ಕದ್ದ ದಾಳಿಂಬೆ ಕಾರಿನಲ್ಲಿ ತುಂಬಿರುವುದು
ಶಿಡ್ಲಘಟ್ಟ: ತಾಲ್ಲೂಕಿನ ಸಾದಹಳ್ಳಿ ಗ್ರಾಮದಲ್ಲಿ ದಾಳಿಂಬೆ ತೋಟವೊಂದಕ್ಕೆ ನುಗ್ಗಿ ಕಟಾವಿಗೆ ಬಂದಿದ್ದ 400 ಕೆ.ಜಿಯಷ್ಟು ದಾಳಿಂಬೆ ಹಣ್ಣುಗಳನ್ನು ಕಳ್ಳತನ ಮಾಡಿ, ಕಾರಿನಲ್ಲಿ ಸಾಗಿಸಲು ಯತ್ನಿಸುತ್ತಿದ್ದ ನಾಲ್ವರು ಪೊಲೀಸರ ಅತಿಥಿಗಳಾಗಿದ್ದಾರೆ.
ಬೈರಗಾನಹಳ್ಳಿಯ ಮನೋಜ್, ಶಿವರಾಜ್, ಚರಣ್ ಮತ್ತು ಮೋಹನ್ ಬಂಧಿತರು. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಬುಧವಾರ ರಾತ್ರಿ 8.30ರ ವೇಳೆಗೆ ತೋಟಕ್ಕೆ ನುಗ್ಗಿದ್ದ ನಾಲ್ವರು ಕಳ್ಳರು ಸುಮಾರು 400 ಕೆ.ಜಿ.ಯಷ್ಟು ದಾಳಿಂಬೆ ಹಣ್ಣುಗಳನ್ನು ತುಂಬಿಕೊಂಡು ಕಾರಿನಲ್ಲಿ ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದರು. ಇದೇ ವೇಳೆ ತೋಟಕ್ಕೆ ಬಂದ ಮಾಲೀಕ ಚಂದ್ರಪ್ಪ ಅವರು ಟಾರ್ಚ್ ಲೈಟ್ ಹಿಡಿದು ಪರಿಶೀಲಿಸಿದಾಗ, ನಾಲ್ವರು ದಾಳಿಂಬೆ ಸಾಗಿಸುತ್ತಿದ್ದನ್ನು ಕಂಡಿದ್ದಾರೆ. ಆಗ ಚಂದ್ರಪ್ಪ ಅವರ ತನ್ನ ಅಣ್ಣ ರಾಜಣ್ಣನನ್ನು ಸ್ಥಳಕ್ಕೆ ಕರೆಸಿದ್ದಾರೆ. ಈ ವೇಳೆ ನಾಲ್ವರು ಕಳ್ಳರು ಪರಾರಿಯಾಗಲು ಯತ್ನಿಸಿದ್ದು, ಇಬ್ಬರನ್ನು ಹಿಡಿಯುವಲ್ಲಿ ತೋಟದ ಮಾಲೀಕರು ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರೈತ ಮಹಿಳೆ ರೂಪಮ್ಮ, ‘ಸುಮಾರು 3 ಎಕರೆ ಜಮೀನಿನಲ್ಲಿ ಸಾಲ ಮಾಡಿ ದಾಳಿಂಬೆ ಬೆಳೆದಿದ್ದೇವೆ. ಸುಮಾರು ₹10ರಿಂದ ₹12 ಲಕ್ಷ ಬಂಡವಾಳ ಹಾಕಿ ಬೆಳೆಯನ್ನು ಬೆಳೆದಿದ್ದೇವೆ. ಪ್ರತಿನಿತ್ಯ ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತು. ನನ್ನ ಬಳಿಯ ಒಡವೆಗಳನ್ನೆಲ್ಲ ಅಡ ಇಟ್ಟು, ಸಾಲಸೋಲ ಮಾಡಿ ಕೃಷಿ ಮಾಡಿದ್ದೇವೆ. ಅವರು ರೈತರಾಗಿದ್ದುಕೊಂಡು, ಇನ್ನೊಬ್ಬ ರೈತರ ಕಷ್ಟ ಅರ್ಥ ಮಾಡಿಕೊಳ್ಳದೆ ಈ ಕೃತ್ಯವೆಸಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು
ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.