ADVERTISEMENT

ಬಾಗೇಪಲ್ಲಿ | ಬಸ್ ಹತ್ತಲು ಹರಸಾಹಸ: ಫುಟ್‌ಬೋರ್ಡ್‌ನಲ್ಲೇ ನಿಂತು ಪ್ರಯಾಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:48 IST
Last Updated 6 ಜನವರಿ 2026, 6:48 IST
ಬಾಗೇಪಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳಲು ಬಸ್ ಹತ್ತಲು ಹರಸಾಹಸ ಪಡುತ್ತಿರುವುದು
ಬಾಗೇಪಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳಲು ಬಸ್ ಹತ್ತಲು ಹರಸಾಹಸ ಪಡುತ್ತಿರುವುದು   

ಬಾಗೇಪಲ್ಲಿ: ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಗೂಳೂರು ಕಡೆಗೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ ಹತ್ತಲು ಪ್ರತಿನಿತ್ಯವೂ ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹರಸಾಹಸ ಪಡುವ ಅನಿವಾರ್ಯತೆ ಎದುರಾಗಿದೆ. ಹಲವು ಸಲ ಪ್ರಯಾಣಿಕರ ದಟ್ಟಣೆಯಿಂದ ವಿದ್ಯಾರ್ಥಿಗಳು ಬಸ್‌ಗಳ ಫುಟ್‌ಡೋರ್‌ನಲ್ಲೇ ನಿಂತು ಪ್ರಯಾಣಿಸುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. 

ಗ್ರಾಮಗಳಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‍ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿಯೇ ಇರುತ್ತವೆ. ಆದರೆ ಬೆಳಗ್ಗೆ, ಸಂಜೆ ವೇಳೆಗೆ ಬಸ್‌ಗಳ ಸಂಖ್ಯೆ ಕಡಿಮೆ ಇರುತ್ತದೆ. ಇದರಿಂದ ಗ್ರಾಮಗಳಿಂದ ಪಟ್ಟಣದ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಕೆಲಸ, ಕಾರ್ಯಗಳಿಗಾಗಿ ತೆರಳುವ ಜನರು ಇದೇ ಬಸ್ಸುಗಳಲ್ಲಿ ನೂಕುನುಗ್ಗಲಿನಲ್ಲಿ ತೆರಳುವಂತಾಗಿದೆ. 

ಬೆಂಗಳೂರು, ಚಿಕ್ಕಬಳ್ಳಾಪುರ, ನೆರೆಯ ಆಂಧ್ರಪ್ರದೇಶದ ಕದಿರಿ, ಪುಲಿವೆಂದುಲ, ಪುಟ್ಟಪರ್ತಿ ಸೇರಿದಂತೆ ವಿವಿಧ ಕಡೆಗಳ ಮಾರ್ಗಗಳಿಗೆ ಸಾರಿಗೆ ಬಸ್‍ಗಳ ಸಂಚಾರ ಹೆಚ್ಚಾಗಿದೆ. ಆದರೆ, ಚಿಂತಾಮಣಿ, ಚೇಳೂರು, ಗೂಳೂರು, ತಿಮ್ಮಂಪಲ್ಲಿ, ಬಿಳ್ಳೂರು ಸೇರಿದಂತೆ ವಿವಿಧ ಕಡೆಗಳಿಗೆ ಹೇಳಿಕೊಳ್ಳುವಷ್ಟು ಸಾರಿಗೆ ಬಸ್ ಸೇವೆಗಳು ಇಲ್ಲ. ಇದರಿಂದ ಬೆಳಗ್ಗೆ ಮತ್ತು ಸಂಜೆ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಸ್‍ಗಳಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ.

ADVERTISEMENT

ದೂರದ ಗ್ರಾಮಗಳ ಹೆಚ್ಚು ಪ್ರಯಾಣಿಕರನ್ನು ಬಸ್‍ಗಳಲ್ಲಿ ಹತ್ತಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಟ್ಟಣಕ್ಕೆ ಹತ್ತಿರುವಿರುವ ಗ್ರಾಮಗಳ ಕ್ರಾಸ್‌ಗಳಲ್ಲಿ ಬಸ್ ಚಾಲಕರು ಮತ್ತು ನಿರ್ವಾಹಕರು ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದ ಬೆಳಗ್ಗೆ ಶಾಲಾ, ಕಾಲೇಜುಗಳಿಗೆ ಹೋಗಲು ಮತ್ತು ಸಂಜೆ ಶಾಲಾ, ಕಾಲೇಜುಗಳಿಂದ ಮನೆಗೆ ಬರಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ. 

ಬೆಳಗ್ಗೆ, ಸಂಜೆ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಸಾರಿಗೆ ಬಸ್‍ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಅಧಿಕಾರಿಗಳು ಖುದ್ದು ಭೇಟಿ ಮಾಡಿ ಈ ಬಗ್ಗೆ ಪರಿಶೀಲಿಸಬೇಕು. ಡಾ.ಎಚ್.ಎನ್. ವೃತ್ತದಲ್ಲಿ ಸಹ ಬಸ್‍ಗಳಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‍ಗಳಲ್ಲಿ ಹತ್ತಲು ಅವಕಾಶ ಕಲ್ಪಿಸಬೇಕು ಎಂದು ಕಾಲೇಜಿನ ವಿದ್ಯಾರ್ಥಿ ಪ್ರವೀಣ್‍ಕುಮಾರ್ ತಿಳಿಸಿದ್ದಾರೆ.

ಬಸ್ ಹತ್ತುವ, ಇಳಿಯುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ಅಫಘಾತಗಳು ನಡೆದರೆ, ಅಮೂಲ್ಯವಾದ ಪ್ರಾಣಹಾನಿ ಆಗಲಿದೆ. ಪ್ರಾಣಹಾನಿ ಆಗುವ ಮುನ್ನಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಶಾಲಾ ಪೋಷಕ ಶ್ರೀರಾಮಪ್ಪ ಮನವಿ ಮಾಡಿದ್ದಾರೆ.

ಫುಟ್‌ಬೋರ್ಡ್ ಪ್ರಯಾಣ ಅನಿವಾರ್ಯ

ಪಟ್ಟಣದ ಡಾ.ಎಚ್.ಎನ್. ವೃತ್ತವು ಚಿಂತಾಮಣಿ ಪಾತಪಾಳ್ಯ ಚೇಳೂರು ಕಡೆಗಳಿಗೆ ಸಂಪರ್ಕಿಸುತ್ತದೆ. ಗ್ರಾಮಗಳಿಗೆ ಸಂಚರಿಸಲು ಇದೇ ವೃತ್ತದಲ್ಲಿ ಪ್ರಯಾಣಿಕರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ಕಾಯುತ್ತಾರೆ. ಆದರೆ ಬಸ್‌ ನಿಲ್ದಾಣದಲ್ಲೇ ಬಸ್‌ಗಳಲ್ಲಿ ಪ್ರಯಾಣಿಕರು ಹತ್ತಿಕೊಳ್ಳುತ್ತಾರೆ. ವೃತ್ತದಲ್ಲಿ ಕಾಯುವ ಪ್ರಯಾಣಿಕರು ವಿದ್ಯಾರ್ಥಿಗಳು ಬಸ್‍ಗಳಲ್ಲಿ ಹತ್ತಲು ಆಗುತ್ತಿಲ್ಲ. ಇದರಿಂದಾಗಿ ಇಲ್ಲಿ ಹತ್ತುವವರು ಅನಿವಾರ್ಯವಾಗಿ ಫುಟ್‌ಬೋರ್ಡ್‌ನಲ್ಲಿ ನಿಂತು ಸಂಚರಿಸುವ ಆನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಶಾಲಾ ಮಕ್ಕಳ ಪೋಷಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.