ADVERTISEMENT

ಚಿಂತಾಮಣಿ: ಶಾಲೆ ಸ್ವಚ್ಛತೆ ಯಾರ ಹೊಣೆ?

ವಿದ್ಯಾರ್ಥಿಗಳಿಂದ ಶಾಲೆ ಸ್ವಚ್ಛತೆ ಮಾಡಿಸಿಕೊಳ್ಳಬಾರದು ಎಂಬ ಆದೇಶ

ಎಂ.ರಾಮಕೃಷ್ಣಪ್ಪ
Published 19 ಆಗಸ್ಟ್ 2025, 5:14 IST
Last Updated 19 ಆಗಸ್ಟ್ 2025, 5:14 IST
   

ಚಿಂತಾಮಣಿ: ಶಾಲಾ ಕೊಠಡಿ, ಆವರಣ ಮತ್ತು ಶೌಚಾಯಗಳ ಸ್ವಚ್ಛತೆ ಯಾರು ಮಾಡಬೇಕು ಎಂಬುದು ಸರ್ಕಾರಿ ಶಾಲೆಗಳಲ್ಲಿ ಉದ್ಭವಿಸಿರುವ ಪ್ರಮುಖ ಪ್ರಶ್ನೆಯಾಗಿದೆ. 

ಹಿಂದಿನಿಂದಲೂ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಮ್ಮ ತರಗತಿಗಳನ್ನು ವಿದ್ಯಾರ್ಥಿಗಳೇ ಸ್ವಚ್ಛತೆ ಮಾಡಿಕೊಳ್ಳುತ್ತಿದ್ದರು. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ‘ಡಿ’ ಗ್ರೂಪ್ ನೌಕರರು ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಮಾಹಿತಿಯನ್ನು ನಿವೃತ್ತ ಶಿಕ್ಷಕರು ನೀಡುತ್ತಾರೆ. 

ಸರ್ಕಾರಿ ಶಾಲೆಯ ಕೊಠಡಿ ಮತ್ತು ಆವರಣವನ್ನು ಮಕ್ಕಳ ಕೈಯಿಂದ ಸ್ವಚ್ಛತೆ ಮಾಡಿಸಬಾರದು, ಮಕ್ಕಳು ಪೊರಕೆ ಹಿಡಿಯಬಾರದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ, ಶಾಲೆಗಳಲ್ಲಿ ಸ್ವಚ್ಛತೆಯ ಜವಾಬ್ದಾರಿ ಯಾರದ್ದು? ಸರ್ಕಾರದ್ದೊ, ಶಿಕ್ಷಕರದ್ದೊ, ಮಕ್ಕಳದ್ದೋ ಅಥವಾ ಎಸ್‌ಡಿಎಂಸಿಯದ್ದೋ? ಎಂಬ ಜಿಜ್ಞಾಸೆ ರಾಜ್ಯದಾದ್ಯಂತ ನಡೆಯುತ್ತಿದೆ.

ADVERTISEMENT

ಕೆಲವು ತಿಂಗಳ ಹಿಂದೆ ಬೈನಹಳ್ಳಿಯಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸ್ವಚ್ಛತೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಶಾಲೆಯಲ್ಲಿ ಹಾಲು ವಿತರಣೆ ವೇಳೆ ಮಕ್ಕಳು ನೆಲ ಸ್ವಚ್ಛ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ಶಿಕ್ಷಕಿಯನ್ನು ಅಮಾನತುಗೊಳಿಸಿರುವುದು ಸೇರಿದಂತೆ ಹಲವು ಇಂಥದ್ದೇ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ನಡೆದಿರುವುದು ವರದಿಯಾಗಿದೆ.

ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ವಚ್ಛತೆಗಾಗಿ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ಸಾಮಾನ್ಯವಾಗಿ ವಿದ್ಯಾರ್ಥಿಗಳೇ ತಮ್ಮ ತರಗತಿಯನ್ನು ಗುಡಿಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ತರಗತಿಗಳಲ್ಲಿ ನಿತ್ಯ ಕಸಗುಡಿಸುವುದು, ಆವರಣ ಸ್ವಚ್ಛಗೊಳಿಸುವ ವೇಳಾಪಟ್ಟಿಯೇ ಇರುತ್ತಿತ್ತು. ಪ್ರತಿನಿತ್ಯ ವೇಳಾಪಟ್ಟಿಯಲ್ಲಿರುವ ವಿದ್ಯಾರ್ಥಿಗಳು ಶಾಲೆಗೆ ಸ್ವಲ್ಪ ಮುಂಚೆ ಬಂದು ಸ್ವಚ್ಛತೆ ಮಾಡಬೇಕಿತ್ತು ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸುತ್ತಾರೆ. 

ಆದರೆ, ಇದೀಗ ಮಕ್ಕಳ ಕೈಯಿಂದಲೂ ಸ್ವಚ್ಛತಾ ಕೆಲಸ ಮಾಡಿಸಬಾರದು. ‘ಡಿ’ ಗ್ರೂಪ್ ನೌಕರರು ಇರುವುದಿಲ್ಲ. ಹಾಗಿದ್ದರೆ, ಸರ್ಕಾರಿ ಶಾಲೆಗಳ ತರಗತಿ ಮತ್ತು ಆವರಣ ಸ್ವಚ್ಛತೆಯ ಜವಾಬ್ದಾರಿ ಯಾರದ್ದು ಎಂಬ ಖಚಿತ ಉತ್ತರ ಯಾರ ಬಳಿಯೂ ಇಲ್ಲ. ಪ್ರತಿ ಶಾಲೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಿರ್ವಹಣಾ ಅನುದಾನ ಹಂಚಿಕೆ ಮಾಡಲಾಗುತ್ತದೆ. ಅದರಲ್ಲಿ ಶೇ 10 ರಷ್ಟು ಹಣವನ್ನು ಸ್ವಚ್ಛತೆಗೆ ಬಳಸಿಕೊಳ್ಳಬಹುದು. ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯ ಸಹಕಾರ ಪಡೆದುಕೊಳ್ಳಬೇಕು ಎಂದು ಇಲಾಖೆ ಆದೇಶದಲ್ಲಿದೆ.

ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಾರ್ಷಿಕ ₹10, ₹15, ₹25 ಸಾವಿರ ಅನುದಾನ ಬಿಡುಗಡೆಯಾಗುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸ್ವಚ್ಛತೆಗೆ ವರ್ಷಕ್ಕೆ ₹1,000, ₹1500 ಮತ್ತು ₹2,500 ದೊರೆಯುತ್ತದೆ. ಈ ಹಣದಲ್ಲಿ ವರ್ಷದುದ್ದಕ್ಕೂ ಸ್ವಚ್ಛತೆ ಮಾಡಿಸಲು ಸಾಧ್ಯವೇ ಎಂದು ಶಿಕ್ಷಕರು ಪ್ರಶ್ನಿಸುತ್ತಾರೆ.

ಸ್ವಚ್ಛತೆ ಶಿಕ್ಷಣದ ಒಂದು ಭಾಗ. ಗುರುಕುಲದ ಶಿಕ್ಷಣ ಪದ್ಧತಿ ಕಾಲದಿಂದಲೂ ವಿದ್ಯಾರ್ಥಿಗಳೇ ಸ್ವಚ್ಛತೆ ಮಾಡುತ್ತಿದ್ದರು. ಮಹಾತ್ಮ ಗಾಂಧೀಜಿ ತತ್ವ-ಸಿದ್ಧಾಂತಗಳನ್ನು ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಬೋಧಿಸಬೇಕು. ಬಹುತೇಕ ಎಲ್ಲ ತರಗತಿಗಳ ಪಠ್ಯದಲ್ಲಿ ಅವರ ಪಾಠಗಳು ಇವೆ. ಶೌಚಾಲಯದ ಸ್ವಚ್ಛತೆ ಸೇರಿದಂತೆ ಪ್ರತಿಯೊಂದು ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕು ಎಂದು ಶಿಕ್ಷಕರು ಪಾಠ ಮಾಡುತ್ತಾರೆ. ಮತ್ತೊಂದೆಡೆ ಮಕ್ಕಳಿಂದ ಸ್ವಚ್ಛತಾ ಕೆಲಸ ಮಾಡಿಸಬಾರದು ಎನ್ನುತ್ತಾರೆ. ಈ ಗೊಂದಲ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.