ಸಂತೋಷ್ ಲಾಡ್
ಚಿಕ್ಕಬಳ್ಳಾಪುರ: ಮುಸ್ಲಿಮರು, ಪಾಕಿಸ್ತಾನ, ಹಿಂದೂ ಎನ್ನುವ ವಿಚಾರ ಬಿಟ್ಟರೆ ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರವೇ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಬಿಜೆಪಿ ಏನು ಮಾಡಿದೆ. ಬಡ ಹಿಂದೂಗಳಿಗೆ, ಪರಿಶಿಷ್ಟ ಜಾತಿ, ಪಂಗಡದ ಬಡವರಿಗೆ ಬಿಜೆಪಿ ನಾಯಕರು ತಮ್ಮ ಆಸ್ತಿ ಕೊಡಲಿ. ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದು ಬಂದಿದ್ದು ನರೇಂದ್ರ ಮೋದಿಯೇ ಹೊರತು ಕಾಂಗ್ರೆಸ್ ನಾಯಕರಲ್ಲ ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರ ಆಡಳಿತದಲ್ಲಿ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಚರ್ಚೆಗಳು ಆಗುತ್ತಿಲ್ಲ. ಬೇರೆ ದೇಶಗಳ ಜೊತೆ ನಮ್ಮನ್ನು ಹೋಲಿಕೆ ಮಾಡಿಕೊಂಡು ಮುನ್ನಡೆಯುವ ಕೆಲಸಗಳೂ ಆಗುತ್ತಿಲ್ಲ. ಕೋಮು ವಿಚಾರಗಳೇ ಮುನ್ನಲೆಗೆ ಬರುತ್ತಿವೆ ಎಂದರು.
ಕಾಂಗ್ರೆಸ್ ಪಕ್ಷವು ಸಂವಿಧಾನ ಮತ್ತು ಕಾನೂನು ರೀತಿಯಲ್ಲಿ ನಡೆಯುತ್ತಿದೆ. ಈ ದೇಶವು ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗೂ ಸೇರಿದೆ. ಸರ್ವಧರ್ಮಿಯರೂ ದೇಶದಲ್ಲಿ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನಕ್ಕೆ ಹೀಗಿ ಎಂದು ಹೇಳಲು ಆರ್.ಅಶೋಕಗೆ ಅಧಿಕಾರ ಕೊಟ್ಟವರು ಯಾರು? ಪ್ರಚಾರದ ಗಿಮಿಕ್ ಇದು. ಮುಸ್ಲಿಮರು, ಪಾಕಿಸ್ತಾನದ ವಿಚಾರ ಇಲ್ಲದಿದ್ದರೆ ಬಿಜೆಪಿಗೆ ಮತವೇ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ರಾಜ್ಯಗಳಲ್ಲಿ ಬಿಜೆಪಿ ಕೋಮು ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದು ಬಿಜೆಪಿ, ಕಾಂಗ್ರೆಸ್ ದೇಶವಲ್ಲ. 145 ಕೋಟಿ ಭಾರತೀಯರ ದೇಶ. ಯುಪಿಎ ಸರ್ಕಾರ ₹ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿತು. 2013ರ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ರೈತರ 8 ಸಾವಿರ ಕೋಟಿ ಸಾಲ ಮನ್ನಾ ಮಾಡಿತು. ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದರು. ಆದರೆ ಆ ಕೆಲಸವನ್ನು ಬಿಜೆಪಿ ದೇಶದಲ್ಲಿ ಮಾಡಲಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.