕ್ಕಾಗಿ ಜಾತಿಗಳನ್ನು ಒಡೆದು, ಮುಸ್ಲಿಂ ಓಟನ್ನು ದಕ್ಕಿಸಿಕೊಳ್ಳಲು ಆರ್‌ಎಸ್‌ಎಸ್ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಶಿಡ್ಲಘಟ್ಟದಲ್ಲಿ ಎರಡೂವರೆ ಕಿ.ಮೀ ಪಥಸಂಚಲನ ನಡೆಸಿ ದೇಶಪ್ರೇಮ ಪ್ರದರ್ಶಿಸಿದ್ದಾರೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.