ADVERTISEMENT

ಶಿಡ್ಲಘಟ್ಟ | ಕುಡಿತ ಬಿಟ್ಟೆ, ಕುರಿಗಳ ತಂದೆ: ವ್ಯಸನದಿಂದ ಪಾರಾದ ರೈತನ ಹೊಸ ಜೀವನ

ಮದ್ಯದಿಂದ ದೂರವಾಗಿ ಕುರಿ ಸಾಕಲು ಮುಂದಾದ ಚಿಕ್ಕಮುನಿಯಪ್ಪ

ಡಿ.ಜಿ.ಮಲ್ಲಿಕಾರ್ಜುನ
Published 6 ಮೇ 2020, 4:29 IST
Last Updated 6 ಮೇ 2020, 4:29 IST
ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ ಅವರು ಕುರಿಗಳಿಗೆ ಸೊಪ್ಪು ತಿನ್ನಿಸುತ್ತಿರುವುದು
ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ ಅವರು ಕುರಿಗಳಿಗೆ ಸೊಪ್ಪು ತಿನ್ನಿಸುತ್ತಿರುವುದು   

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ ಲಾಕ್‌ಡೌನ್‌ನಿಂದಾಗಿ ಕುಡಿತ ಬಿಟ್ಟಿದ್ದಾರೆ. ಉಳಿಸಿಟ್ಟ ಹಣದಲ್ಲಿ ಒಂದು ಕುರಿ ಮತ್ತು ಕುರಿಮರಿಯನ್ನು ಖರೀದಿಸಿತಂದಿದ್ದಾರೆ.

ಎರಡು ದಿನಗಳಿಂದ ಕುರಿಗಳಿಗೆ ಮೇವು ತಿನ್ನಿಸುತ್ತಾ ಅದರ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಚಿಕ್ಕಮುನಿಯಪ್ಪ. ‘ಎಣ್ಣೆ ಸಿಗದಂತಾದೊಡನೆ ಕೈಕಾಲು ಆಡಲಿಲ್ಲ. ಕೈಗಳು ಅದುರತೊಡಗಿದವು. ಏನು ಮಾಡಲೂ ತೋಚಲಿಲ್ಲ. ಕೂಲಿ ಕೆಲಸಕ್ಕೆ ಹೋಗತೊಡಗಿದೆ. ಮೊದಲಾದರೆ ಸಂಜೆಯಾದೊಡನೆ ಕುಡಿತಕ್ಕೆ ದುಡಿದ ಹಣವೆಲ್ಲಾ ಹೋಗುತ್ತಿತ್ತು. ಅದಿಲ್ಲದ್ದರಿಂದ ದುಡ್ಡೆಲ್ಲಾ ಜಮೆಯಾಗತೊಡಗಿತು ಎಂದು ಹೇಳಿದರು.

ಮೊನ್ನೆ ಹೋಗಿ ₹6,300 ಕೊಟ್ಟು ಒಂದು ಕುರಿ ಮತ್ತು ಒಂದು ಕುರಿಮರಿಯನ್ನು ತಂದೆ. ಅವುಗಳನ್ನು ಪೋಷಣೆ ಮಾಡುತ್ತಿರುವಾಗ ಒಂದು ರೀತಿಯ ಬಾಂಧವ್ಯ ಮೂಡಿದೆ. ಇನ್ನು ಮುಂದೆ ನಾನು ಕುಡಿಯುವುದಿಲ್ಲ. ಕುರಿಗಳನ್ನೇ ಸಾಕಿ, ಹತ್ತಾರು ಕುರಿಗಳನ್ನು ಅಭಿವೃದ್ಧಿ ಮಾಡಿ ಜೀವನ ಸಾಗಿಸುತ್ತೇನೆ. ಅದೇ ನನ್ನ ಗುರಿ” ಎಂದು ಚಿಕ್ಕಮುನಿಯಪ್ಪ ಹೇಳಿದರು.

ADVERTISEMENT

ಒಂದೂವರೆ ತಿಂಗಳಿನಿಂದ ಮದ್ಯ ಮಾರಾಟ ಇಲ್ಲದ ಕಾರಣ ಗ್ರಾಮಗಳಲ್ಲಿ ನೆಮ್ಮದಿ, ಶಾಂತಿ ಇತ್ತು. ಕುಡಿದು ಗಲಾಟೆ, ಜಗಳ ಮಾಡುತ್ತಿದ್ದವರು, ಸಾಲ ಕೇಳುವವರು ಇಲ್ಲವಾಗಿದ್ದರು. ಕುಡಿತದ ಚಟವಿದ್ದವರು ಮೂರು ಹೊತ್ತೂ ಚೆನ್ನಾಗಿ ತಿನ್ನುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಂಡಿದ್ದರು. ಕೌಟುಂಬಿಕ ವಾತಾವರಣ ಸುಧಾರಿಸಿತ್ತು. ಕುಡಿತದ ಚಟವಿದ್ದ ಚಿಕ್ಕಮುನಿಯಪ್ಪ, ಉಳಿಸಿದ ಹಣದಲ್ಲಿ ಕುರಿ ಸಾಕಣಿಕೆದಾರನಾದುದು ಸಕಾರಾತ್ಮಕ ಬೆಳವಣಿಗೆ. ಇಂಥಹವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.