ಶಿಡ್ಲಘಟ್ಟ: ಬೀದಿ ನಾಯಿಗಳ ದಾಳಿ ಮತ್ತೆ ಮುಂದುವರೆದಿದೆ. ನಗರದ ದಿಬ್ಬೂರಹಳ್ಳಿ ರಸ್ತೆಯ ಚರ್ಚ್ ಸಮೀಪ ಎಸ್‌ಎಲ್‌ಎನ್ ಲೇಔಟ್‌ನ ಫಯಾಜ್ ಎನ್ನುವವರ 5 ವರ್ಷದ ಎಲ್‌ಕೆಜಿ ಓದುತ್ತಿರುವ ಝವೇರಿ ಸುಲ್ತಾನಾಳ ಮೇಲೆ ಶುಕ್ರವಾರ ಬೀದಿನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ.
ಬೀದಿನಾಯಿಗಳನ್ನು ನಿಯಂತ್ರಿಸದ ನಗರಸಭೆ ವಿರುದ್ಧ ನಾಗರಿಕರ ಆಕ್ರೋಶ ಮುಗಿಲು ಮುಟ್ಟಿದೆ. ನಗರದ ನೆಹರೂ ಕ್ರೀಡಾಂಗಣದಲ್ಲಿ ಆಟ ಆಡುತ್ತಿದ್ದ ಬಾಲಕನ ಮೇಲೆ ಸೋಮವಾರ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಘಟನೆ ಜನರ ಮನಸಲ್ಲಿ ಮಾಸುವ ಮುನ್ನವೇ ಮತ್ತೆ ಬೀದಿ ನಾಯಿಗಳ ದಾಳಿ ಮುಂದುವರೆದಿದೆ.
ಶಾಲೆಯಿಂದ ಮನೆಗೆ ಬಂದ ಝವೇರಿ ಸುಲ್ತಾನಾ ಬಿಸ್ಕತ್ ತರಲೆಂದು ಅಂಗಡಿಗೆ ಹೋಗಿದ್ದು ಆಗ ದಾಳಿ ನಡೆಸಿದ ಬೀದಿ ನಾಯಿಗಳು ಆಕೆಯನ್ನು ಕಚ್ಚಿ ಗಾಯಗೊಳಿಸಿವೆ. ತಕ್ಷಣವೇ ಅಲ್ಲಿದ್ದವರು ಮಗುವನ್ನು ನಾಯಿಗಳಿಂದ ರಕ್ಷಿಸಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೀದಿನಾಯಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಬಾಲಕಿಯ ಕುಟುಂಬದವರು, ಅಕ್ಕಪಕ್ಕದ ನೂರಾರು ಜನರು ಸರ್ಕಾರಿ ಆಸ್ಪತ್ರೆ ಮುಂದೆ ಜಮಾಯಿಸಿದ್ದು ಬೀದಿನಾಯಿಗಳನ್ನು ನಿಯಂತ್ರಿಸದ ನಗರಸಭೆ ಆಡಳಿತ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ನಗರಸಭೆ ಸದಸ್ಯ ಅನಿಲ್ ಕುಮಾರ್, ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ರಮೇಶ್ ಇನ್ನಿತರರು ಆಗಮಿಸಿ ಮಗುವಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಪೋಷಕರನ್ನು ಹಾಗೂ ಅಲ್ಲಿದ್ದವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರಾದರೂ ಅಲ್ಲಿದ್ದವರ ಆಕ್ರೋಶದ ಕಟ್ಟೆ ಒಡೆದಿತ್ತು.
ಈಗಾಗಲೆ ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ನಿಯಂತ್ರಿಸಲು ಅಗತ್ಯ ಕ್ರಮಗಳಿಗೆ ಟೆಂಡರ್ ಕರೆದಿದ್ದು ಶನಿವಾರದಿಂದಲೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹೇಳಿ ಸಮಾಧಾನ ಮಾಡುವ ಪ್ರಯತ್ನ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.