ADVERTISEMENT

ಚಿಮುಲ್‌: ವಿಭಜನೆಯಾಗಿ ಆರು ತಿಂಗಳಾದರೂ ಇಲ್ಲ ಚುನಾವಣೆ

ಕೋಲಾರ ಹಾಲು ಒಕ್ಕೂಟಕ್ಕೆ ಘೋಷಣೆಯಾಯಿತು ಚುನಾವಣೆ; ಚಿಕ್ಕಬಳ್ಳಾಪುರಕ್ಕೆ ಕೂಡದ ಕಾಲ

ಡಿ.ಎಂ.ಕುರ್ಕೆ ಪ್ರಶಾಂತ
Published 1 ಏಪ್ರಿಲ್ 2025, 5:35 IST
Last Updated 1 ಏಪ್ರಿಲ್ 2025, 5:35 IST
ಚಿಕ್ಕಬಳ್ಳಾಪುರ ಮೆಗಾ ಡೇರಿ
ಚಿಕ್ಕಬಳ್ಳಾಪುರ ಮೆಗಾ ಡೇರಿ   

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಎರಡನೇ ಬಾರಿಗೆ ವಿಭಜನೆಯಾಗಿ ಆರು ತಿಂಗಳಾಗಿದೆ. ಆದರೆ ಇಂದಿಗೂ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶನ ಸ್ಥಾನಗಳಿಗೆ ಚುನಾವಣೆ ನಡೆಯುವ ಲಕ್ಷಣಗಳು ಇಲ್ಲ.

ಕೋಲಾರ ಹಾಲು ಒಕ್ಕೂಟವು ಈಗಾಗಲೇ ಸಾಮಾನ್ಯ ಸಭೆ ನಡೆಸಿ ಚುನಾವಣೆಯನ್ನೂ ಘೋಷಿಸಿದೆ. ಜೂ.25ಕ್ಕೆ ಕೋಲಾರ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆಯಲಿದೆ. 

ಚಿಕ್ಕಬಳ್ಳಾಪುರ ಒಕ್ಕೂಟದಲ್ಲಿ ಚುನಾವಣೆ ಹೆಜ್ಜೆ ಇಡುವುದರು ಇರಲಿ ಇನ್ನೂ ಕ್ಷೇತ್ರ ಪುನರ್ವಿಂಗಡಣೆ ಮತ್ತು ರಚನೆಯ ವಿಚಾರಗಳೇ ಇನ್ನೂ ಪರಿಹಾರವಾಗಿಲ್ಲ. ಅಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು, ‘ಕ್ಷೇತ್ರ ಪುನರ್ವಿಂಗಡಣೆಯ ತರುವಾಯ ಚುನಾವಣೆ’ ನಡೆಸಲಾಗುವುದು ಎಂದು ಹೇಳುತ್ತಿದ್ದಾರೆ. 

ADVERTISEMENT

ಆ ಪುನರ್ವಿಂಗಡಣೆ ಇನ್ನೂ ಎಷ್ಟುಗಳಲ್ಲಿ ನಡೆಯಲಿದೆ, ಚುನಾವಣೆ ಯಾವಾಗ ಘೋಷಣೆ ಆಗಲಿದೆ ಎನ್ನುವ ಸ್ಪಷ್ಟತೆ ಮಾತ್ರ ದೊರೆಯುತ್ತಿಲ್ಲ.

2024ರ ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್‌)ಗೆ ಅ.29ರಂದು ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು. ಬೆಂಗಳೂರು ಪ್ರಾಂತದ ಸಹಕಾರ ಸಂಘಟಗಳ ಜಂಟಿ ನಿಬಂಧಕರು ಈ ನೇಮಕದ ಆದೇಶ ಮಾಡಿದರು. ಆರು ತಿಂಗಳ ಕಾಲ ಉಪವಿಭಾಗಾಧಿಕಾರಿಯು ಚಿಮುಲ್ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುವರು. 

ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ.  ಆಡಳಿತಾಧಿಕಾರಿಯು ಒಕ್ಕೂಟದ ಪ್ರಭಾರ ಜವಾಬ್ದಾರಿವಹಿಸಿಕೊಂಡು ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಕ್ರಮವಹಿಸಬೇಕು. ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಬೇಕು ಆದೇಶದಲ್ಲಿ ತಿಳಿಸಿದ್ದರು. ಆಡಳಿತಾಧಿಕಾರಿ ಜವಾಬ್ದಾರಿವಹಿಸಿಕೊಂಡು ಉಪವಿಭಾಗಾಧಿಕಾರಿಯು ಐದು ತಿಂಗಳು ಪೂರ್ಣವಾಗಿದೆ. 

ಜಿಲ್ಲೆಯಲ್ಲಿಯೂ ಅಸ್ತಿತ್ವಕ್ಕೆ ಬರಲಿದೆಯೇ 13 ಸ್ಥಾನ: ಕೋಲಾರ ಹಾಲು ಒಕ್ಕೂಟದಲ್ಲಿಯೂ ಕ್ಷೇತ್ರ ಪುನರ್ವಿಂಗಡಣೆಯಾಗಿ ಒಟ್ಟು 13 ಸ್ಥಾನಗಳು ಅಸ್ತಿತ್ವಕ್ಕೆ ಬಂದಿವೆ. ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ 13 ಸ್ಥಾನಗಳು ಅಸ್ತಿತ್ವಕ್ಕೆ ಬರುತ್ತವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರೂ 13 ಸ್ಥಾನಗಳು ಅಸ್ತಿತ್ವಕ್ಕೆ ಬರಲಿ ಎಂದು ಬಯಸಿದ್ದಾರೆ ಎನ್ನುವ ಮಾತುಗಳು ಸಹಕಾರ ವಲಯದಲ್ಲಿ ಇದೆ.

ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ತಾಲ್ಲೂಕಿಗೆ ತಲಾ ಎರಡು ಸ್ಥಾನ, ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚೇಳೂರು, ಮಂಚೇನಹಳ್ಳಿ ತಾಲ್ಲೂಕಿಗೆ ತಲಾ ಒಂದು ಸ್ಥಾನ ರಚನೆ ಆಗುತ್ತದೆ. ಮಹಿಳೆಯರಿಗೆ ಎರಡು ಸ್ಥಾನ ಮೀಸಲಾಗುತ್ತದೆ ಎನ್ನುವ ಮಾತುಗಳು ಇವೆ.

ಇಲ್ಲಿಯವರೆಗೆ ಜಿಲ್ಲೆಯ ಆರು ತಾಲ್ಲೂಕಿಗಳಿಗೆ ತಲಾ ಒಂದು ಮತ್ತು ಒಂದು ಮಹಿಳಾ ಸ್ಥಾನವಿತ್ತು. ಈಗ ಮಂಚೇನಹಳ್ಳಿ ಮತ್ತು ಚೇಳೂರು ತಾಲ್ಲೂಕು ರಚನೆಯಾಗಿದೆ. ಈ ತಾಲ್ಲೂಕುಗಳಿಗೂ ಪ್ರಾತಿನಿಧ್ಯ ದೊರೆಯಲಿದೆ.  

ಚಿಮುಲ್‌ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳ ಕ್ಷೇತ್ರ ಪುನರ್ವಿಂಗಡಣೆ ಕಾನೂನು ಬದ್ಧವಾಗಿ ಮಾಡಬೇಕು. ಏಕಪಕ್ಷೀಯವಾಗಿ ಮಾಡಿದರೆ ಮತ್ತು ಹೆಚ್ಚುವರಿ ಕ್ಷೇತ್ರಗಳನ್ನು ರೂಪಿಸಿದರೆ ಚಿಮುಲ್‌ಗೆ ಆರ್ಥಿಕ ನಷ್ಟ ಮತ್ತು ದುಂದುವೆಚ್ಚ ಆಗುತ್ತದೆ ಎನ್ನುವ ಅಭಿಪ್ರಾಯ ಜಿಲ್ಲೆಯ ಸಹಕಾರ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಕೋಚಿಮುಲ್ ಅಸ್ತಿತ್ವದಲ್ಲಿದ್ದ ವೇಳೆ ಎರಡೂ ಜಿಲ್ಲೆಯ 11 ತಾಲ್ಲೂಕುಗಳಿಂದ ತಲಾ ಒಬ್ಬರು, ಎರಡೂ ಜಿಲ್ಲೆಗಳಿಂದ ತಲಾ ಒಬ್ಬ ಮಹಿಳಾ ಪ್ರತಿನಿಧಿ ಚುನಾವಣೆಯ ಮೂಲಕ ಆಯ್ಕೆ ಆಗುತ್ತಿದ್ದರು. ಸರ್ಕಾರದ ನಾಮನಿರ್ದೇಶಕರು, ಎನ್‌ಡಿಡಿಬಿ ಪ್ರತಿನಿಧಿ, ಕೆಎಂಎಫ್ ಪ್ರತಿನಿಧಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿ ನಿರ್ದೇಶಕರಾಗಿದ್ದರು. 

‘ಶೀಘ್ರ ಚುನಾವಣೆ ನಡೆಸಿ’‌

ಕೋಲಾರ ಒಕ್ಕೂಟದಲ್ಲಿ ಸಾಮಾನ್ಯ ಸಭೆ ನಡೆದು ಈಗ ಚುನಾವಣೆ ಘೋಷಣೆಯೂ ಆಗಿದೆ. ಆದರೆ ಚಿಕ್ಕಬಳ್ಳಾಪುರ ಒಕ್ಕೂಟದಲ್ಲಿ ಕ್ಷೇತ್ರ ಪುನರ್ವಿಂಗಡಣೆಯೇ ಆಗಿಲ್ಲ. ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಈ ಬಗ್ಗೆ ಗಮನವಹಿಸಿ ಚುನಾವಣೆಗೆ ಕ್ರಮವಹಿಸಬೇಕು ಎಂದು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಆಗ್ರಹಿಸಿದರು. ಆಡಳಿತಾಧಿಕಾರಿ ನೇಮಿಸಿ ಆರು ತಿಂಗಳು ಸಮೀಪಿಸುತ್ತಿದೆ. ಚಿಮುಲ್ ರಚನೆಯಾದ ಮೇಲೆ ಆಡಳಿತ ಸೇರಿದಂತೆ ಎಲ್ಲವೂ ಚಿಕ್ಕಬಳ್ಳಾಪುರದಿಂದಲೇ ನಡೆಯುತ್ತಿದೆ. ಸಾಮಾನ್ಯ ಸಭೆ ಪುನರ್ವಿಂಗಡಣೆ ನಡೆಸಿ ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.