ADVERTISEMENT

ಪ್ರಗತಿಪಥದಲ್ಲಿ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ

ದಾನಿಗಳಿಂದ ಉಚಿತ ಬ್ಯಾಗ್‌, ನೋಟ್ ಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿ ವಿತರಣೆ

ಎಂ.ರಾಮಕೃಷ್ಣಪ್ಪ
Published 6 ಏಪ್ರಿಲ್ 2024, 7:03 IST
Last Updated 6 ಏಪ್ರಿಲ್ 2024, 7:03 IST
ಚಿಂತಾಮಣಿಯ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ
ಚಿಂತಾಮಣಿಯ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ   

ಚಿಂತಾಮಣಿ: ಸರ್ಕಾರ ಶಿಕ್ಷಣದ ಕ್ಷೇತ್ರದ ಪ್ರಗತಿಗೆ ಸಾಕಷ್ಟು ಯೋಜನೆ ರೂಪಿಸಿ ಅನುದಾನ ನೀಡುತ್ತಿದೆ. ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿವೆ. ನಗರದ ಸೊಣ್ಣಶೆಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಲವಾರು ಕೊರತೆಗಳ ನಡುವೆಯೂ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ.

ನಗರದ ಪ್ರದೇಶದಲ್ಲಿ ಶಾಲೆಗಳಿಗೆ ಜಾಗದ ಕೊರತೆ ಸಾಮಾನ್ಯವಾಗಿರುತ್ತದೆ. ಸರ್ಕಾರಿ ಪ್ರೌಢಶಾಲೆ ತನ್ನ ಇತಿಮಿತಿಯಲ್ಲಿ ಬಯಲುಸೀಮೆಯ ಒಣಪರಿಸರದ ಮಧ್ಯೆ ಕಣ್ಣಿಗೆ ಮುದ ನೀಡುವ ರೀತಿ ಪ್ರವೇಶ ದ್ವಾರದ ಆವರಣದಲ್ಲಿ ಹಸಿರು ಮರ ಕಾಣುತ್ತವೆ.

ಒಂದೇ ಕಟ್ಟಡದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಒಂದರಿಂದ 10ನೇ ತರಗತಿವರೆಗೆ 245 ಮಕ್ಕಳ ದಾಖಲಾತಿ ಇದೆ. ಪ್ರಾಥಮಿಕ ವಿಭಾಗದಲ್ಲಿ 8 ಮತ್ತು ಪ್ರೌಢಶಾಲಾ ವಿಭಾಗದಲ್ಲಿ 8 ಸೇರಿ ಒಟ್ಟು 16 ಜನ ಶಿಕ್ಷಕರಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಲಕ್ಷ್ಮಿದೇವಮ್ಮ ಮತ್ತು ಪ್ರಾಥಮಿಕ ಶಾಲಾ ವಿಭಾಗಕ್ಕೆ ಡಿ.ಎಂ.ವೆಂಕಟರಮಣಪ್ಪ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಗುಂಪು ಅಧ್ಯಯನ, ರಸಪ್ರಶ್ನೆ ಕಾರ್ಯಕ್ರಮ, ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿ, ದತ್ತು ಯೋಜನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ವಿಶೇಷ ಗಮನ ಹರಿಸುವುದು, ಘಟಕ ಪರೀಕ್ಷೆ, ಲಘು ಪರೀಕ್ಷೆ, ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಹಲವಾರು ದಾನಿಗಳನ್ನು ಸಂಪರ್ಕಿಸಿ ಉಚಿತ ಬ್ಯಾಗ್‌, ನೋಟ್ ಪುಸ್ತಕ, ಸಮವಸ್ತ್ರ ಹಾಗೂ ಲೇಖನ ಸಾಮಗ್ರಿ ವಿತರಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ಮಾರ್ಗದರ್ಶನ, ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣದ ಕುರಿತು ಅರಿವು ಮೂಡಿಸಲಾಗುತ್ತದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ.

2023-24ನೇ ಸಾಲಿನಲ್ಲಿ ಶೈಕ್ಷಣಿಕ ಅಧ್ಯಯನದ ಅಂಗವಾಗಿ ಗೌರಿಬಿದನೂರು ತಾಲ್ಲೂಕಿನ ಹೊಸೂರು ಬಳಿಯ ಡಾ.ಎಚ್.ಎನ್.ವಿಜ್ಞಾನ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿತ್ತು. ವಿದ್ಯಾರ್ಥಿಗಳು ಅಲ್ಲಿನ ವೈಜ್ಞಾನಿಕ ಪರಿಸರ, ಪರಿಕರಣಗಳನ್ನು ನೋಡಿ ವಿಜ್ಞಾನ ಬಗ್ಗೆ ಹೆಚ್ಚಿನ ಆಸಕ್ತಿ  ವಹಿಸಿದರು. ತಾಲ್ಲೂಕಿನ ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಕೃಷಿ ಚಟುವಟಿಕೆಗಳ ಕುರಿತು ಪರಿಚಯಿಸಲಾಯಿತು. ವಿಧಾನ ಸೌಧಕ್ಕೂ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದೆವು ಎಂದು ಸಹ ಶಿಕ್ಷಕ ಪ್ರಕಾಶರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

ಸರ್ಕಾರಿ ಶಾಲಾ ಅಭಿವೃದ್ಧಿಗಾಗಿ ಅನೇಕ ದಾನಿಗಳು ಕೈಜೋಡಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗಳ ಮಕ್ಕಳಂತೆ ಕಾಣಬೇಕು ಎಂದು ಶಾಲೆಯ ಎಲ್ಲ ಮಕ್ಕಳಿಗೆ ಶಿಕ್ಷಕ ನಾಗರಾಜ್ ಟೈ, ಬೆಲ್ಟ್ ಮತ್ತು ಐ.ಡಿ.ಕಾರ್ಡ್ ಕೊಡುಗೆಯಾಗಿ ನೀಡಿದ್ದಾರೆ. ಶಾಲೆಗೆ ಅಗತ್ಯವಾದ ಬ್ಯಾಂಡ್ ಸೆಟ್, ಬ್ಯಾಂಡ್ ಸೆಟ್ ಸಮವಸ್ತ್ರವನ್ನು, ಸ್ಮಾರ್ಟ್ ಕ್ಲಾಸ್ ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಚಿಂತಾಮಣಿಯ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆ ಅಂಗವಾಗಿ ಡಾ.ಎಚ್.ಎನ್ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿರುವುದು

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯ 1 ರಿಂದ 10 ನೇ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಸಮವಸ್ತ್ರ ನೀಡುವುದಾಗಿ ಬೆಂಗಳೂರಿನ ಬಾಗಲೂರು ಕ್ರಾಸ್ ನಿವಾಸಿ ತಾತಾ ರಾಮಕೃಷ್ಣನ್ ವಾಗ್ದಾನ ಮಾಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೊಣ್ಣಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು

ಶಾಲೆಯಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಕಾರ್ಯಕ್ರಮಗಳ ಜತೆಗೆ ಯೋಗ ದಿನಾಚರಣೆ, ಗಣಿತ ದಿನಾಚರಣೆ, ವಿಜ್ಞಾನ ದಿನಾಚರಣೆ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಗರಸಭೆಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪ್ರಾಥಮಿಕ ಶಾಲಾ ವಿಭಾಗದ ಶೌಚಾಲಯ ಸುಸ್ಥಿತಿಯಲ್ಲಿದೆ.
ಆದರೆ ಪ್ರೌಢಶಾಲಾ ವಿಭಾಗದ ಶೌಚಾಲಯ ಶಿಥಿಲಗೊಂಡಿದೆ. ಶೌಚಾಲಯದ ಕೊರತೆಯಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಶೌಚಾಲಯವನ್ನು ದುರಸ್ತಿಗೊಳಿಸಬೇಕು ಎಂದು ಪೋಷಕರೊಬ್ಬರು ಹೇಳಿದರು.

ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಚೆನ್ನಾಗಿ ಬೋಧಿಸುತ್ತಾರೆ. ಸಮೀಪದಲ್ಲೇ ಸರ್ಕಾರಿ ಶಾಲೆ ಶಾಲೆ ಇರುವುದು ಬಡವರಿಗೆ ಅನುಕೂಲವಾಗಿದೆ
-ಎಸ್.ಮಂಜೇಶ್ ವಿದ್ಯಾರ್ಥಿ.
ಸರ್ಕಾರಿ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದೆ. ಶಾಲೆಗೆ ಹೋಗಲು ಕಾತುರರಾಗಿರುತ್ತೇವೆ. ಶಾಲೆಯ ಸಮವಸ್ತ್ರ ತೊಡಲು ಖುಷಿಯಾಗುತ್ತದೆ. ಶಿಸ್ತು ಸಮಯಪಾಲನೆ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ
- ಹೇಮಲತಾ ವಿದ್ಯಾರ್ಥಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.