ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಿದ್ಧತೆಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮೀಕ್ಷಾ ಕಾರ್ಯದ ಮುಖ್ಯ ತರಬೇತುದಾರರು, ಮೇಲ್ವಿಚಾರಕರು, ಗಣತಿದಾರರನ್ನು ನೇಮಿಸುವ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಸಮೀಕ್ಷಾ ಕಾರ್ಯವು ರಾಜ್ಯದಾದ್ಯಂತ ಏಕಕಾಲಕ್ಕೆ ನಡೆಯಲಿದೆ. ಪ್ರತಿ 150 ಮನೆಗಳಿಗೆ ಒಬ್ಬ ಗಣಿತಿದಾರರನ್ನು ಹಾಗೂ ಪ್ರತಿ 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಬೇಕಾಗಿದೆ ಎಂದರು.
ಈ ಕಾರ್ಯಕ್ಕೆ ಶಿಕ್ಷಕರು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಿ ಸಿದ್ಧಪಡಿಸಬೇಕು. ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು. ಮುಖ್ಯ ತರಬೇತುದಾರರನ್ನು ಸರ್ಕಾರದ ನಿರ್ದೇಶನದಂತೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲೆಯ ಎಲ್ಲ ಕುಟುಂಬಗಳ ಮನೆಗಳಿಗೆ ಶೈಕ್ಷಣಿಕ ಸಮೀಕ್ಷಾ ಸ್ಟಿಕ್ಕರ್ ಅಂಟಿಸುತ್ತಿರುವ ಕಾರ್ಯದ ಬಗ್ಗೆ ಕಾಲೋಚಿತವಾಗಿ ಖಾತರಿಪಡಿಸಿಕೊಳ್ಳಬೇಕು. ಜಿಲ್ಲೆಯ ಸುಮಾರು 3,70,000 ಕುಟುಂಬಗಳ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಸೆ.5ರೊಳಗೆ ಬೆಸ್ಕಾಂನವರು ಪೂರ್ಣಗೊಳಿಸಬೇಕು ಎಂದರು.
ಈ ಸ್ಟಿಕ್ಕರ್‌ಗಳನ್ನು ಯಾವುದೇ ಸಾರ್ವಜನಿಕರು ತೆಗೆದುಹಾಕುವುದು, ಮುಚ್ಚುವುದು ಅಥವಾ ನಾಶಪಡಿಸುವುದು ಮಾಡಬಾರದು. ಗಣತಿದಾರರು ಕೇಳುವ ಮಾಹಿತಿ ನೀಡುವ ಮೂಲಕ ಜಿಲ್ಲಾಡಳಿತದ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕೋರಿದರು.
ತಾಲ್ಲೂಕು ಮಟ್ಟದಲ್ಲಿ ನಗರ ವ್ಯಾಪ್ತಿಗೆ ತಹಶೀಲ್ದಾರರು ಹಾಗೂ ಗ್ರಾಮೀಣ ಭಾಗದಲ್ಲಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಸಮೀಕ್ಷೆಯಿಂದ ಯಾವುದೇ ಕುಟುಂಬ, ವ್ಯಕ್ತಿ ಕೈಬಿಟ್ಟು ಹೋಗದಂತೆ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಗರ ವ್ಯಾಪ್ತಿಗೆ ತಹಶೀಲ್ದಾರ್, ಗ್ರಾಮ ವ್ಯಾಪಿಯಲ್ಲಿ ಇಒ ನೋಡಲ್ ಅಧಿಕಾರಿ ಸೆ.5ರೊಳಗೆ ಬೆಸ್ಕಾಂನವರು ಸಿಕ್ಟರ್ ಅಂಟಿಸುವುದು ಪೂರ್ಣಗೊಳಿಸಿ 150 ಮನೆಗಳಿಗೆ ಒಬ್ಬ ಗಣಿತಿದಾರರ ನೇಮಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.