
ಶಿಡ್ಲಘಟ್ಟ: ‘2025’ ಶಿಡ್ಲಘಟ್ಟಕ್ಕೆ ಅಭಿವೃದ್ಧಿ ಅಡಿಗಲ್ಲನ್ನು ಹಾಕಿದ ವರ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಇಲಾಖೆ ಸಚಿವರು ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ, ರಾಮಸಮುದ್ರ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ, ಉತ್ತರ ವಿವಿ 2ನೇ ಹಂತದ ಕಾಮಗಾರಿ, 2ನೇ ಹಂತದ ಒಳ ಚರಂಡಿ ಯೋಜನೆ ಸೇರಿ ₹ 650 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ನ.24 ರಂದು ಚಾಲನೆ ನೀಡಿದರು.
ಹೀಗೆ ಶಿಡ್ಲಘಟ್ಟವು 2025ರಲ್ಲಿ ಮಹತ್ವದ ಅಭಿವೃದ್ಧಿ ಯೋಜನೆಗಳ ಭೂಮಿ ಪೂಜೆ ಮತ್ತು ಉದ್ಘಾಟನೆಗೆ ಸಾಕ್ಷಿ ಆಯಿತು.
ಶಾಸಕ ಬಿ.ಎನ್.ರವಿಕುಮಾರ್, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ 2 ಬೆಡ್ ಮಾತ್ರ ಇದ್ದು ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಸೌಲಭ್ಯ ಸಿಗುತ್ತಿಲ್ಲ ಎಂದು 8 ಬೆಡ್‌ಗಳ ಡಯಾಲಿಸಿಸ್ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಮಾರ್ಚ್‌ನಲ್ಲಿ ಚಾಲನೆ ನೀಡಿದ್ದರು.
ಏಪ್ರಿಲ್‌ನಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ದಿನದಂದು ಶಿಡ್ಲಘಟ್ಟದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲಿ, ತಾಲ್ಲೂಕು ಕಚೇರಿ ಎದುರು ₹ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನಡೆಯಿತು.
ಸುಗಟೂರಿನಲ್ಲಿ ಜೂನ್‌ನಲ್ಲಿ ಪರಿಸರ ದಿನದಂದು ‘ಹಸಿರು ಸುಗಟೂರು’ ಎಂಬ ಗಿಡಮರಗಳ ಕ್ರಾಂತಿಗೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ, ದಾನಿಗಳ ನೆರವು ಮತ್ತು ಸುಗಟೂರು ಶಾಲಾ ಮಕ್ಕಳ ಶ್ರಮದೊಂದಿಗೆ 600 ಸೀಡ್ ಬಾಲ್ಸ್ ಹಾಗೂ 1600 ಗಿಡಗಳ ವಿತರಿಸಲಾಯಿತು.
ಡಿಸೆಂಬರ್ ತಿಂಗಳಿನಲ್ಲಿ ಶಿಡ್ಲಘಟ್ಟದ ಜಂಗಮಕೋಟೆ ಕ್ರಾಸ್ ನ ಜ್ಞಾನ ಜ್ಯೋತಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಯೋಜಿಸಿ, ಗ್ರಾಮೀಣ ಭಾಗದ ಸುಮಾರು 2000 ಮಂದಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಶಿಡ್ಲಘಟ್ಟ ಕಡೆಗಣಿಸಿರುವ ಬಗ್ಗೆ, ತಮ್ಮ ಸಾಧನೆಯನ್ನು ಕಡೆಗಣಿಸಿರುವ ಬಗ್ಗೆ ಕಲಾವಿದ ಈ ಧರೆ ತಿರುಮಲ ಪ್ರಕಾಶ್ ಅವರು ತಮಗೆ ಲಭಿಸಿರುವ ಪ್ರಮಾಣಪತ್ರಗಳನ್ನು ಹಾರದಂತೆ ಧರಿಸಿ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ ತಿಂಗಳಿನಲ್ಲಿ ರೇಷ್ಮೆಗೂಡು ಧಾರಣೆ ಏರಿಕೆಕಂಡು ರೇಷ್ಮೆ ಬೆಳೆಗಾರರಲ್ಲಿ ಉತ್ಸಾಹ ಮೂಡಿಸಿತು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಿಶ್ರತಳಿ ಗೂಡು ಒಂದು ಕೆ.ಜಿಗೆ ಗರಿಷ್ಠ ₹ 748 ಮಾರಾಟವಾದರೆ, ಬೈವೋಲ್ಟೀನ್ ಗೂಡು ₹ 850ಕ್ಕೆ ಮಾರಾಟವಾಯಿತು. ಈ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತಂದಿದ್ದ ರೈತರಿಗೆ ಮತ್ತು ಅದನ್ನು ಕೊಂಡ ರೀಲರಿಗೆ ಮಾರುಕಟ್ಟೆ ಅಧಿಕಾರಿಗಳು ಪ್ರಶಂಸನಾಪತ್ರ ನೀಡಿದರು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಪ್ರಕಾಶ್ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸಲ್ಲಿಸುತ್ತಿರುವ ಉತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯಪಾಲರು ಪ್ರಶಂಸನಾ ಪ್ರಮಾಣ ಪತ್ರ ಮತ್ತು ಬೆಳ್ಳಿ ಪದಕ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕಿಯರ ತಂಡ ಬಿಹಾರ ರಾಜ್ಯದ ಪಾಟ್ನಾದಲ್ಲಿ ಫೆ.25 ರಿಂದ ಮಾರ್ಚ್ 3 ರವರೆಗೆ ನಡೆದ ಅಖಿಲ ಭಾರತ ನಾಗರಿಕ ಸೇವಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದರು. ಈ ಮೂಲಕ
ಅಖಿಲ ಭಾರತೀಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಚೌಡರೆಡ್ಡಿಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಕಿಶೋರ್ ಕುಮಾರ್ ರಾಷ್ಟ್ರ ಮಟ್ಟದಲ್ಲಿ ಮೊದಲ ಬಹುಮಾನ ಪಡೆದರು. ಶಿಡ್ಲಘಟ್ಟ ತಾಲ್ಲೂಕನ್ನು 2024 -25 ಸಾಲಿನ ಉತ್ತಮ ತಾಲ್ಲೂಕು ಟಿ.ಬಿ ಚಿಕಿತ್ಸಾ ಘಟಕ ಎಂದು ಘೋಷಿಸಲಾಯಿತು. ಇವೆಲ್ಲವೂ ಮಾರ್ಚ್‌ನಲ್ಲಿ ನಡೆದ ಪ್ರಮುಖ ವಿದ್ಯಮಾನಗಳು.
ಮಳ್ಳೂರು ಎಂ.ಆರ್.ಶಿವಣ್ಣ ಅವರು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕ, ಶಿಡ್ಲಘಟ್ಟದ 11 ನೇ ವಾರ್ಡ್ ನ ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್ ಅವರು ನವದೆಹಲಿಯಲ್ಲಿ ಜುಲೈ ತಿಂಗಳಿನಲ್ಲಿ ನಡೆದ ‘ಸಿಟೀಸ್ ರೈಸಿಂಗ್ – ಎ ಲೀಡರ್ಸ್ ಸಮ್ಮಿಟ್’ ಎಂಬ ರಾಷ್ಟ್ರಮಟ್ಟದ ಶೃಂಗಸಭೆಯಲ್ಲಿ ರಾಜ್ಯದ ಏಕೈಕ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದು, ಮೇಲೂರಿನ ರೈತ ಸಚಿನ್ ಅವರ ಕೃಷಿಯ ಸಾಧನೆಗಾಗಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ನೀಡಿ ಗೌರವಿ, ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದು ಜಿಲ್ಲೆಯಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿಯೂ ಶಿಡ್ಲಘಟ್ಟದ ಹೆಗ್ಗಳಿಕೆಯನ್ನು ಮೆರೆದರು.
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್. ಕಲಾಧರ್ ಅವರಿಗೆ ಗದಗ ಜಿಲ್ಲೆಯ ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ‘ಮಕ್ಕಳ ಸ್ನೇಹಿ ಶಿಕ್ಷಕ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿತು.
ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ. ಎನ್. ರೇಖಾ ರಾಣಿ ಅವರಿಗೆ ರಾಯಚೂರು ಕಲಾಸಂಕುಲ ಸಂಸ್ಥೆಯವರು ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ನೀಡಿತು.
ಮೇಲೂರು ಗ್ರಾಮದ 13 ವರ್ಷ ಪ್ರಾಯದ ಟೆನ್ನಿಸ್ ಆಟಗಾರ ಪುನೀತ್ ಮನೋಹರ್, ಜೂನಿಯರ್ ರಾಷ್ಟ್ರೀಯ ಟೆನ್ನಿಸ್ ರ‍್ಯಾಂಕಿಗ್‌ನಲ್ಲಿ (14 ವರ್ಷದೊಳಗಿನ) ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಮೂಲಕ ಶಿಡ್ಲಘಟ್ಟ ತಾಲ್ಲೂಕಿನ ಈ ಬಾಲಕ ಹೊಸ ದಾಖಲೆ ಸೃಷ್ಟಿಸಿದ್ದಾನೆ. ಸಿಂಗಲ್ಸ್ ಮತ್ತು ಡಬಲ್ಸ್ ಸೇರಿಸಿ 871.25 ಪಾಯಿಂಟ್ಸ್ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮೊದಲಿಗನಾಗಿದ್ದಾನೆ.
ಆನೂರು ಗ್ರಾಮ ಪಂಚಾಯಿತಿ 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಯಿತು. ಮೇಲೂರಿನ ವಜ್ರಲ್ ಗೌಡ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ನಲ್ಲಿ ಐದು ಚಿನ್ನದ ಪದಕ ಪಡೆದರು. ಜಂಗಮಕೋಟೆಯ ಕೀಲುಕುದುರೆ ಮತ್ತು ಗಾರುಡಿಗೊಂಬೆಯ ಕಲಾವಿದ ಕೆ.ಎಂ.ನಾರಾಯಣಸ್ವಾಮಿ, ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪಡೆದರು.
ಪುರಾತತ್ವ ಇಲಾಖೆಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ವೆ ನಡೆಸಿದ ಶಾಸನತಜ್ಞರಾದ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್, ಹೊಸ ಶಾಸನಗಳು, ವೀರಗಲ್ಲುಗಳನ್ನು ಪತ್ತೆಹಚ್ಚಿದರು.
ಹಂಡಿಗನಾಳ ಗ್ರಾಮದ ಹೊರವಲಯದಲ್ಲಿ ಗಂಗರ ಕಾಲದ ಅಂದರೆ ಸುಮಾರು 9 ರಿಂದ 10 ನೇ ಶತಮಾನದ ಅಪರೂಪದ ಮೂರು ವೀರಗಲ್ಲುಗಳು, ಕೊತ್ತನೂರು ಹೊರವಲಯದಲ್ಲಿ “ಕೊತ್ತನೂರು” ಗ್ರಾಮದ ಹೆಸರಿರುವ 1,200 ವರ್ಷಗಳಷ್ಟು ಹಿಂದಿನ ಗಂಗರ ಕಾಲದ ಗಂಗರ ಕಾಲದ ಶಾಸನ ಸಹಿತ ವೀರಗಲ್ಲುಗಳು, ಗೆಜ್ಜಿಗಾನಹಳ್ಳಿಯಲ್ಲಿ ಆರು ಶಾಸನ ಮತ್ತು ವೀರಗಲ್ಲುಗಳು, ಸೊಣ್ಣೇನಹಳ್ಳಿಯಲ್ಲಿ ಶಿಡ್ಲಘಟ್ಟ ನಗರ ನಿರ್ಮಾತೃ ಅಲಸೂರಮ್ಮನ ಮಗ ಶಿವನೇಗೌಡನ ಹೆಸರಿರುವ ಶಾಸನ, ಸಾದಲಿ ಗ್ರಾಮದ ಹೊರವಲಯದಲ್ಲಿ ‘ಗುಡಿಬಂಡೆ’ ಹೆಸರಿನ ಪ್ರಸ್ತಾಪವಿರುವ ಮೊಟ್ಟ ಮೊದಲ ಶಾಸನ, ಮದ್ದೇಗಾರಹಳ್ಳಿಯ ಬಳಿಯ ಗುಡ್ಡದ ಮೇಲ್ಭಾಗದಲ್ಲಿ ಸಿಕ್ಕ ಕಬ್ಬಿಣಯುಗದ ಬೃಹತ್ ಶಿಲಾಯುಗ ಸಂಸ್ಕೃತಿಯು ಈ ಭಾಗದ ಇತಿಹಾಸವನ್ನು ಸುಮಾರು 2,300 ವರ್ಷಗಳ ಹಿಂದಕ್ಕೆ ಕೊಂಡೊಯ್ಯುತ್ತವೆ.
ಬಚ್ಚನಹಳ್ಳಿ, ಮಿತ್ತನಹಳ್ಳಿ, ಅಂಕತಟ್ಟಿ, ಎಸ್. ದೇವಗಾನಹಳ್ಳಿ, ಮಳ್ಳೂರು, ಗೆಜ್ಜೆಗಾನಹಳ್ಳಿಯಲ್ಲಿ ಪತ್ತೆಯಾದ ಶಾಸನಗಳು ಇತಿಹಾಸದ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತವೆ.
ಶಿಡ್ಲಘಟ್ಟದ ಕೋಟೆ ಭಾಗದಲ್ಲಿರುವ ಸೋಮೇಶ್ವರ ದೇವಸ್ಥಾನವು ಶಿಡ್ಲಘಟ್ಟದ ಸಂಸ್ಥಾಪಕರಾದ ಅಲಸೂರಮ್ಮ ಮತ್ತು ಶಿವನೇಗೌಡರ ಕಾಲದಲ್ಲಿ ನಿರ್ಮಿತವಾಗಿದೆ., ನಗರದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇದು ಕಾಲಕ್ರಮೇಣ ಶಿಥಿಲಗೊಂಡಿತ್ತು. ಡಾಲ್ಫಿನ್ ಸ್ಕೂಲ್ ನಾಗರಾಜ್ ನೇತೃತ್ವದ ಸಮಿತಿಯು ದಾನಿಗಳ ಸಹಕಾರ ಪಡೆದು ₹ 2.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಿ ನವೆಂಬರ್‌ನಲ್ಲಿ ಉದ್ಘಾಟಿಸಿದರು.
ಹೀಗೆ 2025 ಇತಿಹಾಸ, ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಲ್ಲಿ ಶಿಡ್ಲಘಟ್ಟಕ್ಕೆ ಮಹತ್ವದ ವರ್ಷವಾಗಿದೆ.
ಮೇಲೂರು ಗ್ರಾಮದ 13 ವರ್ಷ ಪ್ರಾಯದ ಟೆನ್ನಿಸ್ ಆಟಗಾರ ಪುನೀತ್ ಮನೋಹರ್, ಜೂನಿಯರ್ ರಾಷ್ಟ್ರೀಯ ಟೆನ್ನಿಸ್ ರ‍್ಯಾಂಕಿಂಗ್‌ನಲ್ಲಿ (14 ವರ್ಷದೊಳಗಿನ) ಪ್ರಥಮ ಸ್ಥಾನ ಪಡೆದರು. ಈ ಮೂಲಕ ಶಿಡ್ಲಘಟ್ಟ ತಾಲ್ಲೂಕಿನ ಈ ಬಾಲಕ ಹೊಸ ದಾಖಲೆ ಬರೆದರು. ಸಿಂಗಲ್ಸ್ ಮತ್ತು ಡಬಲ್ಸ್ ಸೇರಿಸಿ 871.25 ಪಾಯಿಂಟ್ಸ್ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮೊದಲಿಗನಾದರು.
ಮೇಲೂರಿನ ವಜ್ರಲ್ ಗೌಡ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ನಲ್ಲಿ ಐದು ಚಿನ್ನದ ಪದಕ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.