
ಶಿಡ್ಲಘಟ್ಟ: ನಗರಸಭೆಯಲ್ಲಿ ಹಣದ ಕೊರತೆ ಇದೆ. ಪೌರಕಾರ್ಮಿಕರು, ವಾಟರ್‌ಮೆನ್‌ಗಳು ಹಲವು ತಿಂಗಳ ವೇತನ ಬಾಕಿಯೆಂದು ಆಗಿಂದಾಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ಕಂದಾಯ ಅಥವಾ ಇನ್ನಾವುದೇ ಮೂಲಗಳಿಂದ ಹಣ ಬರುತ್ತಲೇ ಅವರಿಗೆ ಒಂದೋ ಎರಡೋ ತಿಂಗಳ ವೇತನ ನೀಡಿ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಇರುವ ಹೊಸ ಐಡಿಎಸ್‌ಎಂಟಿ ಯ ಅಂಗಡಿ ಮಳಿಗೆಗಳಿಗೆ ಹಾಗೂ ಸಂತೆ ಬೀದಿ ರಸ್ತೆಯಲ್ಲಿರುವ ನಗರಸಭೆ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತೆ ಜಿ.ಅಮೃತ ಮತ್ತು ಸಿಬ್ಬಂದಿ, ಬಾಕಿ ಇರುವ ಬಾಡಿಗೆ ಮೊತ್ತವನ್ನು ಸ್ಥಳದಲ್ಲೇ ಲೆಕ್ಕಾಚಾರ ಮಾಡಿ ಕೂಡಲೆ ಹಣ ಪಾವತಿಸುವಂತೆ ಅಂಗಡಿ ಮಾಲಿಕರಿಗೆ ತಾಕೀತು ಮಾಡಿದ್ದರು.
ಆ ವೇಳೆ ಕೆಲವು ಅಂಗಡಿಯವರು ವರ್ಷಗಟ್ಟಲೆ ಬಾಡಿಗೆ ಹಣ ಕಟ್ಟದಿರುವುದು ಬೆಳಕಿಗೆ ಬಂದಿತ್ತು. ಸ್ಥಳದಲ್ಲೇ ನಿಂತು ನಾಲ್ಕೈದು ಅಂಗಡಿಗಳಿಗೆ ಬೀಗ ಹಾಕಿ ಬಂದ್ ಮಾಡಿಸಿದ್ದರು. ಬಾಕಿ ಇರುವ ಅಂಗಡಿಗಳ ಗೋಡೆಗೆ ನೋಟಿಸ್ ಕೂಡ ಅಂಟಿಸಿದ್ದರು.
ನಗರಸಭೆಗೆ ಸೇರಿರುವ ಒಟ್ಟು ಅಂಗಡಿಗಳ ಸಂಖ್ಯೆ 133. ಅವುಗಳಲ್ಲಿ ಐಡಿಎಸ್‌ಎಂಟಿ ಯ ಅಂಗಡಿಗಳು 94 ಇದ್ದರೆ, ನಗರಸಭೆಯ ಅಂಗಡಿಗಳ ಸಂಖ್ಯೆ 39. ನಗರಸಭೆಯ ಲೆಕ್ಕದ ಪ್ರಕಾರ ಪ್ರಸ್ತುತ ಐಡಿಎಸ್‌ಎಂಟಿ ಯ 11 ಅಂಗಡಿಗಳು ಮತ್ತು ನಗರಸಭೆಯ 2 ಅಂಗಡಿಗಳು ಖಾಲಿ ಇವೆ.
ಸರಾಸರಿ ₹10 ಸಾವಿರ ಒಂದು ಅಂಗಡಿಗೆ ಒಂದು ತಿಂಗಳ ಬಾಡಿಗೆ ಎಂದು ಲೆಕ್ಕ ಹಾಕಿದರೂ ಪ್ರತಿ ತಿಂಗಳೂ ಈ ಅಂಗಡಿಗಳ ಬಾಡಿಗೆಯೇ ₹12 ಲಕ್ಷ ನಗರಸಭೆಗೆ ವರಮಾನದ ರೂಪದಲ್ಲಿ ಬರಬೇಕಿತ್ತು. ಆದರೆ ನಗರಸಭೆ ಮಾತ್ರ ಹಣವಿಲ್ಲದೆ ಪರದಾಡುತ್ತಿದೆ. ಇದಕ್ಕೆ ಕಾರಣಗಳು ಹುಡುಕಿದಾಗ ನಗರಸಭೆಯ ಅವ್ಯವಸ್ಥೆಯ ದರ್ಶನವಾಗುತ್ತದೆ.
ಸುಮಾರು ಎರಡೂವರೆ ದಶಕಗಳ ಹಿಂದೆ ನಿರ್ಮಾಣವಾದ ನಗರಸಭೆ ಅಂಗಡಿಗಳನ್ನು ಹರಾಜಿನಲ್ಲಿ ಪಡೆದವರು ಬೇರೆ ಯಾರಿಗೋ ಕೊಟ್ಟು ಕೈತೊಳೆದುಕೊಂಡಿದ್ದಾರೆ. ನಗರಸಭೆಯ ಲೆಕ್ಕದಲ್ಲಿ ಮಾತ್ರ ಹಳೆಯ ಬಾಡಿಗೆ, ಮುಂಗಡ ಹಣ ಮತ್ತು ಹಳೆಯ ಮಾಲೀಕತ್ವವಿದೆ. ಕೆಲವು ಅಂಗಡಿಗಳಂತೂ ಐದಾರು ಕೈಗಳು ಬದಲಾಗಿವೆ. ಕೆಲವನ್ನು ಪ್ರಭಾವಿಗಳು ಪಡೆದುಕೊಂಡು ವರ್ಷಗಟ್ಟಲೆ ಬಾಡಿಗೆ ಕೊಡದೇ ಬಾಕಿ ಉಳಿಸಿಕೊಂಡಿದ್ದಾರೆ. ದುರಂತವೆಂದರೆ ಎರಡು ದಶಕಗಳಾದರೂ ಈ ಅಂಗಡಿಗಳ ಹರಾಜು ನಡೆದೇ ಇಲ್ಲ. ಹಲವು ಬಾರಿ ಹರಾಜು ಕರೆಯುವುದು ಮತ್ತು ಅದನ್ನು ರದ್ದುಗೊಳಿಸುವ ಪ್ರಕ್ರಿಯೆ ನಡೆದಿದೆ. ಇದರ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಕೆಲ ಅಂಗಡಿ ಮಾಲೀಕರು.
ಪಾರದರ್ಶಕವಾಗಿ ನಗರಸಭೆಯ ಅಂಗಡಿ ಮಳಿಗೆಗಳ ಹರಾಜನ್ನು ನಡೆಸಿದ್ದೇ ಆದರೆ ನಗರಸಭೆಗೆ ಕೋಟ್ಯಂತರ ಮುಂಗಡ ಹಣ ಬರುತ್ತದೆ ಮತ್ತು ಲಕ್ಷಗಟ್ಟಲೆ ಪ್ರತಿ ತಿಂಗಳೂ ಆದಾಯ ಬರುತ್ತದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿ ಇಲ್ಲಿದೆ.
2017ರಲ್ಲಿ ಪೌರಾಯುಕ್ತ ಚಲಪತಿ ಅವರು ನಗರದ ಸರ್ಕಾರಿ ಪ್ರೌಢಶಾಲೆ ಬಳಿಯ ನಗರಸಭೆಯ 50 ಅಂಗಡಿಗಳ ಮಾಲೀಕರು ನಿರ್ಮಿಸಿಕೊಂಡಿದ್ದ ಅನಧಿಕೃತ ಗೋಡೆ, ಶೀಟ್‌ಗಳನ್ನು ಯಂತ್ರ ತರಿಸಿ ತೆರವುಗೊಳಿಸಿದ್ದರು. ಬಾಡಿಗೆ ಕೊಡದವರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ, ಬಾಡಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.
ನಗರಸಭೆ ಎಲ್ಲ ಸವಲತ್ತುಗಳನ್ನು ನೀಡುತ್ತದೆ. ಪ್ರತಿ ತಿಂಗಳೂ ಬಾಡಿಗೆ ಸಮಯಕ್ಕೆ ಸರಿಯಾಗಿ ಪಾವತಿಸುವುದು ಅಂಗಡಿ ಮಾಲೀಕರ ಜವಾಬ್ದಾರಿ. ತಿಂಗಳುಗಟ್ಟಲೆ ಕೆಲವರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವುದು ಗಮನಕ್ಕೆ ಬಂತು. ಕೆಲವು ಅಂಗಡಿಗಳಿಗೆ ಬೀಗ ಜಡಿದು ಉಳಿದವರಿಗೆ ನೋಟಿಸ್ ನೀಡಿ ಸುಮಾರು ಮೂರೂವರೆ ಲಕ್ಷದಷ್ಟು ಹಣ ವಸೂಲಿ ಮಾಡಿದ್ದೇವೆ. ಉಳಿದವರು ಸಮಯ ಕೇಳಿದ್ದಾರೆ. ಬಾಕಿ ವಸೂಲಿ ಮಾಡಿದ ನಂತರ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಮುಂದೆ ಬಾಡಿಗೆಯ ಟೆಂಡರ್ ಕರೆದಾಗ ಈಗ ಬಾಕಿ ಉಳಿಸಿಕೊಂಡಿರುವವರನ್ನು ಭಾಗವಹಿಸಲು ಬಿಡುವುದಿಲ್ಲ. ನಗರಸಭೆಯ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ.ಜಿ.ಅಮೃತ ಪೌರಾಯುಕ್ತೆ
ಸರ್ಕಾರಿ ಪ್ರೌಢಶಾಲೆ ಜಾಗದಲ್ಲಿ ಕಟ್ಟಿರುವ ನಗರಸಭೆಯ 50 ಮಳಿಗೆಗಳ ಬಾಡಿಗೆ ಹಣ ಸರಿಯಾಗಿ ನಗರಸಭೆಗೆ ಪಾವತಿಯಾಗುತ್ತಿಲ್ಲ. ಹಲವು ಪ್ರಭಾವಿಗಳು ಸೇರಿಕೊಂಡು ಬೇರೆಯವರಿಗೆ ಹೆಚ್ಚು ಹಣಕ್ಕೆ ಬಾಡಿಗೆ ಕೊಟ್ಟಿರುವರು. ಇವುಗಳನ್ನೆಲ್ಲಾ ಹೊಸದಾಗಿ ಟೆಂಡರ್ ಕರೆದರೆ ನಗರಸಭೆಗೆ ಹೆಚ್ಚು ಆದಾಯ ಬರುತ್ತದೆ. ಅನಧಿಕೃತವಾಗಿ ಸೇರಿಕೊಂಡಿರುವವರನ್ನು ಮೊದಲು ಹೊರ ಹಾಕಬೇಕು.ಚೆಲುವರಾಜ್ ವಿಎಚ್‌ಪಿ ತಾಲ್ಲೂಕು ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.