ADVERTISEMENT

ಬಾಗೇಪಲ್ಲಿ: ಮುಚ್ಚುವ ಹಂತದ ಶಾಲೆಗೆ ಮರುಜೀವ

ಪಿ.ಎಸ್.ರಾಜೇಶ್
Published 25 ಜನವರಿ 2025, 6:17 IST
Last Updated 25 ಜನವರಿ 2025, 6:17 IST
ಬಾಗೇಪಲ್ಲಿ ತಾಲ್ಲೂಕಿನ ಕಾರಕೂರು ಶಾಲೆಯಯಲ್ಲಿ ಎಲ್‍ಇಡಿ ಟಿವಿ ಪರದೆಯಲ್ಲಿ ಚಿತ್ರ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ
ಬಾಗೇಪಲ್ಲಿ ತಾಲ್ಲೂಕಿನ ಕಾರಕೂರು ಶಾಲೆಯಯಲ್ಲಿ ಎಲ್‍ಇಡಿ ಟಿವಿ ಪರದೆಯಲ್ಲಿ ಚಿತ್ರ ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ    

ಬಾಗೇಪಲ್ಲಿ: ತಾಲ್ಲೂಕಿನ ಕಾರಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳು ಇದ್ದರು. ಹೀಗಾಗಿ ಈ ಶಾಲೆ ಮುಚ್ಚುವ ಹಂತದಲ್ಲಿ ಇತ್ತು. ಆದರೆ ಶಾಲೆಯ ಶಿಕ್ಷಕ ಪರಿಶ್ರಮದಿಂದ ಇಂದು ಈ ಶಾಲೆ ಉಳಿದಿದೆ. ಸ್ಮಾರ್ಟ್ ತರಗತಿ ಮೂಲಕ ಪಾಠ ಕಲಿಕೆಯಿಂದ ಇದೀಗ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ತಾಲ್ಲೂಕಿನ ದೇವರಗುಡಿಪಲ್ಲಿ ಕ್ಲಸ್ಟರ್‌ನ ಕಾರಕೂರು ಗ್ರಾಮದಲ್ಲಿ ಬಹುತೇಕವಾಗಿ ಪರಿಶಿಷ್ಟ ಜಾತಿ, ಪಂಗಡದ ಕೃಷಿಕೂಲಿಕಾರ್ಮಿಕರು ಇದ್ದಾರೆ. ಗ್ರಾಮದಲ್ಲಿ 228ಕ್ಕೂ ಕುಟುಂಬ ಇದೆ. 848 ಜನಸಂಖ್ಯೆ ಹೊಂದಿದೆ. ಕುಲಕಸುಬುಗಳನ್ನು ಹಾಗೂ ಕೃಷಿ ಹಾಗೂ ಹೈನುಗಾರಿಕೆಯನ್ನು ಜೀವನಾಧಾರವಾಗಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ಶಾಲಾ ಕೊಠಡಿ, ಶೌಚಾಲಯ, ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಪೋಷಕರು ತಮ್ಮ ಮಕ್ಕಳನ್ನು ಪಟ್ಟಣದ ಖಾಸಗಿ ಶಾಲೆಗೆ ದಾಖಲು ಮಾಡಿದ್ದರು. 2023-24ನೇ ಸಾಲಿನಲ್ಲಿ ಕೇವಲ ಇಬ್ಬರು ಮಕ್ಕಳು ಇದ್ದರು. ಇದರಿಂದ ಶಿಕ್ಷಣ ಇಲಾಖೆ ಈ ಸರ್ಕಾರಿ ಶಾಲೆಯನ್ನು ಪಕ್ಕದ ಶಾಲೆಗೆ ವಿಲೀನ ಮಾಡಲು ಉದ್ದೇಶಿಸಿತ್ತು. ಆದರೆ ಕೆಲ ಪೋಷಕರು ಗ್ರಾಮದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆ ಮನವಿ ಮಾಡಿದ್ದರು.

ADVERTISEMENT

ಇದೇ ಸಂದರ್ಭದಲ್ಲಿ ಕಾರಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟಿ.ಆರ್.ವರಪ್ರಸಾದರೆಡ್ಡಿ ಎಂಬ ಶಿಕ್ಷಕರು ಸದ್ದುಪಲ್ಲಿ ಗ್ರಾಮದಿಂದ ವರ್ಗಾವಣೆ ಆದರು. ಗ್ರಾಮದಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಇದೇ ಶಾಲೆಯ ಮುಖ್ಯಶಿಕ್ಷಕ ಜಿ.ಲಕ್ಷ್ಮಿನಾರಾಯಣರಾವ್, ಶಿಕ್ಷಕ ಟಿ.ಆರ್.ವರಪ್ರಸಾದರೆಡ್ಡಿ, ಶಿಕ್ಷಕಿ ಬಿ.ಮಾಲತಿ ಶಾಲೆಗೆ ಸುಣ್ಣ, ಬಣ್ಣ ಹಾಕಿಸಿದರು.

ಬಣ್ಣ ಬಣ್ಣದ ಆಕೃತಿಗಳನ್ನು, ಚಿತ್ರ, ಗೋಡೆಬರಹ ಬರೆಸಿ ಆಕರ್ಷಣೀಯ ಶಾಲೆಯನ್ನಾಗಿ ಮಾಡಿದರು. ಶಾಲಾವರಣದಲ್ಲಿ ಸುಂದರವಾದ ಕೈ ತೋಟ, ತರಕಾರಿ, ಸೊಪ್ಪು ಬೆಳೆಸಿದರು. 120ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಉತ್ತಮವಾದ ಪರಿಸರದ ವಾತಾವರಣ ಸೃಷ್ಟಿಸಿದರು.

ಶಿಕ್ಷಕ, ಶಿಕ್ಷಕಿಯರು ಗ್ರಾಮದಲ್ಲಿನ ಮಕ್ಕಳ ಮನೆಗಳಿಗೆ ಭೇಟಿ ಮಾಡಿದರು. ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವಂತೆ ಪೋಷಕರನ್ನು ಮನವೊಲಿಸಿದರು. ಮರಳಿ ಬಾ ಶಾಲೆಗೆ ಅಭಿಯಾನ ಮಾಡಲಾಯಿತು.

ವಿವಿಧ ಖಾಸಗಿ ಸಂಸ್ಥೆಗೆ ದಾಖಲು ಮಾಡಿದ ಮಕ್ಕಳನ್ನು ಕೆಲ ಪೋಷಕರು 2023-24ನೇ ಸಾಲಿನ ಅಂತ್ಯಕ್ಕೆ 9 ಮಕ್ಕಳನ್ನು ದಾಖಲು ಮಾಡಿದ್ದರು. 2024-25ನೇ ಸಾಲಿಗೆ 9 ಮಕ್ಕಳು ಇದ್ದ ದಾಖಲಾತಿಯಲ್ಲಿ, 17 ಮಕ್ಕಳು ದಾಖಲಾದರು. ಇದೀಗ ಶಾಲೆಯಲ್ಲಿ 1 ನೇ ತರಗತಿಯಲ್ಲಿ 3, 2ನೇ 2, 3 ನೇ 3, 4ನೇಗೆ 2, 5ನೇಗೆ 5 ಹಾಗೂ 6ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಸರ್ಕಾರಿ ಶಾಲೆಗೆ ಅಗತ್ಯವಾದ ಶಾಲಾ ಕೊಠಡಿ ಇವೆ. ಪ್ರತ್ಯೇಕವಾದ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇದೆ. ಅಡುಗೆಕೋಣೆ ಇದೆ. ತಡೆಗೋಡೆ, ಮುಖ್ಯದ್ವಾರದಲ್ಲಿ ಕಬ್ಬಿಣದ ಬಾಗಿಲು ಹಾಕಿಸಲಾಗಿದೆ. ಸರ್ಕಾರದ ಅನುದಾನದ ಜೊತೆಗೆ ಸರ್ಕಾರೇತರ ಖಾಸಗಿ ಕಂಪನಿ ರೈಟ್ ಟು ಲೀವ್ ಹಾಗೂ ಸುತಾರ ಫೌಂಡೇಷನ್ ಶಾಲೆಗೆ ಸ್ಮಾಟ್ ಎಲ್‍ಇಡಿ ಟಿವಿ ಹಾಗೂ ಕಂಪ್ಯೂಟರನ್ನು ನೀಡಿದೆ.

ಕಂಪ್ಯೂಟರ್ ಬಳಕೆ, ಪದಗಳ ಟೈಲಿಂಗ್, ಬಣ್ಣ ಹಚ್ಚುವಿಕೆ, ಪವರ್ ಪಾಯಿಂಟ್, ನುಡಿ ಅಕ್ಷರಗಳನ್ನು ಟೈಪ್ ಮಾಡಲು ಕಲಿಸುತ್ತಿದ್ದಾರೆ. ಇವೆಲ್ಲಾ ಮಕ್ಕಳ ಕಲಿಕೆಗೆ, ಪೋಷಕರ ಆಕರ್ಷಣೆಗೆ ಮತ್ತಷ್ಟು ಸರ್ಕಾರಿ ಶಾಲೆಯ ಮೇಲೆ ಪೋಷಕರಿಗೆ, ಗ್ರಾಮಸ್ಥರಿಗೆ ನಂಬಿಕೆ ಹಾಗೂ ವಿಶ್ವಾಸ ಮೂಡಿಸಿದೆ. ಶಾಲೆಯ ಉತ್ತಮವಾದ ಕಲಿಕಾ ವಾತಾವರಣಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮುಚ್ಚುವ ಹಂತದಲ್ಲಿ ಇದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶಿಕ್ಷಕ, ಶಿಕ್ಷಕಿಯರ ಸಾಧನೆಯಿಂದ ಶಾಲೆ ಮುಂದುವರೆದಿದೆ. ಸರ್ಕಾರಿ ಶಾಲೆಗಳ ಶಿಕ್ಷಕ, ಶಿಕ್ಷಕಿಯರು ಮನಸ್ಸು ಮಾಡಿದರೆ ಮಕ್ಕಳನ್ನು ಹಾಗೂ ಗ್ರಾಮದಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡಿಸುತ್ತಾರೆ ಎಂಬುದಕ್ಕೆ ಈ ಸರ್ಕಾರಿ ಶಾಲೆ ಉದಾಹರಣೆ ಎಂದು ಶಾಲಾ ಪೋಷಕ ಕೆ.ವಿ.ವೆಂಕಟೇಶ್ ಹೇಳಿದರು.

‘ನಾನು ಶಾಲೆಗೆ ವರ್ಗಾವಣೆ ಆದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಇದ್ದರು. ಶಾಲಾ ಆಕರ್ಷಣೀಯ ಕೇಂದ್ರ ಮಾಡಿ, ಎಲ್‍ಇಡಿ ಟಿವಿ ಪರದೆಯ ಮೂಲಕ ಬೋಧನೆ ಮಾಡಲಾಯಿತು. ಮಕ್ಕಳ ಮನೆಗೆ ಭೇಟಿ ಮಾಡಿ ಮಕ್ಕಳನ್ನು ದಾಖಲು ಮಾಡಿಸಿದ್ದೇವೆ’ ಎಂದು ಶಾಲಾ ಶಿಕ್ಷಕ ಟಿ.ಆರ್.ವರಪ್ರಸಾದರೆಡ್ಡಿ ಹೇಳಿದರು.

‘ತಾಲ್ಲೂಕಿನಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಹ ಇಂಗ್ಲಿಷ್ ಭಾಷೆ ಬೋಧನೆ ಮಾಡಲಾಗುತ್ತಿದೆ. ಕಾರಕೂರು ಸೇರಿದಂತೆ ಅನೇಕ ಸರ್ಕಾರಿ ಶಾಲೆಗಳಲ್ಲಿ ಎಲ್‍ಇಡಿ ಟಿವಿ ಪರದೆಯ ಮೂಲಕ ಬೋಧನೆ ಮಾಡುತ್ತಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಪೋಷಕರು ಮಕ್ಕಳನ್ನು ದಾಖಲು ಮಾಡಿದ್ದಾರೆ. ಶಿಕ್ಷಕರು, ಗ್ರಾಮಸ್ಥರು, ಪೋಷಕರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆ ಉಳಿಸಿ, ಬೆಳೆಸಬಹುದು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.