ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಬಸವಾಪಟ್ಟಣ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಗುರುತಿಸಿರುವ ಭೂಮಿ ವೀಕ್ಷಣೆಗೆ ಬಂದಿದ್ದ ಕೆಐಎಡಿಬಿ ಅಧಿಕಾರಿಗಳಿಗೆ ವಿರೋಧ ವ್ಯಕ್ತಪಡಿಸಿದಾಗ ರೈತರೊಂದಿಗೆ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಅವರು ಮಾತನಾಡಿದರು
ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ಕೈಗಾರಿಕೆ ವಲಯ ಸ್ಥಾಪನೆಗಾಗಿ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2,823 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ಸೋಮವಾರ ಜಮೀನು ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳ ತಂಡವನ್ನು ಅಡ್ಡಗಟ್ಟಿದ ರೈತರು ಗ್ರಾಮದೊಳಗೆ ಪ್ರವೇಶಿಸಲು ಬಿಡದೆ ಘೇರಾವ್ ಹಾಕಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ಜಂಗಮಕೋಟೆ ಹೋಬಳಿಗೆ ಜಮೀನು ಪರಿಶೀಲನೆಗೆ ತೆರಳಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಹರಿಶಿಲ್ಪಾ ನೇತೃತ್ವದ ಅಧಿಕಾರಿಗಳ ತಂಡ ಕೆಲವು ಕಡೆಗಳಲ್ಲಿ ಗ್ರಾಮಸ್ಥರು ಹಾಗೂ
ರೈತರ ಆಕ್ರೋಶದ ಬಿಸಿ ಎದುರಿಸಬೇಕಾಯಿತು.
ಯಣ್ಣಂಗೂರು ಗ್ರಾಮಕ್ಕೆ ಹೋದ ಅಧಿಕಾರಿಗಳ ತಂಡವನ್ನು ಊರ ಪ್ರವೇಶ ದ್ವಾರದಲ್ಲಿಯೇ ತಡೆದ ರೈತರು ರಸ್ತೆಗೆ ಅಡ್ಡಲಾಗಿ ಕುಳಿತರು. ‘ಗ್ರಾಮದೊಳಗೆ ಬಿಡುವುದಿಲ್ಲ. ಮರಳಿ ಹೋಗಿ’ ಎಂದು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರ ಮನವೊಲಿಕೆಗೂ ರೈತರು ಪಟ್ಟು ಸಡಿಲಿಸಲಿಲ್ಲ.
ಇದಕ್ಕೆ ಪ್ರತಿಯಾಗಿ ಮತ್ತೊಂದು ರೈತರ ತಂಡ ‘ಭೂಮಿ ಕೊಡಲು ನಾವು ಸಿದ್ಧ. ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಲಿ. ನಮ್ಮದೇನೂ ಅಭ್ಯಂತರ ಇಲ್ಲ’ ಎಂದು ರಸ್ತೆಗಿಳಿದರು.
ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು, ಅಧಿಕಾರಿಗಳನ್ನು ಜಮೀನುಗಳಿಗೆ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.