
ಶಿಡ್ಲಘಟ್ಟ: ತಾಲ್ಲೂಕಿನ ವರದನಾಯಕನಹಳ್ಲಿ ಗ್ರಾಮದಲ್ಲಿ ಮಂಗಳವಾರ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಉತ್ತರ ವಲಯದ ವಿದ್ಯಾರ್ಥಿಗಳಿಂದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ರೊಟೇರಿಯನ್ ಕ್ಲಬ್ ತರಬೇತುದಾರ ಅರಣ್ ಕುಮಾರ್ ಜಯದೇವಯ್ಯ ಮಾತನಾಡಿ, ‘ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ವಿದ್ಯಾರ್ಥಿಗಳಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಬೆಳೆಸುತ್ತವೆ. ಗ್ರಾಮೀಣ ಜೀವನ ವ್ಯವಸ್ಥೆಯ ಪರಿಚಯ ಮಾಡಿಕೊಡಲು ಉತ್ತಮ ವೇದಿಕೆಯಾಗಿವೆ’ ಎಂದು ಹೇಳಿದರು.
ಶಿಕ್ಷಣ ಪಡೆದು ಉದ್ಯೋಗ ಹಿಡಿಯುವುದೇ ಜೀವನದ ಗುರಿಯಾಗಬಾರದು. ಸಮಾಜಮುಖಿ ವ್ಯಕ್ತಿತ್ವ ರೂಢಿಸಿಕೊಂಡು ಸಮಾಜಮುಖಿಯಾಗಿ ಜೀವಿಸುವುದು ಪ್ರತಿ ಪ್ರಜೆಯ ಜವಾಬ್ದಾರಿಯಾಗಬೇಕು. ಎನ್ಎಸ್‌ಎಸ್ ಶಿಬಿರವು ಜನರಲ್ಲಿ ಸಮಾಜಮುಖಿ ವ್ಯಕ್ತಿತ್ವ ಬೆಳೆಸುತ್ತವೆ ಎಂದರು.
ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಉತ್ತರ ವಲಯ ಎನ್.ಎಸ್.ಎಸ್ ಅಧಿಕಾರಿ ಪ್ರೊ.ಎಂ.ಜೆ ಶಂಕರ್ ಮಾತನಾಡಿ, ಏಳು ದಿನಗಳ ಶಿಬಿರದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ವಿವರಿಸಿದರು.
ಈ ವೇಳೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಚಿಂತಾಮಣಿ ತಾಲ್ಲೂಕು ಉಸ್ತುವಾರಿ ರಾಜಯೋಗಿನಿ ಬಿ.ಕೆ.ಶಾಮಲ, ಉಪನ್ಯಾಸಕ ಪ್ರೊ.ಕೇಶವ, ಅಶ್ವಿನಿ, ಲೇಖನ, ವಿ.ಎಸ್.ಗೋಪಾಲಕೃಷ್ಣ, ಶಾಮಲ. ಜಿ, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ್, ಮುನಿರೆಡ್ಡಿ, ಈಧರೆ ಪ್ರಕಾಶ್, ಗೋಪಾಲಕೃಷ್ಣ, ಶಿವು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.