
ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡಗಂಜೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮನೆಗಳ ಸುತ್ತಲೂ ರಸ್ತೆಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ.
ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹಣೆಯಾಗಿರುವುದರಿಂದ ಜನರ ಸಂಚಾರಕ್ಕೂ ತೊಂದರೆ ಆಗಿದೆ ಎಂದು ಅಲ್ಲಿಯ ನಿವಾಸಿಗಳು ಅವಲತ್ತುಕೊಂಡಿದ್ದಾರೆ.
ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆಗಳ ಆವಾಸಸ್ಥಾನವಾಗಿದ್ದು ಅಕ್ಕ-ಪಕ್ಕದ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆ ಪ್ರದೇಶ ಸ್ವಲ್ಪ ತಗ್ಗು ಸ್ಥಳವಾಗಿದೆ. ಸುತ್ತಮುತ್ತಲಿನ ಜನರು ಜಾನುವಾರುಗಳನ್ನು ತೊಳೆಯುವ ನೀರು ಹರಿದು ಬರುತ್ತದೆ. ಜಾನುವಾರುಗಳ ಗಂಜಲ, ಸಗಣಿ ಸಹ ನೀರಿನೊಂದಿಗೆ ಬೆರಕೆಯಾಗಿ ಸಂಗ್ರಹಣೆಯಾಗಿದೆ. ಕೆಲವು ಬಲಾಢ್ಯರು ಚರಂಡಿಗಳನ್ನು ಒತ್ತುವರಿ ಮಾಡಿ ಮುಚ್ಚಿಹಾಕಿರುವುದರಿಂದ ನೀರು ಮುಂದಕ್ಕೆ ಹರಿಯುವುದಿಲ್ಲ ಎಂದು ಜನರು ದೂರಿದ್ದಾರೆ.
ಜಾನುವಾರುಗಳನ್ನು ತೊಳೆದ ನೀರು, ಸಗಣಿ, ಗಂಜಲದಿಂದ ಕೂಡಿದ ನೀರು ನಿಂತು ಕೊಳೆತು ನಾರುತ್ತಿದೆ. ಅಕ್ಕಪಕ್ಕದ ಜನರು ಮೂಗುಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಮನೆಗಳಿಗೂ ದುರ್ವಾಸನೆ ವ್ಯಾಪಿಸಿದೆ. ಮನೆಗಳಲ್ಲಿ ವಾಸ ಮಾಡುವುದು ಕಷ್ಟವಾಗಿದೆ. ದುರ್ವಾಸನೆಯ ನೀರು ರಸ್ತೆಯಲ್ಲಿಯೇ ಕುಂಟೆಯಂತೆ ಸದಾ ನಿಂತಿರುತ್ತದೆ.
ಸುತ್ತಮುತ್ತಲಿನ ನಿವಾಸಿಗಳು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಗೂ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಮುಚ್ಚಿರುವ ಚರಂಡಿ ಸ್ವಚ್ಛಗೊಳಿಸಿ ಕೊಳಚೆ ನೀರು ಮುಂದೆ ಹರಿದುಹೋಗುವಂತೆ ಕ್ರಮಕೈಗೊಳ್ಳಬೇಕು. ಕೊಳಚೆ ನೀರಿನ ದುರ್ವಾಸನೆ ಮತ್ತು ಸೊಳ್ಳೆಗಳಿಂದ ಜನರಿಗೆ ಮುಕ್ತಿ ಕೊಡಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.