ಶಿಡ್ಲಘಟ್ಟ: ನಗರದಲ್ಲಿನ ಶೆಟ್ಟಿಗುಣಿಯ ರಾಜಕಾಲುವೆ (ಟೋಲ್ ಗೇಟ್ ಬಳಿ ಹಾದು ಹೋಗುವ)ಗೆ ಸಿಮೆಂಟ್ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು ರಾಜಕಾಲುವೆಯಿಂದ ತೆಗೆಯುತ್ತಿರುವ ತ್ಯಾಜ್ಯ, ಮಣ್ಣು, ಕಸ ಕಡ್ಡಿಯನ್ನು ಗೌಡನ ಕೆರೆಗೆ ತುಂಬಿಸಲಾಗುತ್ತಿದೆ.
ನಗರದಿಂದ ಟೋಲ್‌ಗೇಟ್ ಮೂಲಕ ಗೌಡನಕೆರೆಗೆ ಸಂಪರ್ಕಿಸುವ ರಾಜಕಾಲುವೆಗೆ ನಗರೋತ್ಥಾನ ಹಂತ 4ರ ಅನುದಾನದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ರಾಜಕಾಲುವೆಯಿಂದ ತೆಗೆದ ತ್ಯಾಜ್ಯ ಮಣ್ಣನ್ನು ಸೂಕ್ತ ವಿಲೇವಾರಿ ಮಾಡಬೇಕಾದ ಗುತ್ತಿಗೆದಾರರು ಸಾಗಣೆ ವೆಚ್ಚ ಉಳಿಸಿಕೊಳ್ಳಲು ಸಮೀಪದಲ್ಲೆ ಇರುವ ಗೌಡನಕೆರೆಗೆ ತುಂಬಿಸಿ ಕೆರೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ನೋಡಿಯೂ ನೋಡದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ.
ಲೋಡುಗಟ್ಟಲೆ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದರೂ ತಾಲ್ಲೂಕು ಆಡಳಿತವೂ ನನಗೇನೂ ಸಂಬಂಧ ಇಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದೆ. ನಗರಸಭೆ ಹಣದಲ್ಲಿ ರಾಜಕಾಲುವೆಯ ಹೂಳುತೆಗೆದು ಕೃಷಿ ಮತ್ತು ಕುಡಿಯುವ ನೀರಿನ ಜೀವನಾಡಿ ಕೆರೆಗೆ ತುಂಬಿಸಲಾಗುತ್ತಿದೆ.
ಕೆರೆಗೆ ಕಟ್ಟಡಗಳ ಅವಶೇಷ, ತ್ಯಾಜ್ಯ ಮತ್ತು ರಾಜಕಾಲುವೆಯಿಂದ ತೆಗೆದ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದನ್ನು ಕಂಡು ಸ್ಥಳದಲ್ಲಿದ್ದ ರೈತ ಸಂಘದ ಹಯ್ಯಾತ್ ಖಾನ್ ಟ್ರ್ಯಾಕ್ಟರ್ ತಡೆದು ಕೆರೆಗೆ ಮಣ್ಣು ಸುರಿಯುವುದನ್ನು ವಿರೋಧಿಸಿದ್ದಾರೆ.
ಆಗ ರಾಜಕಾಲುವೆಯಲ್ಲಿ ಹೂಳು ತೆಗೆದು ಕೆರೆಗೆ ತುಂಬಿಸುತ್ತಿದ್ದ ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಸ್ಥಳಕ್ಕೆ ಬಂದು, ಶಾಸಕ ರವಿಕುಮಾರ್ ಅವರು ಇಲ್ಲಿ ಮಣ್ಣುಹಾಕಿ ರಸ್ತೆ ಅಗಲ ಮಾಡು ಎಂದು ಹೇಳಿದ್ದು, ಹಾಗಾಗಿ ಅಗಲ ಮಾಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ನಂತರ ನಗರಸಭೆ ಆಯುಕ್ತೆ ಅಮೃತ ಅವರು ಕೂಡ ಸ್ಥಳಕ್ಕೆ ಆಗಮಿಸಿ ಕೆರೆಯಂಚಿನಲ್ಲಿ ಮಣ್ಣು ಸುರಿಯುತ್ತಿರುವುದು ಏಕೆ, ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ.
ಗುತ್ತಿಗೆದಾರ ಕೆ.ಬಿ.ಮಂಜುನಾಥ್ ಇಲ್ಲಿ ಯಾರೋ ಕಟ್ಟಡಗಳ ಅವಶೇಷವನ್ನು ತಂದುಗುಡ್ಡೆ ಹಾಕಿದ್ದರು. ಶಾಸಕರು ಹೇಳಿದ್ದಕ್ಕೆ ಹಸನು ಮಾಡುತ್ತಿದ್ದೇನೆ ಎಂದು ಪೌರಾಯುಕ್ತರನ್ನು ದಿಕ್ಕು ತಪ್ಪಿಸಿದ್ದಾರೆ. ಪೌರಾಯುಕ್ತರು ಕೂಡ ಇಲ್ಲಿ ಹಾಕಬೇಡಿ ಎಂದಷ್ಟೆ ಹೇಳಿ ಏನೂ ಕ್ರಮ ತೆಗೆದುಕೊಳ್ಳದೆ ಅಲ್ಲಿಂದ ಹೊರಟು ಹೋದರು.
ಸ್ಥಳಕ್ಕೆ ಮಾಧ್ಯಮದವರು ಬಂದು ಕೆರೆಗೆ ಮಣ್ಣನ್ನು ಸುರಿಯುತ್ತಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ಕೆರೆ ಅಂಚಿನಲ್ಲಿ ಗುಡ್ಡೆಹಾಕಿದ್ದ ಕಸ ಕಡ್ಡಿ, ಮಣ್ಣಿನ ರಾಶಿಯನ್ನು ಮತ್ತೆ ಟ್ರ್ಯಾಕ್ಟರ್‌ಗೆ ತುಂಬಿಸಿ ವಾಪಸ್ ಕಳುಹಿಸಿದರು.
ಮಾಧ್ಯಮದವರು, ಅಧಿಕಾರಿಗಳು ಅಲ್ಲಿಂದ ಹೊರಟ ಮೇಲೆ ಇದೀಗ ಮಣ್ಣನ್ನು ಕೆರೆ ಅಂಚಿನ ಬದಲಿಗೆ ಕೆರೆಯ ಒಳಗೆ ಹಾಕಲಾಗುತ್ತಿದೆ. ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆರೆಯ ಹೂಳೆತ್ತುವುದು ಒಂದು ಕಡೆಯಾದರೆ ಅದೇ ಸರ್ಕಾರದ ಭಾಗವಾದ ನಗರಸಭೆಯಿಂದ ಕೈಗೊಂಡ ರಾಜಕಾಲುವೆ ತಡೆಗೋಡೆ ನಿರ್ಮಾಣದ ವೇಳೆ ತ್ಯಾಜ್ಯ ಮಣ್ಣನ್ನು ಕೆರೆಗೆ ತುಂಬಿಸಲಾಗುತ್ತಿದೆ.
ಇದು ಪರಿಸರವಾದಿ ಮತ್ತು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.