ADVERTISEMENT

ಬಾಗೇಪಲ್ಲಿ | ಸೌಲಭ್ಯ ಕಲ್ಪಿಸದ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:35 IST
Last Updated 22 ನವೆಂಬರ್ 2025, 6:35 IST
ಬಾಗೇಪಲ್ಲಿ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂದೆ ಎಸ್‍ಎಫ್‍ಐ ಮುಖಂಡರು, ತಾಲ್ಲೂಕು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟರಾಮಪ್ಪ ಅವರಿಗೆ ಮನವಿ ಸಲ್ಲಿಸಿದರು
ಬಾಗೇಪಲ್ಲಿ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂದೆ ಎಸ್‍ಎಫ್‍ಐ ಮುಖಂಡರು, ತಾಲ್ಲೂಕು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟರಾಮಪ್ಪ ಅವರಿಗೆ ಮನವಿ ಸಲ್ಲಿಸಿದರು   

ಬಾಗೇಪಲ್ಲಿ: ಬಾಲಕರ ಸರ್ಕಾರಿ ಶಾಲೆ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿಲ್ಲ. ಮಧ್ಯಾಹ್ನ ಬಿಸಿಯೂಟ ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಎಸ್‍ಎಫ್‍ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಮುಖಂಡರು, ವಿದ್ಯಾರ್ಥಿಗಳು ಡಿವಿಜಿ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.

ಎಸ್‍ಎಫ್‍ಐ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಸೋಮಶೇಖರ ಮಾತನಾಡಿ, ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಇತಿಹಾಸ ಇದೆ. ಅನೇಕ ಹಿರಿಯ ಶಿಕ್ಷಕ, ಶಿಕ್ಷಕಿಯರು ಸೇವೆ ಸಲ್ಲಿಸಿದ್ದಾರೆ. ಇಂತಹಾ ಶಾಲೆಗೆ ಕಳಂಕ ತಂದಿರುವುದು ಶೋಚನೀಯ. ಶಾಲೆಯಲ್ಲಿ 280 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ವಿ.ವೆಂಕಟೇಶ್ ಸರ್ಕಾರದ ಸೌಲಭ್ಯ ಕಲ್ಪಿಸಿಲ್ಲ. ಮಧ್ಯಾಹ್ನದ ಬಿಸಿಯೂಟ ಮಕ್ಕಳಿಗೆ ಸಮರ್ಪಕವಾಗಿ ವಿತರಣೆ ಮಾಡಿಸುತ್ತಿಲ್ಲ. ಪಡಿತರ ವಸ್ತುಗಳನ್ನು ಹೊರಗೆ ಸಾಗಿಸುತ್ತಿದ್ದಾರೆ. ಬಾಳೆಹಣ್ಣು ಹಾಗೂ ಮೊಟ್ಟೆಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಸರ್ಕಾರದ ಯೋಜನೆಗಳನ್ನು ತಲುಪಿಸುವುದು, ಗುಣಮಟ್ಟದ ಶಿಕ್ಷಣ ಕಲ್ಪಿಸುವುದು ಮುಖ್ಯಶಿಕ್ಷಕರ ಕೆಲಸ. ಮಕ್ಕಳು ಇಲ್ಲದೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಂತದಲ್ಲಿ ಇದೆ. ಆದರೆ ವಿದ್ಯಾರ್ಥಿಗಳು ಇದ್ದರೂ, ಸರ್ಕಾರದಿಂದ ವಿತರಣೆ ಆಗಿರುವ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸದ ಪ್ರಭಾರ ಮುಖ್ಯಶಿಕ್ಷಕನ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟರಾಮಪ್ಪ ಆಗಮಿಸಿ ಸಮಸ್ಯೆ ಆಲಿಸಿದರು. ಪ್ರೌಢಶಾಲೆಗೆ ಭೇಟಿ ಮಾಡಿ, ಪರಿಶೀಲನೆ ಮಾಡಲಾಗುವುದು. ಮುಖ್ಯಶಿಕ್ಷಕರ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಬಾಲಕರ ಸರ್ಕಾರಿ ಪ್ರೌಢಶಾಲೆಗೆ ತಾಲ್ಲೂಕು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟರಾಮಪ್ಪ, ಶಿಕ್ಷಣ ಅಧಿಕಾರಿ ಎನ್.ಶಿವಪ್ಪ, ಪಿ.ಎನ್.ನಾರಾಯಣಸ್ವಾಮಿ, ಮಂಜುನಾಥ್ ಭೇಟಿ ಮಾಡಿದರು. ಅಡುಗೆಕೋಣೆಯಲ್ಲಿ ಇದ್ದ ಪಡಿತರ ವಸ್ತುಗಳನ್ನು ಪರಿಶೀಲನೆ ಮಾಡಿದರು. ಮುಖ್ಯಶಿಕ್ಷಕರ ಜತೆ ಚರ್ಚೆ ಮಾಡಿ, ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಬೇಕು ಎಂದು ಎಚ್ಚರಿಕೆ ನೀಡಿದರು.

ಎಸ್‍ಎಫ್‍ಐ ತಾಲ್ಲೂಕು ಸಮಿತಿ ಜಿ.ಸೋಮಶೇಖರ, ಡಿವೈಎಫ್‍ಐ ಮುಖಂಡ ಇಮ್ರಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.